‘ನಾನು ಮತ್ತು ಗುಂಡ 2’ ಸಿನಿಮಾದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ಜೋಗಿ ಪ್ರೇಮ್
ರಾಕೇಶ್ ಅಡಿಗ, ರಚನಾ ಇಂದರ್ ಮುಂತಾದವರು ‘ನಾನು ಮತ್ತು ಗುಂಡ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ ಅವರು ಸಂಗೀತ ನೀಡಿದ್ದಾರೆ. ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಜೋಗಿ ಪ್ರೇಮ್ ಅವರು ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ (R. P. Patnaik) ಅವರು ಈಗ ‘ನಾನು ಮತ್ತು ಗುಂಡ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಜೋಗಿ ಪ್ರೇಮ್ ಅವರು ಮುಖ್ಯ ಅತಿಥಿಯಾಗಿ ಬಂದು ಈ ಗೀತೆಯನ್ನು ರಿಲೀಸ್ ಮಾಡಿದ್ದಾರೆ. ರಾಕೇಶ್ ಅಡಿಗ ಮತ್ತು ರಚನಾ ಇಂದರ್ ಅವರು ಈ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ರಘು ಹಾಸನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ‘ನಾನು ಮತ್ತು ಗುಂಡ 2’ (Naanu Matthu Gunda 2) ಚಿತ್ರತಂಡದವರು ಮಾತನಾಡಿದರು. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.
ನಾಯಿ ಮತ್ತು ಹುಡುಗನೊಬ್ಬನ ನಡುವಿನ ಬಾಂಧವ್ಯದ ಕಥೆಯನ್ನು ‘ನಾನು ಮತ್ತು ಗುಂಡ 2’ ಸಿನಿಮಾದಲ್ಲಿ ತೋರಿಸಲಾಗುವುದು. ‘ಪೊಯೆಮ್ ಪಿಕ್ಚರ್ಸ್’ ಮೂಲಕ ಈ ಸಿನಿಮಾವನ್ನು ರಘು ಹಾಸನ್ ಅವರೇ ನಿರ್ಮಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿ ಗಮನ ಸೆಳೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ಮುಂದುವರಿದ ಭಾಗವಾಗಿ ‘ನಾನು ಮತ್ತು ಗುಂಡ 2’ ಸಿನಿಮಾ ಬರುತ್ತಿದೆ. ಕೆಲವೇ ದಿನಗಳ ಹಿಂದೆ ಶೈಲಜಾ ಕಿರಗಂದೂರು ಅವರು ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದರು. ರಾಕೇಶ್ ಅಡಿಗ, ರಚನಾ ಇಂದರ್ ಮಾತ್ರವಲ್ಲದೇ ಮಾಸ್ಟರ್ ಯುವನ್ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ.
ಸಾಂಗ್ ಬಿಡುಗಡೆ ವೇಳೆ ಜೋಗಿ ಪ್ರೇಮ್ ಮಾತನಾಡಿದರು. ‘ರಘು ನನ್ನ ಜೊತೆ ಬಹಳ ವರ್ಷ ಕೆಲಸ ಮಾಡಿದ್ದಾರೆ. ಅವರು ಒಳ್ಳೆಯ ತಂತ್ರಜ್ಞ. ಒಂದು ನಾಯಿಯನ್ನು ಪಳಗಿಸಿ ನಟನೆ ಮಾಡಿಸುವುದು ಸುಲಭದ ಕೆಲಸ ಅಲ್ಲ. ಈ ಹಾಡು ಕೇಳಿದಾಗಲೇ ಇದು ಖಂಡಿತಾ ಹಿಟ್ ಆಗುತ್ತದೆ ಅಂತ ರಘುಗೆ ಹೇಳಿದ್ದೆ. ಆರ್.ಪಿ. ಪಟ್ನಾಯಕ್ ಸಂಗೀತ ನೀಡಿದ ಎಕ್ಸ್ಕ್ಯೂಸ್ ಮಿ ಸಿನಿಮಾದ ಸಾಂಗ್ಸ್ ಇಂದಿಗೂ ಎವರ್ ಗ್ರೀನ್ ಆಗಿವೆ’ ಎಂದು ಚಿತ್ರತಂಡದವನ್ನು ಪ್ರೇಮ್ ಹೊಗಳಿದರು.
‘ನಾನು ಮತ್ತು ಗುಂಡ 2’ ಶೀರ್ಷಿಕೆ ಗೀತೆ:
‘ಈಗಾಗಲೇ ಸಿನಿಮಾದ ಫಸ್ಟ್ ಕಾಪಿ ಸಿದ್ಧವಾಗಿದೆ. ಶೀಘ್ರದಲ್ಲೇ ಸೆನ್ಸಾರ್ ಆಗಲಿದೆ. ಸದ್ಯದಲ್ಲೇ ಇನ್ನೊಂದು ಹಾಡು ಮತ್ತು ಟ್ರೇಲರ್ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕ ರಘು ಹಾಸನ್ ಮಾಹಿತಿ ನೀಡಿದರು. ಊಟಿ, ತೀರ್ಥಹಳ್ಳಿ, ಶಿವಮೊಗ್ಗ, ಬಾಳೆಹೊನ್ನೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಚಿತ್ರೀಕರಣ ನಡೆದಿದೆ.
ಇದನ್ನೂ ಓದಿ: ಅತ್ಯುತ್ತಮ ಕಮ್ಬ್ಯಾಕ್, ಮೂರು ಸಿನಿಮಾಗಳಲ್ಲಿ ರಾಕೇಶ್ ಅಡಿಗ
ಸಿನಿಮಾದ ಆರು ಹಾಡುಗಳಿಗೆ ಆರ್.ಪಿ. ಪಟ್ನಾಯಕ್ ಸಂಗೀತ ನೀಡಿದ್ದಾರೆ. ತನ್ವಿಕ್ ಛಾಯಾಗ್ರಹಣ ಮಾಡಿದ್ದಾರೆ. ರೋಹಿತ್ ರಮನ್ ಸಂಭಾಷಣೆ ಬರೆದಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ 5 ಭಾಷೆಗಳಲ್ಲಿ ‘ನಾನು ಮತ್ತು ಗುಂಡ 2’ ಚಿತ್ರ ಬಿಡುಗಡೆ ಆಗಲಿದೆ. ರಿತ್ವಿಕ್ ಮುರಳಿದರ್ ಅವರು ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








