ಕಳೆದ 5 ವರ್ಷದಲ್ಲಿ ಮೋದಿ ವಿದೇಶಿ ಪ್ರವಾಸಕ್ಕಾದ ಖರ್ಚೆಷ್ಟು? ರಾಜ್ಯಸಭೆಗೆ ಕೊಟ್ಟ 36 ವಿದೇಶಿ ಪ್ರವಾಸಗಳ ಖರ್ಚು-ವೆಚ್ಚದ ಲೆಕ್ಕ ಇಲ್ಲಿದೆ
ಕಳೆದ 5 ವರ್ಷದಲ್ಲಿ ಮೋದಿ ವಿದೇಶಿ ಪ್ರವಾಸಕ್ಕಾದ ಖರ್ಚೆಷ್ಟು? ಎನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಇಂದು(ಡಿಸೆಂಬರ್ 09) 36 ವಿದೇಶಿ ಪ್ರವಾಸಗಳ ಖರ್ಚು-ವೆಚ್ಚದ ವಿವರವನ್ನು ರಾಜ್ಯಸಭೆಗೆ ನೀಡಿದೆ.
ನವದೆಹಲಿ: ಪ್ರಧಾನಿ ಮೋದಿ ಅವರು ತಮ್ಮ ವಿದೇಶಿ ಪ್ರವಾಸಕ್ಕೆ ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಕೋಟಿ-ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಲೇ ಇವೆ. ಇದರ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 5 ವರ್ಷದಲ್ಲಿ ಪ್ರತಿ ವಿದೇಶ ಪ್ರವಾಸಕ್ಕೂ ಖರ್ಚಾದ ಮೊತ್ತವೆಷ್ಟು ಎನ್ನುವುದನ್ನು ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯಸಭೆಗೆ ಲೆಕ್ಕಕೊಟ್ಟಿದೆ. ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮರಳೀಧರನ್ ಅವರು ಇಂದು(ಡಿಸೆಂಬರ್ 09) ಮೋದಿಯವರ 36 ವಿದೇಶಿ ಪ್ರವಾಸಗಳ ಖರ್ಚು ವೆಚ್ಚದ ಕುರಿತು ಲಿಖಿತ ವಿವರದೊಂದಿಗೆ ರಾಜ್ಯಸಭೆಗೆ ನೀಡಿದರು.
ಇದನ್ನೂ ಓದಿ: ವಿಪಕ್ಷಗಳ ವಿರೋಧದ ನಡುವೆಯೇ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ; ರಾಜ್ಯಸಭೆಯಲ್ಲಿ ಕೋಲಾಹಲ
ಮೋದಿ ವಿದೇಶ ಪ್ರವಾಸದ ಲೆಕ್ಕ
ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ಇತ್ತೀಚಿನ ಇಂಡೋನೇಷ್ಯಾ ಭೇಟಿಗಾಗಿ ಸರ್ಕಾರ 32,09,760 ರೂಪಾಯಿಗಳನ್ನು ಖರ್ಚು ಮಾಡಿದೆ. ಸೆಪ್ಟೆಂಬರ್ 26 ರಿಂದ 28ರವರೆಗೆ ಪ್ರಧಾನಿ ಮೋದಿ ಜಪಾನ್ ಪ್ರವಾಸ ಮಾಡಿದ್ದರು. ಈ ಪ್ರವಾಸಕ್ಕಾಗಿ ಕೇಂದ್ರ ಸರ್ಕಾರ 23,86,536 ರೂಪಾಯಿ ವೆಚ್ಚ ಮಾಡಿದೆ. ಇನ್ನು ಈ ವರ್ಷದ ಆರಂಭದಲ್ಲಿ ಮೋದಿ ಯೂರೋಪ್ ಪ್ರವಾಸಕ್ಕೆಂದು 2,15,61,304 ಖರ್ಚು ಮಾಡಿದೆ. 2019ರಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಸೆಪ್ಟೆಂಬರ್ 21 ರಿಂದ 28 ರವರೆಗಿನ ಅಮೆರಿಕ ಪ್ರವಾಸಕ್ಕೆ 23,27,09,000 ರೂಪಾಯಿ ಖರ್ಚು ಮಾಡಲಾಗಿದೆ ಕೇಂದ್ರ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಮರಳೀಧರನ್ ಮಾಹಿತಿ ನೀಡಿದರು.
2021 ಮಾರ್ಚ್ನಲ್ಲಿ ಪ್ರಧಾನಿ ಮೋದಿಯವರ ಬಾಂಗ್ಲಾದೇಶ ಭೇಟಿ, 2021ರ ಯುಎಸ್ ಭೇಟಿ ಮತ್ತು 2021 ರಲ್ಲಿ ಅವರ ಇಟಲಿ ಮತ್ತು ಯುಕೆ ಪ್ರವಾಸದ ವೆಚ್ಚವನ್ನು ಗೃಹ ವ್ಯವಹಾರಗಳ ಸಚಿವಾಲಯದಿಂದ ಭರಿಸಲಾಗಿದೆ ಎಂದರು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ವಿದೇಶಗಳ ಜೊತೆ ಭಾರತದ ಸಂಬಂಧ ಮತ್ತಷ್ಟು ವೃದ್ಧಿಯಾಗಿದೆ. ಅಲ್ಲದೇ ವಿದೇಶದಲ್ಲಿ ಭಾರತಕ್ಕೆ ಸಿಗುತ್ತಿರುವ ಗೌರವ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಭೇಟಿಗಳು ಭಾರತಕ್ಕೆ ತನ್ನ ಜಾಗತಿಕ ಪಾಲುದಾರರೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡಿದೆ. ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪೂರೈಸುವ ಮತ್ತು ವಿದೇಶಾಂಗ ನೀತಿ ಉದ್ದೇಶಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ಕೊಟ್ಟರು.
ವಿದೇಶ ಪ್ರವಾಸ ಭಾರತವು ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಲು ಮತ್ತು ಭಾರತದ ದೃಷ್ಟಿಕೋನವನ್ನು ಮುಂದಿಡಲು ಮತ್ತು ಜಾಗತಿಕ ವಿಷಯಗಳಾದ ಸುಧಾರಿತ ಬಹುಪಕ್ಷೀಯತೆ, ಭಯೋತ್ಪಾದನೆ, ಸೈಬರ್-ಸುರಕ್ಷತೆ ಇತ್ಯಾದಿಗಳ ಕುರಿತು ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಅನುವು ಮಾಡಿಕೊಟ್ಟಿದೆ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:18 pm, Fri, 9 December 22