ವಕ್ಫ್ ಮಸೂದೆಯ ಸಮಿತಿಯ ಮುಖ್ಯಸ್ಥರಾಗಿ ಬಿಜೆಪಿ ನಾಯಕ ಜಗದಾಂಬಿಕ ಪಾಲ್ ನೇಮಕ
ಕೇಂದ್ರ ಸರ್ಕಾರವು ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ, 2024 ಅನ್ನು ಮಂಡಿಸಿತ್ತು. ಈ ಕುರಿತಾದ ಸಂಕ್ಷಿಪ್ತ ಚರ್ಚೆಯ ನಂತರ ಈ ಮಸೂದೆಯನ್ನು 31 ಸದಸ್ಯರ ಜೆಪಿಸಿಗೆ ಉಲ್ಲೇಖಿಸಲಾಯಿತು.
ನವದೆಹಲಿ: ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷರಾಗಿರುತ್ತಾರೆ. ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಸದನವು ಈ ಮಸೂದೆಯ ಉದ್ದೇಶಿತ ತಿದ್ದುಪಡಿಗಳ ಕುರಿತು ಸಂಕ್ಷಿಪ್ತ ಚರ್ಚೆಯನ್ನು ನಡೆಸಿತು. ಹೆಚ್ಚಿನ ಪರಿಶೀಲನೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು.
8.5 ಲಕ್ಷ ಆಸ್ತಿಗಳನ್ನು ಒಳಗೊಂಡಿರುವ ವಕ್ಫ್ ಕಾಯ್ದೆಯಲ್ಲಿ ಬದಲಾವಣೆ ಮಾಡಲು ಈ ಮಸೂದೆ ಶಿಫಾರಸು ಮಾಡಿದೆ. ಬಿಜೆಪಿಯ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾ ದಳ ಯುನೈಟೆಡ್ (ಜೆಡಿಯು) ಮಸೂದೆಗೆ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಎಐಎಂಐಎಂ ಸೇರಿದಂತೆ ಪ್ರತಿಪಕ್ಷಗಳು ಇದನ್ನು ಬಲವಾಗಿ ವಿರೋಧಿಸಿದವು. ಈ ಬಗ್ಗೆ ಇದೀಗ ತಾತ್ಕಾಲಿಕ ಜಂಟಿ ಸಂಸದೀಯ ಸಮಿತಿಯನ್ನು 31 ಸದಸ್ಯರೊಂದಿಗೆ ರಚಿಸಲಾಗಿದೆ. 21 ಸದಸ್ಯರು ಲೋಕಸಭೆಯಿಂದ ಮತ್ತು 10 ಸದಸ್ಯರು ರಾಜ್ಯಸಭೆಯಿಂದ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ‘ಭಾರತೀಯ ಜಮೀನ್ ಪಾರ್ಟಿ’; ಸದನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ
ಜೆಪಿಸಿಯಲ್ಲಿ ಲೋಕಸಭಾ ಸದಸ್ಯರು:
ಲೋಕಸಭೆಯಲ್ಲಿ ಜಂಟಿ ಸಂಸದೀಯ ಸಮಿತಿಯ 12 ಸದಸ್ಯರು ಆಡಳಿತಾರೂಢ ಎನ್‌ಡಿಎಯಿಂದ ಬಂದಿದ್ದು, ಅವರಲ್ಲಿ 8 ಮಂದಿ ಬಿಜೆಪಿಯವರಾಗಿದ್ದಾರೆ. ಹಾಗೇ, ಜೆಪಿಸಿಯ 9 ಸದಸ್ಯರು ವಿರೋಧ ಪಕ್ಷದವರಾಗಿದ್ದಾರೆ.
List of 31 members of the Joint Parliamentary Committee (JPC), established to review the Waqf (Amendment) Bill, 2024. BJP MP Jagdambika Pal has been appointed as the Chairperson of the JPC. pic.twitter.com/iJmEIoLrxG
— Press Trust of India (@PTI_News) August 13, 2024
ಅಧ್ಯಕ್ಷರಾಗಿ ಜಗದಾಂಬಿಕ ಪಾಲ್ ನೇಮಕವಾಗಿದ್ದು, ಜೆಪಿಸಿಯ ಸದಸ್ಯರಾಗಿ ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಅಭಿತ್ ಗಂಗೋಪಾಧ್ಯಾಯ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಡಿಕೆ ಅರುಣಾ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಲೋಕಸಭಾ ಸದಸ್ಯರಾಗಿದ್ದು, ಇವರೆಲ್ಲರೂ ಬಿಜೆಪಿಯವರು.
ಇದನ್ನೂ ಓದಿ: ಲೋಕಸಭೆಯಲ್ಲಿ ವಕ್ಫ್ ಮಸೂದೆ ಚರ್ಚೆ ವೇಳೆ ರಾಹುಲ್ ಗಾಂಧಿ ನಿದ್ರೆ; ಲೇವಡಿ ಮಾಡಿದ ಬಿಜೆಪಿ ನಾಯಕರು
ಕಾಂಗ್ರೆಸ್ ಸದಸ್ಯರಾದ ಗೌರವ್ ಗೊಗೊಯ್, ಇಮ್ರಾನ್ ಮಸೂದ್ ಮತ್ತು ಮೊಹಮ್ಮದ್ ಜಾವೇದ್ ಕೂಡ ಈ ಸಮಿತಿಯಲ್ಲಿದ್ದಾರೆ. ಮೊಹಿಬುಲ್ಲಾ (ಸಮಾಜವಾದಿ ಪಕ್ಷ), ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಎ. ರಾಜಾ (ಡಿಎಂಕೆ), ಲವು ಶ್ರೀ ಕೃಷ್ಣ ದೇವರಾಯಲು (ತೆಲುಗು ದೇಶಂ ಪಕ್ಷ), ದಿಲೇಶ್ವರ್ ಕಾಮೈತ್ (ಜೆಡಿಯು), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಸುರೇಶ್ ಮ್ಹಾತ್ರೆ (ಎನ್‌ಸಿಪಿ-ಶರದ್ ಪವಾರ್), ನರೇಶ್ ಮ್ಹಾಸ್ಕೆ (ಶಿವಸೇನೆ), ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್), ಮತ್ತು ಅಸಾದುದ್ದೀನ್ ಓವೈಸಿ (ಎಐಎಂಐಎಂ) ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಜೆಪಿಸಿಯಲ್ಲಿ ರಾಜ್ಯಸಭಾ ಸದಸ್ಯರು:
ಈ ಸಮಿತಿಯಲ್ಲಿರುವ ರಾಜ್ಯಸಭೆಯ ಸದಸ್ಯರ ಪೈಕಿ ಬಿಜೆಪಿ ಮತ್ತು ಪ್ರತಿಪಕ್ಷದಿಂದ ತಲಾ ನಾಲ್ವರು ಸದಸ್ಯರಿದ್ದು, ಒಬ್ಬರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ರಾಜ್ಯಸಭೆಯಿಂದ ಸೇರ್ಪಡೆಗೊಂಡವರು ಬ್ರಿಜ್ ಲಾಲ್ (ಬಿಜೆಪಿ), ಮೇಧಾ ವಿಶ್ರಮ್ ಕುಲಕರ್ಣಿ (ಬಿಜೆಪಿ), ಗುಲಾಮ್ ಅಲಿ (ಬಿಜೆಪಿ), ರಾಧಾ ಮೋಹನ್ ದಾಸ್ ಅಗರವಾಲ್ (ಬಿಜೆಪಿ), ಸೈಯದ್ ನಸೀರ್ ಹುಸೇನ್ (ಕಾಂಗ್ರೆಸ್), ಮೊಹಮ್ಮದ್ ನಾದಿಮುಲ್ ಹಕ್ (ತೃಣಮೂಲ ಕಾಂಗ್ರೆಸ್), ವಿ. ವಿಜಯಸಾಯಿ ರೆಡ್ಡಿ (ವೈಎಸ್‌ಆರ್‌ಸಿಪಿ), ಎಂ. ಮೊಹಮದ್ ಅಬ್ದುಲ್ಲಾ (ಡಿಎಂಕೆ), ಸಂಜಯ್ ಸಿಂಗ್ (ಎಎಪಿ) ಮತ್ತು ನಾಮನಿರ್ದೇಶಿತ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕೂಡ ಇದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ