ಭಾರತದ ನಾವಿಕ್ ವ್ಯವಸ್ಥೆಗೆ ಬಲ ತುಂಬಿದ ಇಸ್ರೋ: ಎನ್‌ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆ

ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆ 'ನಾವಿಕ್' ಬಲಪಡಿಸಲು ಇಸ್ರೋ ಜಿಎಸ್‌ಎಲ್‌ವಿ-ಎಫ್18 ರಾಕೆಟ್ ಮೂಲಕ ಮುಂದಿನ ತಲೆಮಾರಿನ ಎನ್‌ವಿಎಸ್-03 ಉಪಗ್ರಹವನ್ನು ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಉಡಾವಣೆಯಾದ 20 ನಿಮಿಷಗಳಿಗೂ ಹೆಚ್ಚು ಸಮಯದ ಬಳಿಕ ಜಿಎಸ್‌ಎಲ್‌ವಿ ರಾಕೆಟ್ ಎನ್‌ವಿಎಸ್-03 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಅಮೆರಿಕದ ಜಿಪಿಎಸ್‌ನಂತಹ ನ್ಯಾವಿಗೇಷನ್ ವ್ಯವಸ್ಥೆಗಳಿಗೆ ಭಾರತದ ಸ್ವದೇಶಿ ಪರ್ಯಾಯವೇ ಈ ನಾವಿಕ್ ಆಗಿದೆ.

ಭಾರತದ ನಾವಿಕ್ ವ್ಯವಸ್ಥೆಗೆ ಬಲ ತುಂಬಿದ ಇಸ್ರೋ: ಎನ್‌ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆ
ಎನ್‌ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆ
Image Credit source: ISRO X Page

Updated on: Oct 31, 2026 | 7:50 AM

ಅಮರಾವತಿ, ಅಕ್ಟೋಬರ್​​ 31: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮುಂದಿನ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-03 ಅನ್ನು ಜಿಎಸ್‌ಎಲ್‌ವಿ-ಎಫ್18 ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತದ ಸ್ವತಂತ್ರ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್ (NavIC) ಅನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ವೇದಿಕೆಯಿಂದ ಶುಕ್ರವಾರ ರಾತ್ರಿ 11.51ಕ್ಕೆ ರಾಕೆಟ್ ಉಡಾವಣೆಗೊಂಡಿದೆ.

ಉಡಾವಣೆಯಾದ 20 ನಿಮಿಷಗಳಿಗೂ ಹೆಚ್ಚು ಸಮಯದ ಬಳಿಕ ಜಿಎಸ್‌ಎಲ್‌ವಿ ರಾಕೆಟ್ ಎನ್‌ವಿಎಸ್-03 ಉಪಗ್ರಹವನ್ನು ಉದ್ದೇಶಿತ ಕಕ್ಷೆಗೆ ಸೇರಿಸಿದೆ. ಈ ಕಾರ್ಯಾಚರಣೆಯು ಭಾರತದ ಭೂಸ್ಥಾಯೀ ಉಪಗ್ರಹ ಉಡಾವಣಾ ವಾಹನ (GSLV)ದ 20ನೇ ಹಾರಾಟವಾಗಿದೆ. ಈ ಮೂಲಕ 2,250 ಕೆ.ಜಿ. ತೂಕದ ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಗೆ (GTO) ಸೇರಿಸಲಾಗಿದೆ.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಇಸ್ರೋ URSCಯಲ್ಲಿ 61 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ

ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್-03ನಿಂದ ಏನೆಲ್ಲ ಪ್ರಯೋಜನ?

ಎನ್‌ವಿಎಸ್-03 ಇಸ್ರೋದ ಎರಡನೇ ತಲೆಮಾರಿನ ನ್ಯಾವಿಗೇಷನ್ ಉಪಗ್ರಹ ಸರಣಿಯ ಮೂರನೇ ಉಪಗ್ರಹವಾಗಿದೆ. ಭಾರತೀಯ ಉಪಗ್ರಹ ಸಮೂಹದ ಮೂಲಕ ನ್ಯಾವಿಗೇಷನ್ ಸೇವೆಗಳ ನಿರಂತರತೆಯನ್ನು ಖಚಿತಪಡಿಸುವುದು ಮತ್ತು ಅವುಗಳ ಲಭ್ಯತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಉಪಗ್ರಹ ಆಧಾರಿತ ನ್ಯಾವಿಗೇಷನ್ ವ್ಯವಸ್ಥೆಗಳು ನಾಗರಿಕ, ವಾಣಿಜ್ಯ ಮತ್ತು ಕಾರ್ಯತಂತ್ರದ ಬಳಕೆಗಳಿಗೆ ಅತ್ಯಂತ ಮಹತ್ವದ್ದಾಗಿರುವ ಈ ಸಂದರ್ಭದಲ್ಲಿ, ಭಾರತದ ಸ್ವತಂತ್ರ ಸ್ಥಳ ನಿರ್ಣಯ, ನ್ಯಾವಿಗೇಷನ್ ಮತ್ತು ಸಮಯ ನಿರ್ಣಯ ಸಾಮರ್ಥ್ಯಗಳನ್ನು ಬಲಪಡಿಸಲು ಈ ಕಾರ್ಯಾಚರಣೆ ನೆರವಾಗಲಿದೆ.

ಅಮೆರಿಕದ ಜಿಪಿಎಸ್‌ನಂತಹ ನ್ಯಾವಿಗೇಷನ್ ವ್ಯವಸ್ಥೆಗಳಿಗೆ ಭಾರತದ ಸ್ವದೇಶಿ ಪರ್ಯಾಯವೇ ನಾವಿಕ್. ಭಾರತದ ಮುಖ್ಯ ಭೂಭಾಗದಾದ್ಯಂತ ಹಾಗೂ ದೇಶದ ಭೌಗೋಳಿಕ ಗಡಿಗಳಿಂದ ಸುಮಾರು 1,500 ಕಿಲೋಮೀಟರ್‌ಗಳವರೆಗೆ ಸ್ಥಳ ನಿರ್ಣಯ ಮತ್ತು ಸಮಯ ನಿರ್ಣಯ ಸೇವೆಗಳನ್ನು ಒದಗಿಸುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ರಸ್ತೆ ಮತ್ತು ಸಮುದ್ರ ಮಾರ್ಗದ ನ್ಯಾವಿಗೇಷನ್‌ನಿಂದ ಹಿಡಿದು ವಿಪತ್ತು ನಿರ್ವಹಣೆ, ನಿಖರ ಕೃಷಿ ಹಾಗೂ ಸಶಸ್ತ್ರ ಪಡೆಗಳ ಕಾರ್ಯತಂತ್ರದ ಕಾರ್ಯಾಚರಣೆಗಳವರೆಗೆ ನಾವಿಕ್ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತದೆ.

ಇಸ್ರೋಗೆ ಪ್ರಧಾನಿ ಮೋದಿಯಿಂದ ಅಭಿನಂದನೆ

ಎನ್‌ವಿಎಸ್-03 ಉಪಗ್ರಹ ಯಶಸ್ವಿ ಉಡಾವಣೆಗಾಗಿ ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆಯು ನಮ್ಮ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ಎನ್‌ವಿಎಸ್-03 ಉಪಗ್ರಹವು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸುವ ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡುವುದರ ಜೊತೆಗೆ, ಜನರಿಗೆ ಪ್ರಯೋಜನಕಾರಿಯಾಗುವ ನ್ಯಾವಿಗೇಷನ್ ಸೇವೆಗಳನ್ನು ಒದಗಿಸಲು ನೆರವಾಗಲಿದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣೆ ಮತ್ತು ನಾವೀನ್ಯತೆ ದೇಶಕ್ಕೆ ನಿರಂತರವಾಗಿ ಹೆಮ್ಮೆ ತರುತ್ತಿವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:26 am, Sat, 31 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us