ರಾಜ್ಯಸಭಾ ಉಪಚುನಾವಣೆ; ಅಸ್ಸಾಂ-ಮಧ್ಯಪ್ರದೇಶದ ಅಭ್ಯರ್ಥಿಗಳ ಆಯ್ಕೆ ಮಾಡಿದ ಬಿಜೆಪಿ, ಅಚ್ಚರಿಯ ಹೆಸರುಗಳು!
ಅಸ್ಸಾಂನಲ್ಲಿ ಬಿಸ್ವಜಿತ್ ಡೈಮರಿ ತಮ್ಮ ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಲ್ಲಿನ ವಿಧಾನಸಭೆ ಸ್ಪೀಕರ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಆ ಜಾಗ ಖಾಲಿಯಾಗಿತ್ತು.
ದೆಹಲಿ: ಅಕ್ಟೋಬರ್ 4ರಂದು ರಾಜ್ಯಸಭೆಯ ಒಟ್ಟು 7 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ತಮಿಳುನಾಡಿನ 2 ರಾಜ್ಯಸಭಾ ಸ್ಥಾನ, ಪಶ್ಚಿಮ ಬಂಗಾಳದ ಒಂದು, ಅಸ್ಸಾಂ, ಮಧ್ಯಪ್ರದೇಶ, ಪುದುಚೇರಿ ಮತ್ತು ಮಹಾರಾಷ್ಟ್ರಗಳ ತಲಾ ಒಂದು ಸೀಟ್ಗಾಗಿ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಸ್ಸಾಂ ಮತ್ತು ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದೆ. ಅಸ್ಸಾಂನಿಂದ ಸರ್ಬಾನಂದ ಸೋನೋವಾಲ್ ಮತ್ತು ಮಧ್ಯಪ್ರದೇಶದಿಂದ ಎಲ್.ಮುರುಗನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಇಬ್ಬರೂ ನಾಯಕರು ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ನೂತನ ಮಂತ್ರಿಮಂಡಳಿಯನ್ನು ಸೇರಿಕೊಂಡವರಾಗಿದ್ದರು. ಇದೀಗ ರಾಜ್ಯಸಭೆ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಅಸ್ಸಾಂ ಮತ್ತು ಮಧ್ಯಪ್ರದೇಶದ ವಿಧಾನಸಭೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಅಸ್ಸಾಂನಿಂದ ಸೋ ನೋವಾಲ್ ಮತ್ತು ಮಧ್ಯಪ್ರದೇಶದಿಂದ ಎಲ್. ಮುರುಗನ್ ರಾಜ್ಯಸಭೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಅಸ್ಸಾಂನಲ್ಲಿ ಬಿಸ್ವಜಿತ್ ಡೈಮರಿ ತಮ್ಮ ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಲ್ಲಿನ ವಿಧಾನಸಭೆ ಸ್ಪೀಕರ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಆ ಜಾಗ ಖಾಲಿಯಾಗಿತ್ತು. ಇನ್ನು ಮಧ್ಯಪ್ರದೇಶದಲ್ಲಿ ಥಾವರ್ಚಂದ್ ಗೆಹ್ಲೊಟ್ ರಾಜ್ಯಸಭಾ ಸದಸ್ಯನ ಸ್ಥಾನಕ್ಕೆ ರಾಜೀನಾಮೆ ನೀಡಿ, ಕರ್ನಾಟಕದ ರಾಜ್ಯಪಾಲರ ಹುದ್ದೆಗೆ ಏರಿದ್ದಾರೆ. ಹೀಗಾಗಿ ಅಲ್ಲಿ ಒಂದು ಸ್ಥಾನ ಖಾಲಿಯಾಗಿತ್ತು.
ಒಟ್ಟು 7 ಸೀಟುಗಳಿಗೆ ಉಪಚುನಾವಣೆ ನಡೆಯಲಿದ್ದರೂ ಬಿಜೆಪಿ ಎರಡು ಸೀಟುಗಳ ಅಭ್ಯರ್ಥಿಗಳ ಹೆಸರನ್ನಷ್ಟೇ ಸೂಚಿಸಿದೆ. ಪುದುಚೇರಿಯಲ್ಲಿ ಇನ್ನೂ ಸ್ಥಾನ ಖಾಲಿ ಆಗಿಲ್ಲ. ಆದರೆ ಅಲ್ಲಿನ ರಾಜ್ಯಸಭಾ ಸದಸ್ಯ ಎನ್. ಗೋಪಾಲಕೃಷ್ಣ ಅಕ್ಟೋಬರ್ 6ರಂದು ನಿವೃತ್ತ ಗೊಳ್ಳಲಿದ್ದು, ಆ ಸ್ಥಾನಕ್ಕೂ ಕೂಡ ಮುಂಚಿತವಾಗಿಯೇ, ಅಂದರೆ ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ. ಅದೇ ದಿನ ಸಂಜೆಯೇ ಫಲಿತಾಂಶವೂ ಹೊರಬೀಳಲಿದೆ.
ಇದನ್ನೂ ಓದಿ: ‘ಅಸಾದುದ್ದೀನ್ ಓವೈಸಿಗೆಲ್ಲ ಹೆದರುವುದಿಲ್ಲ..ತೆಲಂಗಾಣ ವಿಮೋಚನಾ ದಿನ ಆಚರಣೆ ಖಂಡಿತ ಮಾಡುತ್ತೇವೆ’-ಅಮಿತ್ ಶಾ
Published On - 12:22 pm, Sat, 18 September 21