ಕೊರೊನಾ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ಸಿಗುತ್ತಾ? ನಾಳೆ ನಡೆಯುವ ಸಭೆ ದೇಶಕ್ಕೆ ಎಷ್ಟು ಮುಖ್ಯ?
CDSCOನ ವಿಷಯ ತಜ್ಞರ ಸಮಿತಿಯೇ ಲಸಿಕೆ ಬಗ್ಗೆ ಡಿಸಿಜಿಐಗೆ ಶಿಫಾರಸು ನೀಡಲಿದೆ. ನಂತರವಷ್ಟೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನಿರ್ಧಾರವಾಗಲಿದೆ.
ದೆಹಲಿ: ಕೊರೊನಾ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡುವ ಬಗ್ಗೆ ನಾಳೆ (ಡಿ.9) ದೆಹಲಿಯಲ್ಲಿ ಸಭೆ ನಡೆಯಲಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (CDSCO) ಸಭೆಯಲ್ಲಿ ತಜ್ಞರ ಸಮಿತಿ ಪಾಲ್ಗೊಳ್ಳಲಿದೆ. ಕೊವಿಡ್ ಲಸಿಕೆ ತಯಾರಿಕಾ ಔಷಧ ಕಂಪನಿಗಳು ಸಲ್ಲಿಸಿರುವ ಅರ್ಜಿಯ ಬಗ್ಗೆ ಪರಿಶೀಲನೆ ನಡೆಯಲಿದೆ.
CDSCO ನ ವಿಷಯ ತಜ್ಞರ ಸಮಿತಿಯೇ ಲಸಿಕೆ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI)ಗೆ ಶಿಫಾರಸು ನೀಡಲಿದೆ. ನಂತರವಷ್ಟೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನಿರ್ಧಾರವಾಗಲಿದೆ. ಆದ್ದರಿಂದ, ನಾಳೆಯ ಸಭೆಯು ವಿಶೇಷ ಮಹತ್ವ ಪಡೆದುಕೊಂಡಿದೆ.
ತಜ್ಞರ ಸಮಿತಿಯಿಂದ ಲಸಿಕೆಯ ಪರಿಶೀಲನೆ ಸಂಸ್ಥೆಯ ತಜ್ಞರು ಫೈಝರ್, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್ ಕಂಪನಿ ಲಸಿಕೆಗಳ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ರೋಗ ನಿರೋಧಕ ಶಕ್ತಿಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ತುರ್ತು ಬಳಕೆಗೆ ಅನುಮತಿ ಕೋರಿರುವ ಮೂರು ಲಸಿಕೆಗಳ ಬಗ್ಗೆ ತಜ್ಞರ ಸಮಿತಿ ಪರಿಶೀಲನೆ ನಡೆಸಲಿದ್ದು, ಲಸಿಕೆಯನ್ನು ಬಳಕೆ ಮಾಡಬೇಕೇ ಬೇಡವೇ ಎಂಬ ಬಗ್ಗೆ ನಂತರ ಡಿಸಿಜಿಐಗೆ ಶಿಫಾರಸು ಮಾಡಲಿದೆ.
ಸೆರಮ್ ಸಂಸ್ಥೆಯ ಲಸಿಕೆ ಸಿಗಬಹುದಾ? ಸೆರಮ್ ಸಂಸ್ಥೆಯಿಂದ ಆಕ್ಸ್‌ಫರ್ಡ್ ವಿವಿ ಅಸ್ಟ್ರಾಜೆನೆಕಾ ಕಂಪನಿಯ ಜೊತೆಗೆ ಒಪ್ಪಂದ ಆಗಿದ್ದು, ಅದರಂತೆ, ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆಯನ್ನು ಭಾರತದಲ್ಲಿ ಸೆರಮ್ ಸಂಸ್ಥೆ ಉತ್ಪಾದಿಸಲಿದೆ. ಆದರೆ ಆಕ್ಸ್‌ಫರ್ಡ್ ವಿವಿ ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆ ಬಳಕೆಗೆ ಇಂಗ್ಲೆಂಡ್ನಲ್ಲಿ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಭಾರತದಲ್ಲಿ ಈಗಲೇ ಆಕ್ಸ್‌ಫರ್ಡ್ ವಿವಿ ಲಸಿಕೆಗೆ ಅನುಮತಿ ದೊರಕುವುದು ಕಷ್ಟ ಎಂಬ ಅಭಿಪ್ರಾಯವಿದೆ.
ಫೈಝರ್ ಲಸಿಕೆ ತುರ್ತು ಬಳಕೆಗೆ ಲಭ್ಯವಾಗುತ್ತಾ? ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಇನ್ನೂ 3ನೇ ಹಂತದ ಪ್ರಯೋಗದಲ್ಲಿದೆ. ಫೈಝರ್ ಕಂಪನಿಯ ಲಸಿಕೆಯನ್ನು ತುರ್ತು ಬಳಕೆಗೆ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
Published On - 9:37 pm, Tue, 8 December 20