
ನವದೆಹಲಿ, ಏಪ್ರಿಲ್ 10: ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಸಿಲುಕಿದ್ದ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ(Yashwant Varma) ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಸುದೀರ್ಘ ಕಾನೂನು ಸಂಘರ್ಷದ ಬಳಿಕ ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಗೆ ನಾಂದಿ ಹಾಡಿದ್ದು ಮಾರ್ಚ್ 14, 2025ರಂದು ನಡೆದ ಒಂದು ಸಣ್ಣ ಘಟನೆ. ಅಂದು ದೆಹಲಿಯಲ್ಲಿದ್ದ ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದ ಸ್ಟೋರ್ ರೂಂನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು.
ಬೆಂಕಿ ನಂದಿಸಲು ಹೋದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅಲ್ಲಿ ಕಂಡ ದೃಶ್ಯ ದಂಗು ಬಡಿಸಿತ್ತು. ಅಲ್ಲಿ ಅಪಾರ ಪ್ರಮಾಣದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳಿದ್ದವು. ಬೆಂಕಿಯ ಜ್ವಾಲೆಯಲ್ಲಿ ಕೆಲವು ನೋಟುಗಳು ಈಗಾಗಲೇ ಸುಟ್ಟು ಬೂದಿಯಾಗಿದ್ದರೆ, ಕೆಲವು ಭಾಗಶಃ ಸುಟ್ಟಿದ್ದವು. ಈ ಸುಟ್ಟ ನೋಟುಗಳ ವಿಡಿಯೋ ಇಡೀ ದೇಶಾದ್ಯಂತ ವೈರಲ್ ಆಗಿ ಸಂಚಲನ ಮೂಡಿಸಿತ್ತು.
ನಗದು ಪತ್ತೆಯಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆಂತರಿಕ ತನಿಖಾ ಸಮಿತಿಯನ್ನು ರಚಿಸಿದರು. ಆ ಸಮಿತಿಯು ವರ್ಮಾ ಅವರನ್ನು ವಜಾಗೊಳಿಸಲು ಶಿಫಾರಸು ಮಾಡಿತು. ವರ್ಮಾ ಅವರು ರಾಜೀನಾಮೆ ನೀಡಲು ನಿರಾಕರಿಸಿದಾಗ, ಅವರ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ಪ್ರಕ್ರಿಯೆ ಆರಂಭವಾಯಿತು. ಲೋಕಸಭೆಯ 146 ಸದಸ್ಯರು ಇದಕ್ಕೆ ಸಹಿ ಹಾಕಿದ್ದರು. ಲೋಕಸಭೆಯ ಸ್ಪೀಕರ್ ಅವರು ನ್ಯಾಯಾಧೀಶರ ತನಿಖಾ ಕಾಯ್ದೆಯಡಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿ ತನಿಖೆ ಮುಂದುವರೆಸಿದ್ದರು.
ವರ್ಗಾವಣೆ ಮತ್ತು ಅಂತಿಮ ನಿರ್ಗಮನ
ವಿವಾದ ಉಲ್ಬಣಗೊಂಡ ಕಾರಣ ಮಾರ್ಚ್ ಅಂತ್ಯದಲ್ಲಿ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಾಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಏಪ್ರಿಲ್ 5, 2025 ರಂದು ಅಲ್ಲಿ ಪ್ರಮಾಣವಚನ ಸ್ವೀಕರಿಸಿದರಾದರೂ, ವರ್ಗಾವಣೆಯ ಬಗ್ಗೆಯೂ ಕಾನೂನು ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದವು. ಸಂಸದೀಯ ಸಮಿತಿಯ ತನಿಖೆ ಬಿಗಿಯಾಗುತ್ತಿದ್ದಂತೆ ಮತ್ತು ವಜಾಗೊಳ್ಳುವ ಭೀತಿ ಎದುರಾದಾಗ, ಅವರು ಶುಕ್ರವಾರ ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ರವಾನಿಸಿದರು.
ತಮ್ಮ ರಾಜೀನಾಮೆ ಪತ್ರದಲ್ಲಿ ವರ್ಮಾ ಅವರು ಕಾರಣಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ನನ್ನನ್ನು ಈ ನಿರ್ಧಾರಕ್ಕೆ ಒತ್ತಾಯಿಸಿದ ಕಾರಣಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ಅಲಾಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದು ಒಂದು ಗೌರವ, ಆದರೆ ತೀವ್ರ ವಿಷಾದದೊಂದಿಗೆ ನಾನು ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ.
ಮತ್ತಷ್ಟು ಓದಿ: ಮನೆಯಲ್ಲಿ ಅಕ್ರಮ ಹಣ ಪತ್ತೆ; ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದ ತನಿಖೆಗೆ ಸಿಜೆಐ ಸಂಜೀವ್ ಖನ್ನಾ ಆದೇಶ
ಭ್ರಷ್ಟಾಚಾರದ ಆರೋಪ ಹೊತ್ತ ನ್ಯಾಯಮೂರ್ತಿಯೊಬ್ಬರು ಸಂಸತ್ತಿನ ದೋಷಾರೋಪಣೆ ಪ್ರಕ್ರಿಯೆಯ ಮಧ್ಯದಲ್ಲಿಯೇ ಅಧಿಕಾರ ತ್ಯಜಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪಾರದರ್ಶಕತೆಯ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಪಿತೂರಿ ಎಂದು ಆರೋಪಗಳನ್ನು ತಳ್ಳಿಹಾಕಿದ್ದ ವರ್ಮಾ, ಅಂತಿಮವಾಗಿ ಕಾನೂನು ಮತ್ತು ಸಂಸದೀಯ ಒತ್ತಡಕ್ಕೆ ಮಣಿದು ನಿರ್ಗಮಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Fri, 10 April 26