ಬಟ್ಟೆ ಹಾಕಿದ್ದಾಗ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂಬ ಬಾಂಬೇ ಹೈ ಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ

ಅಪ್ರಾಪ್ತೆ ಜತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು ಮಾತ್ರ POCSOಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದಿದ್ದರು.

  • TV9 Web Team
  • Published On - 14:26 PM, 27 Jan 2021
ಬಟ್ಟೆ ಹಾಕಿದ್ದಾಗ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ ಎಂಬ ಬಾಂಬೇ ಹೈ ಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ
ಸುಪ್ರೀಂ ಕೋರ್ಟ್​

ದೆಹಲಿ: ಬಟ್ಟೆ ಧರಿಸಿದ್ದಾಗ ಬಾಲಕಿಯ ದೇಹವನ್ನು ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎನ್ನುವ ಬಾಂಬೇ ಹೈ ಕೋರ್ಟ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ಬುಧವಾರ ತಡೆ ನೀಡಿದೆ.

ಬಾಂಬೇ ಹೈಕೋರ್ಟ್​ ಆದೇಶವನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್​​ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್​ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಅವರ ಗಮನಕ್ಕೆ ತಂದು, ಸುಪ್ರೀಂಕೋರ್ಟ್​ ಸ್ವಯಂ ಪ್ರೇರಿತವಾಗಿ ಈ ಪ್ರಕರಣವನ್ನು ಪುನರ್​ ವಿಮರ್ಶಿಸಬೇಕೆಂದು ಕೋರಿದ್ದರು. ಇದನ್ನು ಒಪ್ಪಿದ ಮುಖ್ಯ ನ್ಯಾಯಮೂರ್ತಿ ಪೀಠ, ಇಂದು ವಿಚಾರಣೆ ನಡೆಸಿತು.  ಈ ತೀರ್ಪು ಅಪಾಯಕಾರಿ ಪೂರ್ವನಿದರ್ಶನವನ್ನು (precedent) ಹೊಂದುವ ಸಾಧ್ಯತೆಯಿದೆ ಎಂದು ಹೇಳಿ ನ್ಯಾಯ ಪೀಠವು ತೀರ್ಪಿಗೆ ತಡೆ ನೀಡಿತು.

ಏನಿದು ಹಿಂದಿನ ಪ್ರಕರಣ?

ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನೀಡಿ, ಜೈಲುಪಾಲಾಗಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮಹಿಳಾ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ, ಒಬ್ಬ ಅಪ್ರಾಪ್ತೆ ಬಟ್ಟೆ ಧರಿಸಿಕೊಂಡಿದ್ದಾಗ ಆಕೆಯ ಎದೆಯನ್ನು ಯಾರಾದರೂ ಮುಟ್ಟಿದರೆ ಅಥವಾ ಅವರ ಕೈ ಎದೆಗೆ ತಾಗಿದ ತಕ್ಷಣ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆತ ಅಪ್ರಾಪ್ತೆ ಧರಿಸಿದ್ದ ಬಟ್ಟೆಯನ್ನು ತೆಗೆದು ಸ್ಪರ್ಶಿಸಿದರೆ ಅಥವಾ ಬಟ್ಟೆಯೊಳಗಿಂದ ಕೈ ಹಾಕಿದರೆ ಅದನ್ನು ಲೈಂಗಿಕ ದೌರ್ಜನ್ಯ ಎನ್ನುವುದು ಸರಿ ಎಂದಿತ್ತು.

ಅಪ್ರಾಪ್ತೆ ಜತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು POCSO ಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಧೀಶೆ ಪುಷ್ಪಾ, ಪ್ರಸ್ತುತ ಪ್ರಕರಣ ಹೀಗಿಲ್ಲ. ಇಲ್ಲಿ ಆರೋಪಿಯು 12 ವರ್ಷದ ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕ ಹೊಂದಲಿಲ್ಲ. ಹಾಗಾಗಿ ಈ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿದ್ದರು.

ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೆ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ.. : ಬಾಂಬೆ ಹೈಕೋರ್ಟ್ ತೀರ್ಪು