ಅಂಬಾನಿ ಕುಟುಂಬಕ್ಕೆ ಬೆದರಿಕೆ ಪ್ರಕರಣ: ಸ್ಫೋಟಕವಿರಿಸಿದ್ದ ಎಸ್ಯುವಿ ಕಾರಿನ ಮಾಲೀಕ ಪತ್ತೆ
Mukesh Ambani: ಉದ್ಯಮಿ ಹಿರೇನ್ ಮನ್ಸುಖ್ ಅವರಿಗೆ ಸೇರಿದ ಕಾರು ಇದಾಗಿದೆ. ಕೆಲವು ದಿನಗಳ ಹಿಂದೆ ಈ ಕಾರು ಕಳವು ಆಗಿತ್ತು ಎಂದು ಹಿರೇನ್ ಹೇಳಿದ್ದಾರೆ.
ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಮನೆಯ ಬಳಿ ಗುರುವಾರ ಸ್ಫೋಟಕವಿರಿಸಿದ್ದ ಎಸ್ಯುವಿ ಕಾರು ಪತ್ತೆಯಾಗಿತ್ತು. ಆ ಕಾರಿನೊಳಗೆ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅಂಬಾನಿ ಕುಟುಂಬಕ್ಕೆ ಬೆದರಿಕೆಯೊಡ್ಡಿರುವ ಪತ್ರವೂ ಇತ್ತು. ಪ್ರಸ್ತುತ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ಆಯಾಮದಲ್ಲಿಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ (ಅಪರಾಧ ದಳ ) ಮಿಲಿಂದ್ ಭರಂಬೆ ಹೇಳಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯೂ ತನಿಖೆ ನಡೆಸುತ್ತಿದ್ದ, ಎಸ್ಯುವಿ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದ್ದಾರೆ.
ಉದ್ಯಮಿ ಹಿರೇನ್ ಮನ್ಸುಖ್ ಅವರಿಗೆ ಸೇರಿದ ಕಾರು ಇದಾಗಿದೆ. ಕೆಲವು ದಿನಗಳ ಹಿಂದೆ ಈ ಕಾರು ಕಳವು ಆಗಿತ್ತು ಎಂದು ಹಿರೇನ್ ಹೇಳಿದ್ದಾರೆ. ಕಳೆದ ಎರಡು ವಾರಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಭರಂಬೆ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಉಗ್ರ ದಾಳಿ ಅಥವಾ ಉಗ್ರ ಸಂಘಟನೆಗಳು ಈ ರೀತಿಯ ಕೃತ್ಯವೆಸಗಿದ್ದರೆ ಅದರ ಹೊಣೆಯನ್ನು ಅವರು ಹೊರುತ್ತಾರೆ. ಆದರೆ ಇಲ್ಲಿಯವರೆಗೆ ಯಾರೊಬ್ಬರೂ ಹೊಣೆ ಹೊತ್ತಿಲ್ಲ. ಹೀಗಿದ್ದರೂ ಉಗ್ರ ಕೃತ್ಯ ಇದು ಅಲ್ಲ ಎಂದು ಅಲ್ಲಗೆಳೆಯಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 2.5ಕೆಜಿ ತೂಕದ ಜೆಲಟಿನ್ ಕಡ್ಡಿಗಳು ಕಾರಿನಲ್ಲಿ ಪತ್ತೆಯಾಗಿತ್ತು. ಕುಮಾರು 3,000 ಚದರ ಅಡಿಯಷ್ಟು ದೂರದವರೆಗೆ ಸ್ಫೋಟ ಸಾಮರ್ಥ್ಯವನ್ನು ಇವು ಹೊಂದಿದೆ ಎಂದಿದ್ದಾರೆ ಪೊಲೀಸರು.
ಈ ಎಸ್ಯುವಿಯನ್ನು ಇನ್ನೊವಾ ಕಾರೊಂದು ಹಿಂಬಾಲಿಸುತ್ತಾ ಬಂದಿತ್ತು. ಥಾಣೆಯಿಂದ ಕಾರ್ಮೈಕಲ್ ರಸ್ತೆಯವರೆಗೆ ಬಂದು ಅಂಬಾನಿ ನಿವಾಸ ಅಂಟಿಲಾ ಬಳಿ ಎಸ್ಯುವಿ ಕಾರು ನಿಲ್ಲಿಸುವವರೆಗೆ ಇನ್ನೊವಾ ಕಾರು ಇತ್ತು. ಹಿಂಬಾಲಿಸಿಕೊಂಡು ಬಂದಿದ್ದ ಇನ್ನೊವಾ ಕಾರು ನಕಲಿ ನೋಂದಣಿ ಸಂಖ್ಯೆಯನ್ನು ಹೊಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.
ಸ್ಫೋಟಕವಿರಿಸಲು ಬಳಸಿದ್ದು ಕದ್ದ ಕಾರು ಸ್ಫೋಟಕವಿರಿಸಲು ಬಳಸಿದ ಎಸ್ಯುವಿ ಕಾರು ಥಾಣೆ ಮೂಲದ ಉದ್ಯಮಿಯದ್ದಾಗಿದೆ. ಫೆಬ್ರವರಿ 17ರಂದು ಮುಳುನಾಡ್- ಐರೋಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಈ ಕಾರು ಕಳವಾಗಿತ್ತು. ಕಾರಿನಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳು ನಾಗ್ಪುರ್ನ ಸೋಲಾರ್ ಇಂಡಸ್ಟ್ರಿಯಲ್ಲಿ ತಯಾರಿಸಲಾದವುಗಳಾಗಿವೆ. ಮುಂಬೈ ಇಂಡಿಯನ್ಸ್ ಲೊಗೊ ಇರುವ ಸ್ಫೋರ್ಟ್ ಬ್ಯಾಗ್ ಕೂಡಾ ಈ ಕಾರಿನಲ್ಲಿ ಪತ್ತೆಯಾಗಿತ್ತು.
ಎಸ್ಯುವಿ ಸ್ಕಾರ್ಪಿಯೊ ಮತ್ತು ಇನ್ನೊವಾ ಬುಧವಾರ ತಡರಾತ್ರಿ 1.20ಕ್ಕೆ ಚುನಾಬಟ್ಟಿ, ದಾದರ್, ಬೈಕುಲ್ಲಾದ ಪ್ರಿಯದರ್ಶಿನಿ ಸರ್ಕಲ್ ದಾಟಿದೆ. 2.18ಕ್ಕೆ ಕಾರು ಕಾರ್ ಮೈಕಲ್ ರಸ್ತೆಗೆ ತಲುಪಿದೆ. ಹಿಂತಿರುಗಿ ಹೋಗುವಾಗ ಇನ್ನೊವಾ ಕಾರು ಮುಲುಂದ್ ಚೆಕ್ ನಾಕಾವನ್ನು ಮುಂಜಾನೆ 3,20ಕ್ಕೆ ದಾಟಿದೆ. ಈ ಹೊತ್ತಲ್ಲಿ ಸ್ಕಾರ್ಪಿಯೊದ ಚಾಲಕ ಕೂಡಾ ಅದರಲ್ಲಿದ್ದರು ಎಂದಿದ್ದಾರೆ ಪೊಲೀಸರು.
ಫೆಬ್ರವರಿ 17-ಫೆಬ್ರವರಿ 24ರ ನಡುವೆ ಕಳುವಾದ ಕಾರು ಏನಾಗಿದೆ ಎಂದು ಹುಡುಕಿದಾಗ ಆ ಕಾರು ಅಂಬಾನಿ ನಿವಾಸದ ಬಳಿ ಪತ್ತೆಯಾಗಿತ್ತು. ಶಸ್ಸಿ ಮತ್ತು ಎಂಜಿನ್ ನಂಬರ್ ನ್ನು ಅಳಿಸಿ ಹಾಕಲು ಪ್ರಯತ್ನ ನಡೆದಿತ್ತು.ಇನ್ನೊವಾ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಗಾಂದೇವಿ ಪೊಲೀಸರು ಗುರುವಾರ ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 286 ( ಸ್ಫೋಟಕವಿರಿಸಿದ ಪ್ರಕರಣ), 465 (ವಂಚನೆಯ ಶಿಕ್ಷೆ), 473 (ನಕಲಿ ಮುದ್ರೆಯನ್ನು ತಯಾರಿಸುವುದು ಅಥವಾ ಹೊಂದಿರುವುದು ಇತ್ಯಾದಿ), 506 II (ಅಪರಾಧ ಕೃತ್ಯ) , 120 ಬಿ (ಅಪರಾಧ ಕೃತ್ಯಕ್ಕೆ ಸಂಚು) , ಸ್ಫೋಟಕ ವಸ್ತುಗಳ ಕಾಯ್ದೆ 1908 – ಸೆಕ್ಷನ್ 4 (ಪ್ರಾಣ ಹಾನಿಯ ಉದ್ದೇಶದಿಂದ ಸ್ಫೋಟಕವಿರಿಸಿದ್ದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ
ಪೊಲೀಸರಿಗೆ ಧನ್ಯವಾದ ತಿಳಿಸಿದ ರಿಲಯನ್ಸ್ ತುರ್ತು ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರಿಗೆ ಧನ್ಯವಾದಗಳು. ಮುಂಬೈ ಪೊಲೀಸರು ಶೀಘ್ರದಲ್ಲಿಯೇ ಈ ತನಿಖೆ ಪೂರ್ಣಗೊಳಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ವಕ್ತಾರ ಹೇಳಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಗಿದೆ ಜೆಡ್ ಪ್ಲಸ್ ಸುರಕ್ಷೆ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿಯವರಿಗೆ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಅದಾಗ್ಯೂ, ಇದರ ಖರ್ಚನ್ನು ಅಂಬಾನಿ ಅವರೇ ಭರಿಸುತ್ತಿದ್ದಾರೆ. ಅಂಬಾನಿ ಮತ್ತು ಅವರ ಕುಟುಂಬಕ್ಕೆ ನೀಡಿರುವ ಜೆಡ್ ಪ್ಲಸ್ ಸುರಕ್ಷಾ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2020 ನವೆಂಬರ್ ನಲ್ಲಿ ಸುಪ್ರೀಂಕೋರ್ಟ್ ತಳ್ಳಿ ಹಾಕಿತ್ತು.
ಸಾಮಾನ್ಯವಾಗಿ ಸುರಕ್ಷಾ ವ್ಯವಸ್ಥೆಯು X, Y, Y-plus, Z, Z-plus ನಿಂದ SPG (Special Protection Group) ಹೀಗಿರುತ್ತದೆ. ಈ ರೀತಿಯ ಸುರಕ್ಷಾ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ 55 ಮಂದಿ ಭದ್ರತಾ ಸಿಬ್ಬಂದಿಗಳಿರುತ್ತಾರೆ. ವಿಐಪಿ ಮತ್ತು ವಿವಿಐಪಿಗಳಿಗೆ ಜೆಡ್ ಪ್ಲಸ್ ಸುರಕ್ಷಾವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಎನ್ಎಸ್ ಜಿಗಳು ಭದ್ರತೆಗಿರುತ್ತಾರೆ. ಜೆಡ್ ಕೆಟಗರಿಯಲ್ಲಿ 22 ಭದ್ರತಾ ಸಿಬ್ಬಂದಿಗಳಿರುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಜೆಡ್ ಪ್ಲಸ್ ಮತ್ತು ಜೆಡ್ ಸುರಕ್ಷಾ ವ್ಯವಸ್ಥೆಯಲ್ಲಿ ಬೆಂಗಾವಲು ವಾಹನಗಳೂ ಇರುತ್ತವೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ