5 ಕೋಟಿ ರೂ ನಗದು, ಮರ್ಸಿಡಿಸ್, ಆಡಿ ಕಾರುಗಳು, ಕೆಜಿಗಟ್ಟಲೆ ಚಿನ್ನ ಸಹಿತ ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ!
ಪಂಜಾಬ್ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾರೆ. 8 ಲಕ್ಷ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡಿಐಜಿ ಮನೆಯಲ್ಲಿ 5 ಕೋಟಿ ರೂ. ನಗದು, 1.5 ಕೆಜಿ ಚಿನ್ನ ಸೇರಿ ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ.

ಚಂಡೀಗಢ, ಅಕ್ಟೋಬರ್ 17: ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪಂಜಾಬ್‌ನ (Punjab) ರೋಪರ್ ವಲಯ ಡಿಐಜಿ ಹರ್‌ಚರಣ್ ಸಿಂಗ್ ಬುಲ್ಲಾರ್ರನ್ನು (Harcharan Singh Bhullar) ಸಿಬಿಐ (CBI) ಗುರುವಾರ ಬಂಧಿಸಿದೆ. ಅವರ ನಿವಾಸದಿಂದ ಅಪಾರ ಪ್ರಮಾಣದ ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ಚಿನ್ನದ ಆಭರಣಗಳು, ಉತ್ಕೃಷ್ಟ ವಾಚ್‌ಗಳು ಸೇರಿದಂತೆ ಸಂಪತ್ತಿನ ಖಜಾನೆಯನ್ನೇ ವಶಕ್ಕೆ ಪಡೆದುಕೊಂಡಿದೆ. 8 ಲಕ್ಷ ರೂ. ಲಂಚ ಪ್ರಕರಣವೊಂದರಲ್ಲಿ ಅಖಾಡಕ್ಕಿಳಿದ ಸಿಬಿಐ, ಭ್ರಷ್ಟ ಐಪಿಎಸ್ ಅಧಿಕಾರಿಯ ಸಂಪತ್ತಿನ ಖಜಾನೆ ಕಂಡು ನಿಬ್ಬೆರಗಾಗಿದೆ.
ಭ್ರಷ್ಟ ಡಿಐಜಿ ಸಿಬಿಐ ಬಲೆಗೆ ಬಿದ್ದಿದ್ಹೇಗೆ?
ಹರ್‌ಚರಣ್ ಸಿಂಗ್ ಬುಲ್ಲಾರ್ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಪಂಜಾಬ್‌ನ ರೋಪರ್ ವಲಯದಲ್ಲಿ ಡಿಐಜಿಯಾಗಿದ್ದಾರೆ. 8 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಸಿಬಿಐಗೆ ಬಲೆಗೆಬಿದ್ದಿದ್ದಾರೆ. ಇವರ ಜೊತೆ ಮಧ್ಯವರ್ತಿ ಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ. ಆಕಾಶ್ ಬಟ್ಟಾ ಎಂಬ ಸ್ಕ್ರ್ಯಾಪ್ ವ್ಯಾಪಾರಿ ವಿರುದ್ಧ ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಮಧ್ಯವರ್ತಿ ಮೂಲಕ ಲಂಚ ಪಡೆಯುವ ವೇಳೆ ಲಾಕ್ ಆಗಿದ್ದಾರೆ. 8 ಲಕ್ಷ ರೂ. ಲಂಚ ಕೊಡದಿದ್ದರೆ ಕ್ರಿಮಿನಲ್ ಕೇಸ್ ಜೊತೆ ಉದ್ಯಮಕ್ಕೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಡಿಐಜಿ ಬೆದರಿಸಿದ್ದರು. ಈ ಬಗ್ಗೆ ಉದ್ಯಮಿ ಆಕಾಶ್ ಸಿಬಿಐಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಅಖಾಡಕ್ಕಿಳಿದ ಸಿಬಿಐ ಅಧಿಕಾರಿಗಳು, ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡಾಗಿ ಡಿಐಜಿ ಹರ್‌ಚರಣ್‌ರನ್ನು ಬಂಧಿಸಿದೆ.
ಭ್ರಷ್ಟ ಡಿಐಜಿ ಮನೆಯಲ್ಲಿ ಸಿಬಿಐಗೆ ಏನೇನು ಸಿಕ್ತು?
5 ಕೋಟಿ ರೂಪಾಯಿಗೂ ಹೆಚ್ಚು ನಗದು ಸಿಕ್ಕಿದೆ. ಇದಲ್ಲದೆ 1.5 ಕೆಜಿ ಚಿನ್ನಾಭರಣ, ನೂರಾರು ಕೋಟಿ ರೂ. ಮೌಲ್ಯದ ನಿವೇಶನ-ಜಮೀನಿನ ದಾಖಲೆಪತ್ರಗಳು, ಐಷಾರಾಮಿ ಮರ್ಸಿಡಿಸ್, ಆಡಿ ಕಾರ್‌ನ ಕೀಗಳು, 22 ದುಬಾರಿ ಬೆಲೆಯ ವಾಚ್‌ಗಳು, 40 ಲೀಟರ್ ಇಂಪೋರ್ಟೆಡ್ ಮದ್ಯ, ಡಬಲ್ ಬ್ಯಾರಲ್ ಶಾಟ್‌ಗನ್, ಒಂದು ಪಿಸ್ತೂಲ್, ಒಂದು ರಿವಾಲ್ವರ್ ಮತ್ತು 1 ಏರ್‌ಗನ್ ಅನ್ನು ಸಿಬಿಐ ವಶಕ್ಕೆ ಪಡೆದಿದೆ.
ಇದಲ್ಲದೆ ಲಂಚದ ಡೀಲ್ ಕುದುರುಸಿದ್ದ ಮಧ್ಯವರ್ತಿ ಕೃಷ್ಣ ಎಂಬಾತನಿಂದ 21 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಡಿಜಿಐ ಮನೆಯಲ್ಲಿ ರಾತ್ರಿಯಿಡೀ ಶೋಧ ಮುಂದುವರಿದಿದ್ದು, ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಇದನ್ನೂ ಓದಿ: ಛತ್ತೀಸ್‌ಗಢದ ಅಬುಜ್‌ಮರ್ ಮತ್ತು ಉತ್ತರ ಬಸ್ತಾರ್ ಅನ್ನು ನಕ್ಸಲ್ ಮುಕ್ತ ಎಂದು ಘೋಷಿಸಿದ ಅಮಿತ್ ಶಾ
ವಿಶೇಷವೆಂದರೆ, ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿದ್ದ ಐಪಿಎಸ್ ಹರ್‌ಚರಣ್ ಸಿಂಗ್ ಬುಲ್ಲಾರ್ ಈವರೆಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಡ್ರಗ್ಸ್ ಮಾಫಿಯಾ ವಿರುದ್ಧ ‘‘ವಿನಾಶದ ವಿರುದ್ಧ ಯುದ್ಧ’’ ಎಂದು ದೊಡ್ಡ ಅಭಿಯಾನವನ್ನೇ ಕೈಗೊಂಡಿದ್ದರು. ಇದರಿಂದಾಗಿಯೇ ಇವರಿಗೆ ಡಿಐಜಿಯಾಗಿ ಬಡ್ತಿ ಸಿಕ್ಕಿತ್ತು. ಆದರೆ ಈಗ ಇವರ ಭ್ರಷ್ಟ ಮುಖವಾಡ ಕಳಚಿಬಿದ್ದಿದೆ. ಸಂಪತ್ತಿನ ಕೋಟೆ ನೋಡಿ ಸಿಬಿಐ ಅಧಿಕಾರಿಗಳೇ ದಂಗಾದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




