Big News: ಶಾಪಿಂಗ್ಗೆಂದು ಹೋಗಿದ್ದ ಬಿಜೆಪಿ ನಾಯಕನ ಮೇಲೆ ಗುಂಡು ಹಾರಿಸಿ ಹತ್ಯೆ
ಸುಖ್ಬೀರ್ ಖತಾನಾ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಆಪ್ತರಾಗಿದ್ದು, ಸೊಹ್ನಾದಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದರು.
ಗುರುಗ್ರಾಮ: ಗುರುಗ್ರಾಮದ (Gurugram) ಬಟ್ಟೆ ಶೋರೂಮ್‌ನಲ್ಲಿ ಬಿಜೆಪಿ ನಾಯಕನನ್ನು ಐವರು ಅಪರಿಚಿತರು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಇಲ್ಲಿನ ರಿಥೋಜ್ ಗ್ರಾಮದ ನಿವಾಸಿಯಾದ ಬಿಜೆಪಿ ನಾಯಕ ಸುಖ್ಬೀರ್ ಖತಾನಾ ಅಲಿಯಾಸ್ ಸುಖಿ ತನ್ನ ಸ್ನೇಹಿತನೊಂದಿಗೆ ಶೋರೂಮ್‌ಗೆ ಹೋಗಿದ್ದಾಗ ಸದರ್ ಬಜಾರ್ ಪ್ರದೇಶದಲ್ಲಿ ಅವರನ್ನು ಶೂಟ್ ಮಾಡಿ ಕೊಲ್ಲಲಾಗಿದೆ.
ಸೊಹ್ನಾ ಮಾರುಕಟ್ಟೆ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿದ್ದ ಸುಖಬೀರ್ ಖತಾನಾ ಅವರಿಗೆ ಗುಂಡು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡ ಖತಾನಾ ಅವರನ್ನು ಹತ್ತಿರದ ಆರ್ವಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಸುಖ್ಬೀರ್ ಖತಾನಾ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಆಪ್ತರಾಗಿದ್ದು, ಸೊಹ್ನಾದಿಂದ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಗುರುವಾರ ಮಧ್ಯಾಹ್ನ 3.20ರ ಸುಮಾರಿಗೆ ಸುಖ್ಬೀರ್ ಖತಾನಾ ತನ್ನ ಸ್ನೇಹಿತ ರಾಜೇಂದರ್ ಅವರೊಂದಿಗೆ ಕಿಯಾ ಕಾರಿನಲ್ಲಿ ಗುರುದ್ವಾರ ರಸ್ತೆಯಲ್ಲಿರುವ ರೇಮಂಡ್ ಶೋರೂಂಗೆ ಹೋದಾಗ ಈ ಘಟನೆ ನಡೆದಿದೆ. ಶೋರೂಮ್ ಬಳಿ ಕಾರು ನಿಲ್ಲಿಸಿ ಶಾಪಿಂಗ್ ಮಾಡಲು ಒಳಗೆ ಹೋದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ.
ಇದನ್ನೂ ಓದಿ: ರಜೆ ಮೇಲೆ ಬಂದಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು
ಕೃತ್ಯ ನಡೆದ ಬಟ್ಟೆ ಶೋರೂಂನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಬಂದೂಕು ಹಿಡಿದಿದ್ದ ದಾಳಿಕೋರರ ದೃಶ್ಯ ಸೆರೆಯಾಗಿದೆ. ಐವರು ಬಂದೂಕುಧಾರಿಗಳಲ್ಲಿ ಇಬ್ಬರು ಕಪ್ಪು ಟೀ ಶರ್ಟ್, ಒಂದು ಬಿಳಿ ಚೆಕ್ ಶರ್ಟ್, ಮತ್ತೊಂದು ಕ್ಯಾಪ್ ಮತ್ತು ಒಂದು ಕೆಂಪು ಶರ್ಟ್ ಧರಿಸಿದ್ದರು. ಖತಾನಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ನಂತರ ಅವರು ಶೋರೂಂನಿಂದ ಹೊರಟು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖತಾನಾ ಅವರ ಫೇಸ್ ಬುಕ್ ಖಾತೆಯ ಪ್ರಕಾರ ಖತಾನಾ ಒಬ್ಬ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದರು. ಕೊಲೆಯಾಗುವ 3 ಗಂಟೆಗಳ ಮೊದಲು ಅವರು ತನ್ನ ಪ್ರೊಫೈಲ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡಿದ್ದರು.
ಇದನ್ನೂ ಓದಿ: Iraq: ಇರಾಕ್ ಪ್ರತಿಭಟನೆಯಲ್ಲಿ 23 ಪ್ರತಿಭಟನಾಕಾರರನ್ನು ಗುಂಡಿಕ್ಕಿ ಹತ್ಯೆ, 300ಕ್ಕೂ ಹೆಚ್ಚು ಮಂದಿಗೆ ಗಾಯ
ಆರೋಪಿಗಳ ಪತ್ತೆಗಾಗಿ ಅಪರಾಧ ವಿಭಾಗದ ತಂಡ ಸೇರಿದಂತೆ ವಿಶೇಷ ತಂಡಗಳನ್ನು ರಚಿಸಿದ್ದೇವೆ. ಹೆಚ್ಚಿನ ಆರೋಪಿಗಳನ್ನು ಗುರುತಿಸಲಾಗಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.