CA exam 2021: ಸಿಎ ಪರೀಕ್ಷೆ ಮುಂದೂಡುವುದಿಲ್ಲ ಎಂದ ಸುಪ್ರೀಂಕೋರ್ಟ್: ಪರೀಕ್ಷೆ ತೆಗೆದುಕೊಳ್ಳಲು ಆಗದವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ

CA exam 2021: ಸಂಬಂಧಿಸಿದ ಇಲಾಖೆಯು ಪ್ರಮಾಣೀಕರಿಸಿದ ನಂತರ ತಪ್ಪಿಸಿಕೊಂಡ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡಬಹುದು ಎಂದು ನ್ಯಾಯಾಲಯ ಹೇಳಿತು.

CA exam 2021: ಸಿಎ ಪರೀಕ್ಷೆ ಮುಂದೂಡುವುದಿಲ್ಲ ಎಂದ ಸುಪ್ರೀಂಕೋರ್ಟ್: ಪರೀಕ್ಷೆ ತೆಗೆದುಕೊಳ್ಳಲು ಆಗದವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ
ಸುಪ್ರೀಂ​ ಕೋರ್ಟ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 29, 2021 | 6:14 PM

ದೆಹಲಿ: ಲೆಕ್ಕಪರಿಶೋಧಕರ ಪರೀಕ್ಷೆ (Chartered Accountant – CA) ಮುಂದೂಡಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್​ ಮಂಗಳವಾರ ಸ್ಪಷ್ಟಪಡಿಸಿತು. ಮುಂದಿನ ತಿಂಗಳಲ್ಲಿ, ಅಂದರೆ ಜುಲೈನಲ್ಲಿ ಸಿಎ ಪರೀಕ್ಷಾ ದಿನಾಂಕಗಳು ನಿಗದಿಯಾಗಿವೆ. ಕೊವಿಡ್-19 ನಿರ್ಬಂಧಗಳ ಕಾರಣಗಿಂದ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡಬೇಕು ಎನ್ನುವ ಮನವಿಯನ್ನು ಕೋರ್ಟ್ ಮನ್ನಿಸಿತು.

ಕೊವಿಡ್ ನಿರ್ಬಂಧದಿಂದಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು (Institute of Chartered Accountants of India – ICAI) ಒಪ್ಪಿಕೊಂಡಿತು. ಲೆಕ್ಕಪರಿಶೋಧಕರ ಸಂಸ್ಥೆಯು ತನ್ನ ಅಭಿಪ್ರಾಯ ತಿಳಿಸಿದ ನಂತರ ನ್ಯಾಯಾಲಯವು ತನ್ನ ನಿರ್ಧಾರ ತಿಳಿಸಿತು.

‘ಮುಖ್ಯ ವೈದ್ಯಕೀಯ ಅಧಿಕಾರಿಯು ಈ ಸಂಬಂಧ ಪ್ರಮಾಣ ನೀಡಬೇಕು. ಅಂಥವರಿಗೆ ನಾವು ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ. ಹಳೆಯ ಪಠ್ಯಕ್ರಮದ ಅನ್ವಯ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿಗಳಿಗೆ 7 ವರ್ಷಗಳ ಕಾಲಾವಧಿ ಸಿಗುತ್ತದೆ. ನಾವು ಅಭ್ಯರ್ಥಿಗಳಿಗೆ ಖಂಡಿತ ಅನುಕೂಲ ಕಲ್ಪಿಸಿಕೊಡುತ್ತೇವೆ. ಆದರೆ ಅವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೊವಿಡ್​ ಬಾಧಿತರಾಗಿರುವ ಬಗ್ಗೆ ನಿರೂಪಿಸಬೇಕು’ ಎಂದು ಹೇಳಿದರು.

ನ್ಯಾಯಮೂರ್ತಿಗಳಾದ ಎ.ಎಂ.ಖಾನ್​ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್​ ಈ ಸಂಬಂಧ ಒಂದು ನೀತಿ ರೂಪಿಸುವಂತೆ ಐಸಿಎಐಗೆ ಸೂಚನೆ ನೀಡಿದರು. ಈ ವಿಚಾರದ ಬಗ್ಗೆ ನ್ಯಾಯಾಲಯ ನಾಳೆ (ಜೂನ್ 30) ಮತ್ತೆ ವಿಚಾರಣೆ ನಡೆಸಲಿದ್ದು, ತೀರ್ಪು ನೀಡುವ ಸಾಧ್ಯತೆಯಿದೆ.

ಸಿಎ ಪರೀಕ್ಷೆ ತೆಗೆದುಕೊಳ್ಳಲು ಆಗದ ವಿದ್ಯಾರ್ಥಿಗಳು ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿಕೊಂಡು ಅದರ ಪ್ರಮಾಣಪತ್ರ ಸಾಬೀತುಪಡಿಸುವುದು ಕಷ್ಟವಿದೆ. ಕಂಟೇನ್​ಮೆಂಟ್ ವಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಮಾಡಿಸಿಕೊಳ್ಳುವುದೂ ಅಸಾಧ್ಯ. ಹೀಗಾಗಿ ಪರ್ಯಾಯ ಕ್ರಮಗಳನ್ನು ಆಲೋಚಿಸಬೇಕು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಮೀನಾಕ್ಷಿ ಅರೋರ ಹೇಳಿದರು.

ಆರ್​ಟಿಪಿಸಿಆರ್​ ಪರೀಕ್ಷೆಗಳನ್ನಷ್ಟೇ ಮಾನದಂಡವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಖಾನ್​ವಿಲ್​ಕರ್, ನಾನು ನನ್ನ ವೈಯಕ್ತಿಕ ಅನುಭವ ಹಂಚಿಕೊಳ್ಳುತ್ತಿದ್ದೇನೆ. ನಾನು ಕೊರೊನಾದಿಂದ ಚೇತರಿಸಿಕೊಂಡ 3 ವಾರಗಳ ನಂತರವೂ ರೋಗದ ಪರಿಣಾಮಗಳು ಮುಂದುವರಿದಿದ್ದವು ಎಂದು ಅಭಿಪ್ರಾಯಪಟ್ಟರು.

ಸಿಎ ಪರೀಕ್ಷೆಗಳು ಕೊರೊನಾ ಹರಡುವ ಕೇಂದ್ರಗಳಾಗಬಾರದು ಎಂದು ವಕೀಲ ಅರೋರ ಹೇಳಿದರು. ಪರೀಕ್ಷೆ ನಡೆಸುವ ಪ್ರಾಧಿಕಾರವು ಕೊವಿಡ್ ಶಿಷ್ಟಾಚಾರ ಪಾಲನೆಗೆ ಗಮನ ಕೊಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ಇರಬೇಕು ಎಂಬ ಅರೋರ ಅವರ ಕೋರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಕೊನೇ ಕ್ಷಣದಲ್ಲಿ ಏನಾದರೂ ಮಹತ್ವದ ಬದಲಾವಣೆಯಾದರೆ ಮಾತ್ರ ಪರೀಕ್ಷಾ ಕೇಂದ್ರ ಬದಲಿಸಿಕೊಳ್ಳುವ ವಿಚಾರ ಪರಿಗಣಿಸಬಹುದು. ವೈಯಕ್ತಿಕ ಕಷ್ಟಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಸಿಎ ಪರೀಕ್ಷೆ ತೆಗೆದುಕೊಳ್ಳುವವರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ಸಿಗಬೇಕು ಎಂದು ಮತ್ತೋರ್ವ ವಕೀಲ ಶಶಿಭೂಷಣ್ ಅದಗಾಂವಕರ್ ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠವು, ಲಸಿಕಾ ನೀತಿಯಲ್ಲಿ ನಾವು ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಯಾವ ವಿಷಯದ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೋ ಅದೊಂದೇ ವಿಷಯವನ್ನು ಮತ್ತೆ ಬರೆಯಲು ಕಳೆದ ವರ್ಷ ಐಸಿಎಐ ಅವಕಾಶ ನೀಡಿತ್ತು. ಈ ವರ್ಷವೂ ಇದೇ ವ್ಯವಸ್ಥೆಯನ್ನು ಅನುಸರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸಂಬಂಧಿಸಿದ ಇಲಾಖೆಯು ಪ್ರಮಾಣೀಕರಿಸಿದ ನಂತರ ತಪ್ಪಿಸಿಕೊಂಡ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ಕೊಡಬಹುದು ಎಂದು ನ್ಯಾಯಾಲಯ ಹೇಳಿತು.

ಏನಿದು ಪ್ರಕರಣ? ಕೊವಿಡ್ 19ರ ನಿರ್ಬಂಧದ ಕಾರಣದಿಂದ ಸಿಎ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಸತ್ಯನಾರಾಯಣ ಪೆರುಮಾಳ್ ಎನ್ನುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರ ಪರ ಹಾಜರಿದ್ದ ವಕೀಲರಾದ ದಿವ್ಯಾಂಶ್ ತಿವಾರಿ ಮತ್ತು ಹಾರ್ದಿಕ್ ಗೌತಮ್ ನಾವು ಪರೀಕ್ಷೆಯನ್ನು ಮುಂದೂಡಲು ಅಥವಾ ರದ್ದುಪಡಿಸಲು ಕೋರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮತ್ತೋರ್ವ ಅರ್ಜಿದಾರರಾದ ಅನುಭ ಶ್ರೀವತ್ಸ ಸಹಾಯ್ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಕೋರಿದರು. ಅಭ್ಯರ್ಥಿಗಳಿಗೆ ಈ ವರ್ಷ ಪರೀಕ್ಷೆ ತೆಗೆದುಕೊಳ್ಳದಿರುವ ಆಯ್ಕೆಯೂ ಸಿಗಬೇಕು. ಅಂಥವರಿಗೆ ಮತ್ತೊಮ್ಮೆ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗಬೇಕು ಎಂದು ವಿನಂತಿಸಿದ್ದರು. ದೇಶದಲ್ಲಿ ಕೊವಿಡ್ ಪರಿಸ್ಥಿತಿ ಸುಧಾರಿಸುತ್ತಿರುವ ಕಾರಣ ಇದೇ ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಳಿತು ಎಂದು ಐಸಿಎಐ ವಾದಿಸಿತು.

(CA exam 2021 Supreme Court says will not postpone ICAI Exams)

Published On - 6:13 pm, Tue, 29 June 21