ಗೃಹಿಣಿಯರ ಸಂಬಳದ ಬಗ್ಗೆ ಲೆಕ್ಕ ಹಾಕುವಾಗ ಅವರ ದುಡಿಮೆ, ತ್ಯಾಗವನ್ನು ಪರಿಗಣಿಸಿ: ಸುಪ್ರೀಂಕೋರ್ಟ್
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಸಮಯ ಮತ್ತು ಶ್ರಮವನ್ನು ಮನೆಕೆಲಸಕ್ಕೆ ಮೀಸಲಾಗಿಡುತ್ತಾರೆ. ಗೃಹಿಣಿಯರ ಚಟುವಟಿಕೆಗಳನ್ನು ಪರಿಗಣಿಸಿದಾಗ ಇದೇನು ಅಚ್ಚರಿ ಹುಟ್ಟಿಸುವುದಿಲ್ಲ. ಅವರಿಗೆ ನೀಡುವ ಸಂಬಳವು ಕೆಲಸ, ದುಡಿವೆ ಮತ್ತು ತಾಗ್ಯವನ್ನು ಆಧರಿಸಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನವದೆಹಲಿ: ಗೃಹಿಣಿಯರಿಗೆ ನೀಡುವ ಸಂಬಳವು ಅವರ ಕೆಲಸ, ದುಡಿಮೆ ಮತ್ತು ತಾಗ್ಯವನ್ನು ಆಧರಿಸಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದು ನಮ್ಮ ರಾಷ್ಟ್ರದಲ್ಲಿನ ಅಂತರರಾಷ್ಟ್ರೀಯ ಕಾನೂನು ಕಟ್ಟುಪಾಡುಗಳು, ಸಾಮಾಜಿಕ ಸಮಾನತೆಯ ಬಗ್ಗೆ ಸಾಂವಿಧಾನಿಕ ದೃಷ್ಟಿಕೋನ ಮತ್ತು ಎಲ್ಲರಿಗೂ ಘನತೆಯನ್ನು ಖಾತರಿಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಎನ್.ವಿ.ರಮಣ, ಎಸ್.ಅಬ್ದುಲ್ ನಜೀರ್ ಮತ್ತು ಸೂರ್ಯಕಾಂತ್ ಅವರ ನ್ಯಾಯಪೀಠವು ವಿಮಾ ಪರಿಹಾರ ಪ್ರಕರಣವೊಂದರ ತೀರ್ಪು ಪ್ರಕಟಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಸಮಯ ಮತ್ತು ಶ್ರಮವನ್ನು ಮನೆಕೆಲಸಕ್ಕೆ ಮೀಸಲಾಗಿಡುತ್ತಾರೆ. ಗೃಹಿಣಿಯರ ಚಟುವಟಿಕೆಗಳನ್ನು ಪರಿಗಣಿಸಿದಾಗ ಇದೇನು ಅಚ್ಚರಿ ಹುಟ್ಟಿಸುವುದಿಲ್ಲ. ಗೃಹಿಣಿ ಸಾಮಾನ್ಯವಾಗಿ ಇಡೀ ಕುಟುಂಬಕ್ಕೆ ಆಹಾರವನ್ನು ಸಿದ್ಧಪಡಿಸುತ್ತಾಳೆ. ದಿನಸಿ ಮತ್ತು ಇತರ ಮನೆಯ ಶಾಪಿಂಗ್ ಅಗತ್ಯಗಳನ್ನು ನಿರ್ವಹಿಸುತ್ತಾಳೆ. ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾಳೆ. ಅಲಂಕಾರ, ರಿಪೇರಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಾಳೆ ಮಕ್ಕಳ ಮತ್ತು ಮನೆಯ ಯಾವುದೇ ವಯಸ್ಸಾದ ಸದಸ್ಯರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾಳೆ. ಬಜೆಟ್ ನಿರ್ವಹಣೆ ಜತೆ ಮತ್ತಷ್ಟು ಕೆಲಸಗಳನ್ನು ಮಾಡುತ್ತಾಳೆ ಎಂದು ನ್ಯಾಯವಾದಿ ರಮಣ ಅಭಿಪ್ರಾಯಪಟ್ಟಿದ್ದಾರೆ.
ಗೃಹಿಣಿಯರಿಗೆ ಕಲ್ಪನಾತ್ಮಕ ಆದಾಯವನ್ನು ನಿಗದಿಪಡಿಸುವ ವಿಷಯವು ಅತ್ಯಂತ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಆಯ್ಕೆಯಿಂದ ಅಥವಾ ಸಾಮಾಜಿಕ / ಸಾಂಸ್ಕೃತಿ ನೀತಿಗಳ ಪರಿಣಾಮವಾಗಿ ಈ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಸಿಗುವ ಗೌರವಾಗಿದೆ ಇದು. ಕಾನೂನು ಮತ್ತು ನೆಲದ ಕಾನೂನು ಗೃಹಿಣಿಯರ ಶ್ರಮ, ಸೇವೆಗಳು ಮತ್ತು ತ್ಯಾಗದ ಮೌಲ್ಯವನ್ನು ನಂಬುತ್ತದೆ ಎಂಬುದನ್ನು ಇದು ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
2014ರಲ್ಲಿ ಅಪಘಾತದಲ್ಲಿ ದಂಪತಿಗಳ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ವೇಳೆ ಈ ವಿಷಯ ಪ್ರಸ್ತಾಪವಾಗಿದೆ. ಈ ಪ್ರಕರಣದಲ್ಲಿ ಕುಟುಂಬಕ್ಕೆ ವಿಮಾ ಕಂಪನಿ ₹ 40.71 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಧಿಕರಣ ಆದೇಶಿಸಿತ್ತು. ಆದರೆ ಮೇಲ್ಮನವಿ ಆಲಿಸಿದ ದೆಹಲಿ ನ್ಯಾಯಾಲಯವು ಪರಿಹಾರ ಮೊತ್ತವನ್ನು 22 ಲಕ್ಷಕ್ಕೆ ಇಳಿಸಿತ್ತು. ವಿಮಾ ಕಂಪನಿಯು ಸಂತ್ರಸ್ತ ಕುಟುಂಬಕ್ಕೆ 2014ರಿಂದ ಶೇಕಡಾ 9ರಷ್ಟು ಬಡ್ಡಿ ಜತೆ ₹ 33.20 ಲಕ್ಷ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, 2 ತಿಂಗಳೊಳಗೆ ನೀಡಬೇಕು ಎಂದು ಆದೇಶಿಸಿದೆ.
ಅಂದಾಜಿನಲ್ಲಿ ಆದಾಯವನ್ನು ನಿಗದಿಪಡಿಸುವಾಗ ನಿರ್ದಿಷ್ಟ ಪ್ರಕರಣದ ಸಂಗತಿಗಳು ಮತ್ತು ಸನ್ನಿವೇಶಗಳಲ್ಲಿ ಮಾತ್ರ ಇದನ್ನು ನೀಡಲಾಗುವುದು ಎಂದು ಎಂದು ಖಚಿತಪಡಿಸಿಕೊಳ್ಳಬೇಕು. ಪರಿಹಾರವನ್ನು ತುಂಬಾ ಸಂಪ್ರದಾಯಬದ್ಧವಾಗಿ ಅಥವಾ ತುಂಬಾ ಉದಾರವಾಗಿ ನಿರ್ಣಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಬರೆದಿದೆ.