ಬಿರ್ಭೂಮ್ ಹಿಂಸಾಚಾರ; ತನಿಖೆ ಪ್ರಾರಂಭಿಸಿದ ಸಿಬಿಐನಿಂದ ಎಫ್ಐಆರ್ ದಾಖಲು, 21 ಜನರ ಹೆಸರು ಉಲ್ಲೇಖ
ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕೋಲ್ಕತ್ತ ಹೈಕೋರ್ಟ್, ತನಿಖೆ ಶುರುಮಾಡುವಂತೆ ಸಿಬಿಐಗೆ ಸೂಚಿಸಿತ್ತು. ಅದರ ಅನ್ವಯ ಸಿಬಿಐ ವಿಚಾರಣೆ ಶುರು ಮಾಡಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ನಡೆದ ಹಿಂಸಾಚಾರ (Birbhum Arson) ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಎಫ್ಐಆರ್ ದಾಖಲಿಸಿದೆ. ಈ ಎಫ್ಐಆರ್ನಲ್ಲಿ ಒಟ್ಟು 21 ಜನರ ಹೆಸರು ಉಲ್ಲೇಖಿಸಿದ್ದು, ಇವರೆಲ್ಲರೂ ಪ್ರಕರಣದಲ್ಲಿ ಶಂಕಿತರು ಎಂದು ಹೇಳಿದೆ. ಪಶ್ಚಿಮಬಂಗಾಳದ (West Bengal) ರಾಮ್‌ಪುರಹತ್‌ನಲ್ಲಿ ಮಾರ್ಚ್ 21ರಂದು ನಡೆದ ಹಿಂಸಾಚಾರ ದೇಶವನ್ನೇ ನಡುಗಿಸಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಬಗ್ಟುಯಿ ಗ್ರಾಮ ನಿವಾಸಿ ಭಡು ಶೇಖ್ ಎಂಬುವರನ್ನು ಬಾಂಬ್ ದಾಳಿಯಲ್ಲಿ ಹತ್ಯೆಗೈಯಲಾಗಿತ್ತು. ತೃಣಮೂಲ ಕಾಂಗ್ರೆಸ್ನ ಪ್ರಬಲ ನಾಯಕರಾಗಿದ್ದ ಅವರ ಹತ್ಯೆಯ ನಂತರ ಕೆರಳಿದ್ದ ಬೆಂಬಲಿಗರು ಕಂಡಕಂಡ ಮನೆಗೆ ಬೆಂಕಿ ಹಚ್ಚಿದ್ದರು. 12ಕ್ಕೂ ಹೆಚ್ಚು ಮನೆಗಳು ಸುಟ್ಟುಕರಕಲಾಗಿದ್ದು, ಇಬ್ಬರು ಮಕ್ಕಳು ಸೇರಿ 8 ಮಂದಿಯ ಸಜೀವ ದಹನವಾಗಿದೆ. ಈ ಎಂಟು ಮಂದಿ ಸಜೀವ ದಹನ ಮಾಡುವುದಕ್ಕೂ ಮೊದಲು ಅವರನ್ನು ಥಳಿಸಲಾಗಿತ್ತು ಎಂಬ ಮಾಹಿತಿ ವಿಧಿವಿಜ್ಞಾನ ತಜ್ಞರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕೋಲ್ಕತ್ತ ಹೈಕೋರ್ಟ್, ತನಿಖೆ ಶುರುಮಾಡುವಂತೆ ಸಿಬಿಐಗೆ ಸೂಚಿಸಿತ್ತು. ಅದರ ಅನ್ವಯ ವಿಚಾರಣೆ ಶುರು ಮಾಡಿರುವ ಸಿಬಿಐ, ಪಂಚಾಯಿತಿ ಉಪಾಧ್ಯಕ್ಷ ಭಡು ಶೇಖ್ ಹತ್ಯೆಗೆ ಪ್ರತೀಕಾರವಾಗಿಯೇ ಈ ಹಿಂಸಾಚಾರ ನಡೆದಿದ್ದು ಪ್ರಾಥಮಿಕ ತನಿಖೆಯಲ್ಲೇ ಸ್ಪಷ್ಟವಾಗಿದೆ ಎಂದು ಹೇಳಿದೆ. ಸುಮಾರು 70-80 ಜನರ ಗುಂಪು ಹೀಗೆ ಮನೆಗಳಿಗೆ ಬೆಂಕಿ ಹಚ್ಚಿದೆ. ಒಳಗೆ ಇರುವವರನ್ನು ಕೊಲ್ಲುವ ಉದ್ದೇಶ ಇಟ್ಟುಕೊಂಡೇ ಈ ಕೃತ್ಯ ನಡೆಸಲಾಗಿದೆ ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ.
ಬಿರ್ಭೂಮ್ನಲ್ಲಿ ಹಿಂಸಾಚಾರ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ, ಸಜೀವ ದಹನಗೊಂಡ ಎಂಟೂ ಜನರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಅಷ್ಟೇ ಅಲ್ಲ, ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ 50 ಸಾವಿರ ರೂಪಾಯಿ ಹೆಚ್ಚುವರಿ ನೀಡುವುದಾಗಿಯೂ ಅವರು ತಿಳಿಸಿದ್ದಾರೆ. ಹಾಗೇ, ಬೆಂಕಿಗೆ ಸಂಪೂರ್ಣವಾಗಿ ಆಹುತಿಯಾದ ಮನೆಯವರು ಇನ್ನು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಬೇಕಿದ್ದು, ಅದಕ್ಕಾಗಿ 2 ಲಕ್ಷ ರೂ. ನೀಡಲಾಗುವುದು. ಘಟನೆ ಸಂತ್ರಸ್ತ ಕುಟುಂಬಗಳಲ್ಲಿ ಒಬ್ಬರಿಗೆ ಉದ್ಯೋಗ ನೀಡಲಾಗುವುದು ಎಂದೂ ಘೋಷಿಸಿದ್ದಾರೆ.
ಇದನ್ನೂ ಓದಿ: ಅಂಗವೈಕಲ್ಯವಿದ್ದರೆ ಏನೂ ಸಾಧಿಸಲು ಆಗೋಲ್ಲ ಅನ್ನುವವರ ಮಧ್ಯೆ ಹುಬ್ಬಳ್ಳಿಯ ಸಿದ್ಧಾರ್ಥ ಹೇಗೆ ಸಾಧನೆಯ ಶೀಖವೇರಿದ್ದಾನೆ, ನೋಡಿ!
Published On - 2:46 pm, Sat, 26 March 22