20 ಟಿಎಂಸಿ ಸಂಸದರು, 50 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ; ಬಿಜೆಪಿ ಸ್ಫೋಟಕ ಹೇಳಿಕೆ

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ಬಿಜೆಪಿ ಸಂಸದರೊಬ್ಬರು ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕನಿಷ್ಠ 50 ಶಾಸಕರು ಮತ್ತು 20 ಸಂಸದರು ಶೀಘ್ರದಲ್ಲೇ ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬಿಕ್ಕಟ್ಟು ಮತ್ತು ಗೊಂದಲಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಟಿಎಂಸಿ ಪಕ್ಷದ ಉನ್ನತ ನಾಯಕತ್ವದ ಸರ್ವಾಧಿಕಾರಿ ಧೋರಣೆ ಹಾಗೂ ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಆರೋಪಗಳಿಂದ ಬೇಸತ್ತು ಟಿಎಂಸಿ ನಾಯಕರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ನಾಯಕರು ವಾದಿಸಿದ್ದಾರೆ.

20 ಟಿಎಂಸಿ ಸಂಸದರು, 50 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ; ಬಿಜೆಪಿ ಸ್ಫೋಟಕ ಹೇಳಿಕೆ
Mamata Banerjee And Suvendu Adhikari
Image Credit source: PTI

Updated on: May 27, 2026 | 3:44 PM

ಕೊಲ್ಕತ್ತಾ, ಮೇ 27: ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಸುಮಾರು 20 ಸಂಸದರು ಮತ್ತು 50 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿಯ ಹೈಕಮಾಂಡ್ ಅವರ ಸೇರ್ಪಡೆಗೆ ಅನುಮತಿ ನೀಡಿದರೆ ಪಕ್ಷ ಬದಲಾಯಿಸಲು ಸಿದ್ಧರಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಸೌಮಿತ್ರ ಖಾನ್ ಹೇಳಿದ್ದಾರೆ. ಚುನಾವಣೆಯ ಬಳಿಕ ಹಲವಾರು ಟಿಎಂಸಿ ಸಂಸದರು ಪಕ್ಷದೊಳಗೆ ಅತೃಪ್ತರಾಗಿದ್ದಾರೆ. ಅವರು ರಹಸ್ಯವಾಗಿ ಬಿಜೆಪಿ ಪಾಳಯದ ನಾಯಕರೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ಸೌಮಿತ್ರ ಖಾನ್ ಆರೋಪಿಸಿದ್ದಾರೆ.

ಪ್ರಮುಖ ಮುಖ್ಯಾಂಶಗಳು:

  • ಟಿಎಂಸಿಯ 50 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದ ಬಿಜೆಪಿ
  • ಚುನಾವಣೆಯಲ್ಲಿ ಸೋತ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್
  • ಬಂಗಾಳದಲ್ಲಿ ಸಂಪೂರ್ಣ ಪತನವಾಗುತ್ತಾ ಟಿಎಂಸಿ?

“20 ಟಿಎಂಸಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಬಯಸಿದರೆ, ಮುಂದಿನ ಕೆಲವು ದಿನಗಳಲ್ಲಿ ಇಡೀ ಟಿಎಂಸಿ ಅಂತ್ಯಗೊಳ್ಳುತ್ತದೆ” ಎಂದು ಸೌಮಿತ್ರ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ, ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾದ ಟಿಎಂಸಿ ಸಂಸದರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಟಿಎಂಸಿ ಗೂಂಡಾಗಳ ದೌರ್ಜನ್ಯವನ್ನು ಸಹಿಸುವುದಿಲ್ಲ; ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ 42 ಸಂಸದರಲ್ಲಿ ಟಿಎಂಸಿ ಪ್ರಸ್ತುತ ಲೋಕಸಭೆಯಲ್ಲಿ 29 ಸಂಸದರನ್ನು ಹೊಂದಿದೆ. ಬಿಜೆಪಿ 12 ಮತ್ತು ಕಾಂಗ್ರೆಸ್ ಒಬ್ಬರು ಸಂಸದರನ್ನು ಹೊಂದಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿ ಅನರ್ಹತೆಯಿಂದ ಪಾರಾಗಲು ಸಂಸದೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಒಟ್ಟಾಗಿ ಪಕ್ಷ ಬದಲಾಯಿಸಬೇಕಾಗುತ್ತದೆ.


ಟಿಎಂಸಿ ನಿರಾಕರಣೆ:

ಸೌಮಿತ್ರ ಖಾನ್ ಅವರ ಹೇಳಿಕೆಗಳನ್ನು ನಿರಾಕರಿಸಿದ ಹಿರಿಯ ಟಿಎಂಸಿ ಸಂಸದ ಸೌಗತ ರಾಯ್ ಈ ವರದಿಗಳನ್ನು “ಆಧಾರರಹಿತ” ಎಂದು ಟೀಕಿಸಿದ್ದಾರೆ. 2021ರ ವಿಧಾನಸಭಾ ಚುನಾವಣೆಗೆ ಮುನ್ನ ಟಿಎಂಸಿಯ ಹಲವಾರು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಉಳಿಸಿಕೊಂಡ ನಂತರ ಅನೇಕರು ಮತ್ತೆ ಪಕ್ಷಕ್ಕೆ ಮರಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us