
ನವದೆಹಲಿ, ನವೆಂಬರ್ 02: ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿ ಒಕ್ಕೂಟದ ವತಿಯಿಂದ ನಡೆದ ‘ವೋಟ್ ಬಚಾವೋ, ದೇಶ್ ಬಚಾವೋ’ ರ‍್ಯಾಲಿ ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ರ‍್ಯಾಲಿಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಸೇರಿರಲಿಲ್ಲ ಎಂದು ಬಿಜೆಪಿ ಟೀಕಿಸಿದರೆ, ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರು ಮತದಾರರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
‘10 ಲಕ್ಷ ಜನ ಬರುತ್ತಾರೆ ಎಂದಿದ್ದರು, ಮೈದಾನ ಖಾಲಿಯಾಗಿತ್ತು’
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ರ‍್ಯಾಲಿಯನ್ನು ‘ಫ್ಲಾಪ್ ಶೋ’ ಎಂದು ಕರೆದಿದ್ದಾರೆ. ಕಾಂಗ್ರೆಸ್ 10 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿಕೊಂಡಿತ್ತು. ಆದರೆ ಮೈದಾನದ ಸುಮಾರು ಶೇ.40ರಷ್ಟು ಭಾಗ ಖಾಲಿಯಾಗಿತ್ತು ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಾಗ ಜನರು ಮೈದಾನದಿಂದ ಹೊರಟುಹೋದರು ಎಂದೂ ಬಿಜೆಪಿ ಹೇಳಿದೆ. ರ‍್ಯಾಲಿಯಲ್ಲಿ ಜನಸಂದಣಿಯನ್ನು ತೋರಿಸಲು ಫೋಟೋಗ್ರಫಿ ತಂತ್ರಗಳನ್ನು ಬಳಸಲಾಗಿದೆ ಎಂದು ಟೀಕಿಸಿರುವ ಪಾತ್ರ, ಇಂತಹ ತಂತ್ರಗಳಿಂದ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಸಂಬಿತ್ ಪಾತ್ರ ವಾಗ್ದಾಳಿ
ಮತ ಕಳ್ಳತನದ ಆರೋಪಗಳ ಕುರಿತು ಮಾತನಾಡಿದ ಸಂಬಿತ್ ಪಾತ್ರ, ಚುನಾವಣೆಯ ಫಲಿತಾಂಶವನ್ನು ಪ್ರಶ್ನಿಸುವುದಕ್ಕೆ ಸೂಕ್ತ ಕಾನೂನು ಪ್ರಕ್ರಿಯೆ ಇದೆ ಎಂದು ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನು ಅಕ್ರಮ ಎಂದು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತೋರಿಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಜ್ಞಾನೇಶ್ ಕುಮಾರ್ ಅವರನ್ನು 2024ರ ಲೋಕಸಭಾ ಚುನಾವಣೆಯ ನಂತರ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ ಎಂಬ ಅಂಶವನ್ನೂ ಪ್ರಸ್ತಾಪಿಸಿ, ರಾಹುಲ್ ಗಾಂಧಿ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ.
‘ಮತ ಕಳ್ಳತನ ದೇಶದ್ರೋಹಕ್ಕೆ ಸಮಾನ’ ಎಂದ ರಾಹುಲ್
ಇದಕ್ಕೂ ಮುನ್ನ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪಾತ್ರದ ಬಗ್ಗೆಯೂ ಪ್ರಶ್ನೆ ಎತ್ತಿದ್ದರು. ಮತ ಕಳ್ಳತನವೆಂದರೆ ಕೇವಲ ಮತಗಳ ಕಳ್ಳತನವಲ್ಲ, ಅದು ದೇಶದ ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನು ಕಸಿದುಕೊಂಡಂತೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜ್ಞಾನೇಶ್ ಕುಮಾರ್ ಅವರಿಂದಲೇ ನರೇಂದ್ರ ಮೋದಿ ಪ್ರಧಾನಿಯಾಗಲು ಮತ್ತು ಅಮಿತ್ ಶಾ ಗೃಹ ಸಚಿವರಾಗಲು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ. ಈ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ.
ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ವಿರೋಧ ವ್ಯಕ್ತಪಡಿಸಿ ಈ ರ‍್ಯಾಲಿ ಆಯೋಜಿಸಲಾಗಿತ್ತು. ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವು ನಾಯಕರು ಭಾಗವಹಿಸಿದ್ದರು. ಮಿಂಟೋ ರಸ್ತೆ–ಕನ್ನಾಟ್ ಪ್ಲೇಸ್ ಜಂಕ್ಷನ್‌ನಿಂದ ಆರಂಭವಾದ ಮೆರವಣಿಗೆ ರಾಮಲೀಲಾ ಮೈದಾನ ತಲುಪಿತ್ತು. ರೈತರಿಗೆ ಹಕ್ಕುಗಳು ಸಿಗುತ್ತಿಲ್ಲ, ಯುವಕರಿಗೆ ಉದ್ಯೋಗಾವಕಾಶಗಳಿಲ್ಲ ಮತ್ತು ದೇಶದ ಸಂಪತ್ತು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ