ಮಾನಸಿಕ ಅಸ್ವಸ್ಥ ಮಹಿಳೆ ಮೇಲಿನ ದೌರ್ಜನ್ಯ ತಡೆದ ಬೀದಿ ನಾಯಿ, ವಿಡಿಯೋ ವೈರಲ್

ಕೊಯಮತ್ತೂರಿನಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಅಪ್ರಾಪ್ತ ಬಾಲಕನನ್ನು ಬೀದಿ ನಾಯಿ ಕಚ್ಚಿ ಓಡಿಸಿ ರಕ್ಷಿಸಿದೆ. ಮಹಿಳೆ ತನಗೆ ಸಿಕ್ಕ ಆಹಾರವನ್ನು ನಾಯಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಳು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ ಆಗಿದೆ. ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ನಾಯಿಯ ನಿಷ್ಠೆ ಮತ್ತು ಸಾಹಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮಾನಸಿಕ ಅಸ್ವಸ್ಥ ಮಹಿಳೆ ಮೇಲಿನ ದೌರ್ಜನ್ಯ ತಡೆದ ಬೀದಿ ನಾಯಿ, ವಿಡಿಯೋ ವೈರಲ್
ನಾಯಿಗಳು-ಸಾಂದರ್ಭಿಕ ಚಿತ್ರ
Image Credit source: Wikipedia

Updated on: Sep 04, 2026 | 2:27 PM

ಕೊಯಮತ್ತೂರು, ಸೆಪ್ಟೆಂಬರ್ 04: ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಮುಂದಾಗಿದ್ದ ವ್ಯಕ್ತಿಯನ್ನು ಬೀದಿ ನಾಯಿಯೊಂದು ಕಚ್ಚಿ ಓಡಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ರಸ್ತೆಬದಿಯಲ್ಲಿದ್ದ ಅಸಹಾಯಕ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಅಪ್ರಾಪ್ತ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿ ಮಹಿಳೆಯನ್ನು ರಕ್ಷಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿ ಬಾಲಕನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಕೊಯಮತ್ತೂರಿನ ತುಡಿಯಲೂರು ಸಮೀಪದ ಅಶೋಕಪುರಂ-ಎನ್‌ಜಿಜಿಒ (NGGO) ಕಾಲೋನಿ ರೈಲ್ವೆ ಮೇಲ್ಸೇತುವೆಯ ಸರ್ವಿಸ್ ರಸ್ತೆಬದಿಯಲ್ಲಿ ಮಹಿಳೆ ಕುಳಿತಿದ್ದರು.ಕುಡಿದ ಮತ್ತಿನಲ್ಲಿ ಬಂದ ಅಪ್ರಾಪ್ತ ಬಾಲಕ ಆಕೆಯ ಬಳಿ ತೆರಳಿದ್ದಾನೆ. ನಿರ್ಜನ ಪ್ರದೇಶವಾಗಿದ್ದರಿಂದ ಬಾಲಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ಮಹಿಳೆ ರಕ್ಷಣೆಗಾಗಿ ಜೋರಾಗಿ ಕಿರುಚುತ್ತಿದ್ದಂತೆ, ರೊಚ್ಚಿಗೆದ್ದ ನಾಯಿ ಆತನ ಕಾಲುಗಳನ್ನು ಕಚ್ಚಿದ್ದರಿಂದ ಹೆದರಿದ ಬಾಲಕ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ನಾಯಿಗಳು ಆತನನ್ನು ರಸ್ತೆಯುದ್ದಕ್ಕೂ ಬೆನ್ನಟ್ಟಿ ಓಡಿಸಿವೆ.

ಬೆಂಕಿ ಅನಾಹುತದ ತನಿಖೆ ವೇಳೆ ಪತ್ತೆ: ಅದೇ ಪ್ರದೇಶದ ಪೆಟ್ಟಿಗೆ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ದೂರಿನ ತನಿಖೆ ನಡೆಸುತ್ತಿದ್ದ ತುಡಿಯಲೂರು ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದರು. ಆಗ ಅನಿರೀಕ್ಷಿತವಾಗಿ ಈ ಮಹಿಳೆಯ ಮೇಲಿನ ದೌರ್ಜನ್ಯ ಯತ್ನ ಹಾಗೂ ನಾಯಿಗಳ ರಕ್ಷಣಾ ಸಾಹಸ ಕ್ಯಾಮೆರಾದಲ್ಲಿ ಕಂಡುಬಂದಿದೆ.

ಬಾಲಾಪರಾಧಿ ಬಂಧನ: ತಕ್ಷಣವೇ ಪ್ರತ್ಯೇಕ ತನಿಖೆ ಆರಂಭಿಸಿದ ಪೊಲೀಸರು, ಗಣೇಶ್ ನಗರ ನಿವಾಸಿಯಾಗಿದ್ದ ಬಾಲಕನನ್ನು ಪತ್ತೆಹಚ್ಚಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.

 

ಮತ್ತಷ್ಟು ಓದಿ: ಹೆಂಡತಿಯನ್ನು ಕಂಡು ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ವ್ಯಕ್ತಿ, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

ಸ್ನೇಹಕ್ಕೆ ಸಾಕ್ಷಿಯಾದ ಮೂಕ ಪ್ರಾಣಿಗಳು: ಸ್ಥಳೀಯರ ಪ್ರಕಾರ, ಸಂತ್ರಸ್ತ ಮಹಿಳೆ ಪ್ರತಿದಿನ ಅದೇ ಪ್ರದೇಶದಲ್ಲಿರುತ್ತಿದ್ದು, ಆ ಎರಡು ಬೀದಿ ನಾಯಿಗಳಿಗೆ ತನಗೆ ಸಿಗುವ ಆಹಾರದಲ್ಲಿ ಸ್ವಲ್ಪ ಪಾಲನ್ನು ಹಂಚಿಕೊಳ್ಳುತ್ತಿದ್ದಳು. ಆ ಮೂಕ ಪ್ರಾಣಿಗಳು ಆಕೆಯ ಮೇಲಿನ ಪ್ರೀತಿ ಮತ್ತು ಕೃತಜ್ಞತೆಗೆ ಪ್ರತಿಯಾಗಿ ಆಕೆಯ ಆಪತ್ಬಾಂಧವರಾಗಿ ಜೀವ ಉಳಿಸಿವೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ: ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮನುಷ್ಯರಲ್ಲಿ ಕಳೆದುಹೋಗುತ್ತಿರುವ ಕರುಣೆ-ಮಾನವೀಯತೆಯನ್ನು ಬೀದಿ ನಾಯಿಗಳು ಪ್ರದರ್ಶಿಸಿವೆ ಎಂದು ನೆಟ್ಟಿಗರು ಶ್ವಾನಗಳ ನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us