Amarinder Singh ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಅಮರಿಂದರ್ ಸಿಂಗ್ ಅಮಿತ್ ಶಾ ಅವರ ಜತೆ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ದೆಹಲಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ದೆಹಲಿಯಲ್ಲಿರುವ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಅಮರಿಂದರ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ನಿಜವಾಗಲಿದೆಯೇ ಎಂಬ ಕುತೂಹಲ ಹುಟ್ಟಿಕೊಂಡಿದೆ. ಅಮರಿಂದರ್ ಸಿಂಗ್ ದೆಹಲಿ ಪ್ರವಾಸದ ಬಗ್ಗೆ ಊಹಾಪೋಹಗಳು ಕೇಳಿ ಬಂದಾಗ, ಅವರು ವೈಯಕ್ತಿಕ ಭೇಟಿಗಾಗಿ ದೆಹಲಿಗೆ ಹೋಗಿದ್ದಾರೆ ಎಂದು ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀಣ್ ತುಕ್ರಾಲ್ ಟ್ವೀಟ್ ಮಾಡಿದ್ದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿದ ಬೆನ್ನಲ್ಲೇ ದೆಹಲಿ ತಲುಪಿದ ಅಮರಿಂದರ್, ನಾನು ಯಾರನ್ನೂ ಭೇಟಿಯಾಗುವ ಉದ್ದೇಶದಿಂದ ದೆಹಲಿಗೆ ಬಂದಿಲ್ಲ. ನಾನು ಯಾವ ನಾಯಕರನ್ನೂ ಭೇಟಿಯಾಗುವುದಿಲ್ಲ. ದೆಹಲಿಯ ಕಪುರ್ತಲದಲ್ಲಿರುವ ಪಂಜಾಬ್ ಮುಖ್ಯಮಂತ್ರಿಯ ಮನೆ ಖಾಲಿ ಮಾಡಲು ಬಂದಿದ್ದೇನೆ ಎಂದು ಹೇಳಿದ್ದರು.
#WATCH | Former Punjab CM and Congress leader Captain Amarinder Singh reaches the residence of Union Home Minister Amit Shah in New Delhi pic.twitter.com/787frIaou7
— ANI (@ANI) September 29, 2021
ಮಂಗಳವಾರ ದೆಹಲಿಗೆ ಬಂದಿಳಿರುವ ಅಮರಿಂದರ್ ಸಿಂಗ್ ಅಂದು ಸಂಜೆ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿತ್ತು. ಕಳೆದ ವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅಮರೀಂದರ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಆದರೆ, ಇದು ಸುಳ್ಳು , ನಾನು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಬಿಜೆಪಿಗೆ ಸೇರುವ ಪ್ರಶ್ನೆಗಳಿಗೆ ಉತ್ತರಿಸಲು ಸಿಂಗ್ ನಿರಾಕರಿಸಿದ್ದರು. ಆದರೆ ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ಆಯ್ಕೆಗಳು ತೆರೆದಿವೆ ಎಂದು ಹೇಳಿದ್ದಾರೆ. ಸಿಂಗ್ ಅವರ ತಂಡವು ಇದನ್ನು “ಸೌಜನ್ಯದ ಭೇಟಿ” ಎಂದು ಕರೆದಿದ್ದು ಮುಂದಿನ ನಡೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದೆ.
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮೊದಲ ಬಾರಿ ದೆಹಲಿಗೆ ಭೇಟಿ ನೀಡಿರುವ ಅಮರಿಂದರ್ ಸಿಂಗ್ ಅಮಿತ್ ಶಾ ಅವರ ಜತೆ ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ.
ದೆಹಲಿಯಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಸಿಂಗ್ 45 ನಿಮಿಷ ಕಾಲ ಚರ್ಚೆ ನಡೆಸಿ ನಿರ್ಗಮಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ರಾಜೀನಾಮೆಗೆ ಕಾರಣವೇನು?: ಪಂಜಾಬ್ ರಾಜಕೀಯದಲ್ಲಿನ ಪ್ರಮುಖ ಬೆಳವಣಿಗೆಗಳು ಇಲ್ಲಿವೆ
Published On - 6:29 pm, Wed, 29 September 21