ವರ್ಷವಾದ್ರೂ ಬದಲಾಗದ ಇಂದಿರಾ ಕ್ಯಾಂಟೀನ್ ಮೆನು: ಅದೇ ಅನ್ನ ಸಾರು, ಮುದ್ದೆ, ಚಪಾತಿ ಮಾಯ!
ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೆನು ಬದಲಾವಣೆ ವಿಳಂಬವಾಗುತ್ತಿರುವುದು ಜನರಲ್ಲಿ ನಿರಾಶೆ ಮೂಡಿಸಿದೆ. ಕಳೆದ ವರ್ಷ ಘೋಷಿಸಿದ ಹೊಸ ಮೆನು ಇನ್ನೂ ಜಾರಿಯಾಗಿಲ್ಲ. ಅನ್ನ-ಸಾಂಬಾರ್‌ಗೆ ಸೀಮಿತವಾಗಿರುವ ಆಹಾರದಿಂದ ಜನರು ಬೇಸತ್ತಿದ್ದಾರೆ. ಹೊಸ ಮೆನುವಿನಲ್ಲಿ ಮುದ್ದೆ, ಚಪಾತಿ ಸೇರಿದಂತೆ ಹಲವು ಆಯ್ಕೆಗಳನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಕ್ಯಾಂಟೀನ್‌ಗಳ ನಿರ್ವಹಣೆಯಲ್ಲಿಯೂ ಸಮಸ್ಯೆಗಳಿವೆ ಎಂಬ ಆರೋಪಗಳಿವೆ.

ಬೆಂಗಳೂರು, ಏಪ್ರಿಲ್ 30: ಬಡವರು, ಮಧ್ಯಮ ವರ್ಗದ ಜನರ ಅಕ್ಷಯ ಪಾತ್ರೆಯಂತಿರುವ ಇಂದಿರಾ ಕ್ಯಾಂಟೀನ್ (Indira Canteen) ಇದೀಗ ಕಾಟಾಚಾರಕ್ಕೆ ನಡೆಯುತ್ತಿದೆಯಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಸಂಬಳ ಸರಿಯಾಗಿ ಕೊಡುತ್ತಿಲ್ಲ, ನಿರ್ವಹಣೆಯಲ್ಲಿ ಸಮಸ್ಯೆಯಿದೆ ಹೀಗೆ ಸಾಲುಸಾಲು ಕಾರಣ ಹೇಳಿ ಬಾಗಿಲು ಮುಚ್ಚುತ್ತಿರುವ ಇಂದಿರಾ ಕ್ಯಾಂಟೀನ್ನಲ್ಲಿ, ಇದೀಗ ವರ್ಷಗಳೇ ಉರುಳಿದರೂ ಮೆನು ಬದಲಾಗದೆ ಹಾಗೆ ಉಳಿದುಬಿಟ್ಟಿದೆ. ಮುದ್ದೆ ಕೊಡುತ್ತೇವೆ, ಚಪಾತಿ ಕೊಡುತ್ತೇವೆ ಅಂತ ಭರವಸೆ ನೀಡಿದ್ದ ಸರ್ಕಾರ (Karnataka Government), ಈಗ ಹಲವೆಡೆ ಮೆನು ಬದಲಾಯಿಸದೆ ಇರುವುದು ಜನರಿಗೆ ಸಂಕಷ್ಟ ತಂದಿಟ್ಟಿದೆ.
ಬಡವರಿಗೆ, ಮಧ್ಯಮವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಇದೀಗ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಮೂಲೆ ಸೇರಿದೆಯಾ ಎಂಬ ಶಂಕೆ ಮೂಡಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ಗಳ ಮೆನು ಬದಲಿಸುತ್ತೇವೆ ಅಂತ ಸರ್ಕಾರ ಹೇಳಿಕೊಂಡಿತ್ತು.
ಅಲ್ಲದೆ, ಕೆಲವೇ ಕೆಲವು ಕ್ಯಾಂಟೀನ್‌ಗಳಲ್ಲಿ ಮುದ್ದೆ ಕೊಟ್ಟು ಫೋಸ್ ಕೊಟ್ಟಿತ್ತು. ಆದರೆ ಇದೀಗ ವರ್ಷ ಉರುಳಿದರೂ ಕೂಡ ಇಂದಿರಾ ಕ್ಯಾಂಟೀನ್ ಮೆನು ಬದಲಾಗದೆ ಹಾಗೆ ಉಳಿದುಬಿಟ್ಟಿದೆ. ಈ ಹಿಂದೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ತೆಗೆದುಕೊಂಡಿದ್ದ ಶೆಫ್ ಟಾಕ್ ಕಂಪನಿಗೆ ಗುಡ್ ಬೈ ಹೇಳಿದ್ದ ಸರ್ಕಾರ, ಅದಾದ ಬಳಿಕ ರಿವಾರ್ಡ್ಸ್ ಅನ್ನೋ ಕಂಪನಿಗೆ ಗುತ್ತಿಗೆ ನೀಡಿತ್ತು. ಹೊಸ ಕಂಪನಿ ಬಂದ ಬಳಿಕವಾದರೂ ಕ್ಯಾಂಟೀನ್‌ಗಳ ಮೆನು ಬದಲಾಗುತ್ತೆ ಅಂದುಕೊಂಡಿದ್ದ ಬೆಂಗಳೂರಿನ ಜನರಿಗೆ ಇದೀಗ ನಿರಾಸೆ ಉಂಟಾಗಿದೆ.
ಹೊಸ ಮೆನುವಿನಂತೆ ಮುದ್ದೆ, ಚಪಾತಿ ಸವಿಯುವ ಕನಸು ಕನಸಾಗಿಯೇ ಉಳಿದಿದ್ದು, ಇತ್ತ ಬರೀ ಅನ್ನ-ಸಾಂಬಾರ್ ತಿಂದು ಸುಸ್ತಾದ ಜನರು ಆದಷ್ಟು ಬೇಗ ಮುದ್ದೆ, ಚಪಾತಿ ಕೊಡಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಹೊಸ ಮೆನುವಿನ ಪ್ರಕಾರ, ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ಹಾಗೂ ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ ಕೊಡಲು ನಿರ್ಧರಿಸಲಾಗಿತ್ತು. ಅಲ್ಲದೇ ಚಟ್ನಿ, ಸಾಂಬರ್, ಮೊಸರು ಬಜ್ಜಿ ಹಾಗೂ ಖಾರಾ ಬೂಂದಿ. ವಾರದ ಇತರ ದಿನಗಳಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ಜೊತೆಗೆ ಪಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್ ಕೊಡಬೇಕಿತ್ತು. ಅಲ್ಲದೇ ರಾತ್ರಿ ಹಾಗೂ ಮಧ್ಯಾಹ್ನ ಮುದ್ದೆ ಅಥವಾ ಚಪಾತಿ ಕೊಡುತ್ತೇವೆ ಅಂತ ಸರ್ಕಾರ ಹೇಳಿತ್ತು. ಆದರೆ, ಇನ್ನೂವರೆಗೂ ಈ ಮೆನು ಜಾರಿ ಬಂದಿಲ್ಲ. ಇಂದಿರಾ ಕ್ಯಾಂಟೀನ್‌ಗಳ ಮೆನು ಬೋರ್ಡ್ ಕೂಡ ಬದಲಾಗಿಲ್ಲ.
ಇದನ್ನೂ ಓದಿ: ಪಾಲಿಶ್ ಅಕ್ಕಿ ಮಕ್ಕಳ ಹೃದಯಕ್ಕೆ ಕುತ್ತು: ತಜ್ಞರು ಬಹಿರಂಗಪಡಿಸಿದ್ರು ಆಘಾತಕಾರಿ ಅಂಶ
ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಮಧ್ಯಮ ವರ್ಗದ ಜನರು ಊಟ ಮಾಡುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದೀಗ ಬರೀ ಅನ್ನ ಸಾಂಬಾರ್ ಗತಿಯಾಗಿಬಿಟ್ಟಿದೆ. ಮತ್ತೊಂದೆಡೆ ಪ್ರತಿಬಾರಿ ಇಂದಿರಾ ಕ್ಯಾಂಟೀನ್ ನಮ್ಮ ಹೆಮ್ಮೆ ಅಂತ ಹೇಳಿಕೊಳ್ಳುವ ಸರ್ಕಾರ, ಇದೀಗ ಹೊಸ ಮೆನು ಜಾರಿ ಮಾಡುತ್ತೇವೆ ಅಂತ ಘೋಷಿಸಿ ಸೈಲೆಂಟ್ ಆಗಿದೆ. ಇದೀಗ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಸಿಗದಿರುವುದು ಗ್ರಾಹಕರಿಗೆ ಬೇಸರ ತರಿಸಿದ್ದು, ಸದ್ಯ ಇನ್ನಾದರು ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಜಾರಿಯಾಗುತ್ತ ಅನ್ನೋದನ್ನ ಕಾದುನೋಡಬೇಕಿದೆ.







