
ನವದೆಹಲಿ, ಜೂನ್ 30: ರೈತರ (Farmers) ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು (Central Government) ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಕೃಷಿ ಭೂಮಿಯಲ್ಲಿರುವ (Agricultural land) ಮರಗಳನ್ನು ಕಡಿಯಲು ಅಥವಾ ಬೆಳೆಗಳಿಗೆ ತೊಂದರೆ ಉಂಟು ಮಾಡುವ ಮರಗಳನ್ನು ಕಡಿಯುವುದನ್ನು ಸಾರಾಗಗೊಳಿಸಲು ಕೇಂದ್ರ ಸರ್ಕಾರ ಮಾದರಿ ನಿಯಮಗಳನ್ನು ಹೊರಡಿಸಿದೆ. ಈ ನಿರ್ಣಯವು ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಸಹಾಯಕವಾಗಿದೆ. ಮತ್ತು ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಸಂಬಂಧ ಜೂನ್ 19 ರಂದು ಪರಿಸರ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಕಳುಹಿಸಿದೆ. ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯುವ ಮಾದರಿ ನಿಯಮಗಳ ಉದ್ದೇಶವು, ಕೃಷಿ ಅರಣ್ಯೀಕರಣದಲ್ಲಿ ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವುದು ಮತ್ತು ಅನಗತ್ಯ ಅಡೆತಡೆಗಳನ್ನು ಎದುರಿಸದೆ ರೈತರು ತಮ್ಮ ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ರೈತರ ಆದಾಯವನ್ನು ದ್ವಿಗುಣಗೊಳಿಸಲು, ಕಾಡುಗಳ ಹೊರಗೆ ಮರಗಳ ಹೊದಿಕೆಯನ್ನು ಹೆಚ್ಚಿಸಲು, ಹವಾಮಾನ ಬದಲಾವಣೆಯನ್ನು ತಗ್ಗಿಸಲು, ಮರದ ಆಮದನ್ನು ಕಡಿಮೆ ಮಾಡಲು ಸರ್ಕಾರವು ಕೃಷಿ ಅರಣ್ಯೀಕರಣವನ್ನು ಉತ್ತೇಜಿಸುತ್ತಿದೆ. ಇದು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಗುರಿಗಳನ್ನು ಸಹ ಬೆಂಬಲಿಸುತ್ತದೆ.
ಇಷ್ಟು ದಿನಗಳ ಕಾಲ ಕೃಷಿ ಭೂಮಿಯಲ್ಲಿ ಮರಗಳನ್ನು ಕಡಿಯಲು ಸ್ಪಷ್ಟವಾದ, ಸರಳ ನಿಯಮಗಳು ಇಲ್ಲದಿದ್ದರಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೈತರಿಗೆ ಅಡಚಣೆಯಾಗುತ್ತಿತ್ತು. ಈ ಹೊಸ ಮಾರ್ಗಸೂಚಿಯಿಂದ ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯುವುದು ಸಲುಭವಾಗಲಿದೆ. ಮತ್ತು ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ರೂಪಿಸಲಾದ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಇದನ್ನೂ ಓದಿ: 2027ಕ್ಕೆ ಭಾರತದ ಮಡಿಲು ಸೇರಲಿದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಖ್ಯಾತ ಜ್ಯೋತಿಷಿ ಭವಿಷ್ಯ
ಮಾದರಿ ನಿಯಮಗಳ ಪ್ರಕಾರ, 2016 ರ ಮರ-ಆಧಾರಿತ ಕೈಗಾರಿಕೆಗಳು (ಸ್ಥಾಪನೆ ಮತ್ತು ನಿಯಂತ್ರಣ) ಮಾರ್ಗಸೂಚಿಗಳ ಅಡಿಯಲ್ಲಿ ಈಗಾಗಲೇ ರಚಿಸಲಾದ ರಾಜ್ಯ ಮಟ್ಟದ ಸಮಿತಿ (SLC) ಈ ನಿಯಮಗಳಿಗಾಗಿ ಕಾರ್ಯನಿರ್ವಹಿಸುತ್ತದೆ. ಇದೀಗ ಸಮಿತಿಯಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಸಹ ಸೇರಿದ್ದಾರೆ.
ವಾಣಿಜ್ಯ ಮೌಲ್ಯದ ಮರಗಳನ್ನು, ವಿಶೇಷವಾಗಿ ಮರಗಳನ್ನು ಕಡಿಯುವುದು ಮತ್ತು ಸಾಗಣೆ ಮಾಡುವ ನಿಯಮಗಳನ್ನು ಸರಳಗೊಳಿಸುವ ಮೂಲಕ ಕೃಷಿ ಅರಣ್ಯೀಕರಣವನ್ನು ಹೇಗೆ ಉತ್ತೇಜಿಸಬೇಕು ಎಂಬುದರ ಕುರಿತು ಸಮಿತಿಯು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಿದೆ.
10 ಕ್ಕಿಂತ ಹೆಚ್ಚು ಮರಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಹೊಂದಿರುವ ಭೂಮಿ ಮಾಲೀಕರು NTMS ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಕಡಿಯಬೇಕಾದ ಮರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಬೇಕು.
ಆನ್ಲೈನ್ ನೋಂದಣಿ: ರೈತರು ರಾಷ್ಟ್ರೀಯ ಮರ ನಿರ್ವಹಣಾ ವ್ಯವಸ್ಥೆ (NTMS) ಪೋರ್ಟ್ಲ್ನಲ್ಲಿ ತಮ್ಮ ಭೂಮಿಯನ್ನು ನೋಂದಾಯಿಸಬೇಕು.
ಡಿಜಿಟಲ್ ಡಾಕ್ಯುಮೆಂಟೇಶನ್: ಪ್ರತಿ ಮರವನ್ನು ಜಿಯೋ-ಟ್ಯಾಗ್ ಮಾಡಿ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ