Census India: ಜನಗಣತಿಗೆ ಸಿದ್ಧತೆ: ಮತ್ತೊಮ್ಮೆ ಜಾತಿ ಆಧರಿತ ಮಾಹಿತಿ ಸಂಗ್ರಹಿಸುವ ಉದ್ದೇಶವಿಲ್ಲ ಎಂದ ಕೇಂದ್ರ ಸರ್ಕಾರ

ಭಾರತದಲ್ಲಿ ಈ ಬಾರಿ ನಡೆಯಲಿರುವ ಜನಗಣತಿಯು ಮೊದಲ ಡಿಜಿಟಲ್ ಗಣತಿ ಆಗಿರಲಿದೆ. ಇದೇ ಮೊದಲ ಬಾರಿಗೆ ಸ್ವಯಂ ದೃಢೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ.

Census India: ಜನಗಣತಿಗೆ ಸಿದ್ಧತೆ: ಮತ್ತೊಮ್ಮೆ ಜಾತಿ ಆಧರಿತ ಮಾಹಿತಿ ಸಂಗ್ರಹಿಸುವ ಉದ್ದೇಶವಿಲ್ಲ ಎಂದ ಕೇಂದ್ರ ಸರ್ಕಾರ
ಸಂಸತ್ ಭವನ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 11, 2021 | 8:23 PM

ದೆಹಲಿ: ಜಾತಿ ಗಣತಿಗಾಗಿ ಮತ್ತೊಮ್ಮೆ ಯಾವುದೇ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದೆ. 2011ರ ಸಾಮಾಜಿಕ ಆರ್ಥಿಕ ಗಣತಿ ವೇಳೆ ಸಂಗ್ರಹಿಸಿದ್ದ ಜಾತಿಗೆ ಸಂಬಂಧಿಸಿದ ಕಚ್ಚಾ ಮಾಹಿತಿಯು ರಿಜಿಸ್ಟ್ರಾರ್​ ಜನರಲ್ ಆಫ್ ಇಂಡಿಯಾ (ಆರ್​ಜಿಐ) ಕಚೇರಿಯಲ್ಲಿದೆ. ಈ ಮಾಹಿತಿಯು ಹಳೆಯದಾಗಿರುವುದರಿಂದ ಮತ್ತು ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಳಸಲು ಆಗದು ಎಂಬ ಅಭಿಪ್ರಾಯವನ್ನು ಆರ್​ಜಿಐ ವ್ಯಕ್ತಪಡಿಸಿದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ಪ್ರಸ್ತಕ ಸಾಲಿನಲ್ಲಿ (2021) ನಡೆಯುವ ಜನಗಣತಿಯ ವೇಳೆ, 1950ರ ಸಂವಿಧಾನಾತ್ಮಕ ಆದೇಶದ ಅನ್ವಯ ಕೇವಲ ಪರಿಶಿಷ್ಟ ಜಾತಿ ಮತ್ತು ವರ್ಗದ ಮಾಹಿತಿ ಸಂಗ್ರಹಿಸುತ್ತಾರೆ. ಕೇಂದ್ರ ಸಚಿವ ನಿತ್ಯಾನಂದ ರೈ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

‘1950ರ ಸಂವಿಧಾನ (ಪರಿಶಿಷ್ಟ ಜಾತಿ) ಆದೇಶದ ಅನ್ವಯ ಯಾವೆಲ್ಲಾ ಜಾತಿ ಮತ್ತು ವರ್ಗಗಳನ್ನು ಪರಿಶಿಷ್ಟ ಎಂದು ಘೋಷಿಸಲಾಗಿದೆಯೋ ಅಂಥ ಜಾತಿ ಮತ್ತು ವರ್ಗಗಳ ಮಾಹಿತಿಯನ್ನು ಜನಗಣತಿಯ ವೇಳೆ ಸಂಗ್ರಹಿಸಲಾಗುವುದು. 2011ರಲ್ಲಿ ಅಂದಿನ ಗ್ರಾಮೀಣ ಅಭಿವೃದ್ಧಿ, ವಸತಿ ಹಾಗೂ ನಗರ ಬಡತನ ನಿರ್ಮೂಲನಾ ಸಚಿವಾಲಯವು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ನಡೆಸಿತ್ತು. ಈ ಪೈಕಿ ಜಾತಿ ವಿವರ ಹೊರತುಪಡಿಸಿ ಉಳಿದೆಲ್ಲ ಮಾಹಿತಿಯನ್ನು ಸಂಸ್ಕರಿಸಿದ್ದ ಕೇಂದ್ರ ಸರ್ಕಾರ, ಸಾರ್ವಜನಿಕವಾಗಿ ಪ್ರಕಟಿಸಿತ್ತು ಎಂದು ಸಚಿವರು ಸಂಸತ್ತಿನಲ್ಲಿ ತಿಳಿಸಿದರು.

ಜನಗಣತಿಯ ಸಮಯವನ್ನು ವಿವಿಧ ರಾಜ್ಯ ಸರ್ಕಾರಗಳೂ ಸೇರಿದಂತೆ ವಿವಿಧ ಸಹಭಾಗಿಗಳೊಂದಿಗೆ ಕೂಲಂಕಶ ಸಮಾಲೋಚನೆಯ ನಂತರವೇ ನಿಗದಿಪಡಿಸಲಾಗಿದೆ. 2021ರಲ್ಲಿ ಗಣತಿ ಮಾಡಬೇಕು ಎನ್ನುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮಾರ್ಚ್ 28, 2019ರಂದು ಗೆಜೆಟ್ ಅಧಿಸೂಚನೆಯ ಮೂಲಕ ಪ್ರಕಟಿಸಿತ್ತು. ಆದರೆ ಕೊವಿಡ್ ಕಾರಣದಿಂದ ಗಣತಿಗೆ ಸಂಬಂಧಿಸಿದ ಸಿದ್ಧತಾ ಕಾರ್ಯಗಳು ಮುಂದೆ ಹೋಗಿದ್ದವು ಎಂದು ಸಚಿವರು ಸದನಕ್ಕೆ ತಿಳಿಸಿದರು.

ಜನಗಣತಿಯ ವೇಳೆ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲಾಗುವುದು. ಜನರ ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಧರ್ಮ, ಭಾಷೆ, ಮದುವೆ, ಮಕ್ಕಳ ವಿವರ, ಅಂಗವೈಕಲ್ಯ, ವೃತ್ತಿ, ವಲಸೆಯ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಭಾರತದಲ್ಲಿ ಈ ಬಾರಿ ನಡೆಯಲಿರುವ ಜನಗಣತಿಯು ಮೊದಲ ಡಿಜಿಟಲ್ ಗಣತಿ ಆಗಿರಲಿದೆ. ಇದೇ ಮೊದಲ ಬಾರಿಗೆ ಸ್ವಯಂ ದೃಢೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ದತ್ತಾಂಶ ಸಂಗ್ರಹಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗುವುದು. ಗಣತಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ವಿಶೇಷ ಪೋರ್ಟಲ್ ರೂಪಿಸಲಾಗುವುದು ಎಂದು ಹೇಳಿದರು.

(Census Preparation Started Will Not Collect Caste Based Data Again Centre Tells Parliament)

ಇದನ್ನೂ ಓದಿ: ಸಿದ್ದರಾಮಯ್ಯರನ್ನ ಮೂಲೆಗುಂಪಾಗಿಸಿದ್ದ ಜಾತಿಗಣತಿ ಬ್ರಹ್ಮಾಸ್ತ್ರ ಮತ್ತೆ ಮುನ್ನೆಲೆಗೆ; 2023ರ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್!?

ಇದನ್ನೂ ಓದಿ: OBC Reservation Bill: ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸಲು ರಾಜ್ಯಕ್ಕೆ ಅಧಿಕಾರ; ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ