ಲ್ಯಾಟರಲ್ ಎಂಟ್ರಿ ಜಾಹೀರಾತು ರದ್ದುಗೊಳಿಸುವಂತೆ ಯುಪಿಎಸ್‌ಸಿ ಅಧ್ಯಕ್ಷರಿಗೆ ಕೇಂದ್ರ ಸೂಚನೆ
ಕಳೆದ ಶನಿವಾರ ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸರ್ಕಾರದಲ್ಲಿನ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ 'ಪ್ರತಿಭಾವಂತ ಮತ್ತು ಉತ್ಸಾಹಿ ಭಾರತೀಯ ಪ್ರಜೆ'ಗಳಿಗಾಗಿ ಜಾಹೀರಾತು ನೀಡಿತ್ತು. 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಹುದ್ದೆಗಳಿಗೆ ನೇಮಕಾತಿಗೆ ಕೇಂದ್ರ ಮುಂದಾಗಿತ್ತು.
ದೆಹಲಿ ಆಗಸ್ಟ್ 20: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ನಿರ್ದೇಶನದಂತೆ ಲ್ಯಾಟರಲ್ ಎಂಟ್ರಿ ಜಾಹೀರಾತನ್ನು ರದ್ದುಗೊಳಿಸುವಂತೆ (lateral entry advertisement) ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ಅಧ್ಯಕ್ಷರು ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC) ಪತ್ರ ಬರೆದಿದ್ದಾರೆ. ಕಳೆದ ಶನಿವಾರ ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸರ್ಕಾರದಲ್ಲಿನ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ‘ಪ್ರತಿಭಾವಂತ ಮತ್ತು ಉತ್ಸಾಹಿ ಭಾರತೀಯ ಪ್ರಜೆ’ಗಳಿಗಾಗಿ ಜಾಹೀರಾತು ನೀಡಿತ್ತು. 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಹುದ್ದೆಗಳಿಗೆ ನೇಮಕಾತಿಗೆ ಕೇಂದ್ರ ಮುಂದಾಗಿತ್ತು. ಈ ಯೋಜನೆಯು ಸರ್ಕಾರಿ ಇಲಾಖೆಗಳಲ್ಲಿ ತಜ್ಞರನ್ನು (ಖಾಸಗಿ ವಲಯದವರನ್ನು ಒಳಗೊಂಡಂತೆ) ನೇಮಕ ಮಾಡುವ ಗುರಿಯನ್ನು ಹೊಂದಿದೆ.
2014 ರ ಮೊದಲು ಹೆಚ್ಚಿನ ಪ್ರಮುಖ ಲ್ಯಾಟರಲ್ ಎಂಟ್ರಿಗಳನ್ನು ತಾತ್ಕಾಲಿಕ ರೀತಿಯಲ್ಲಿ ಮಾಡಲಾಗಿದ್ದು, ಆಪಾದಿತ ಫೇವರಿಸಂ ಪ್ರಕರಣಗಳು ಸೇರಿದಂತೆ, ನಮ್ಮ ಸರ್ಕಾರದ ಪ್ರಯತ್ನಗಳು ಪ್ರಕ್ರಿಯೆಯನ್ನು ಸಾಂಸ್ಥಿಕವಾಗಿ ಚಾಲಿತ, ಪಾರದರ್ಶಕ ಮತ್ತು ಮುಕ್ತವಾಗಿಸುವುದಾಗಿದೆ. ಲ್ಯಾಟರಲ್ ಎಂಟ್ರಿ ಪ್ರಕ್ರಿಯೆಯು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳೊಂದಿಗೆ, ವಿಶೇಷವಾಗಿ ಮೀಸಲಾತಿಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಹೊಂದಿಕೆಯಾಗಬೇಕು ಎಂದು ಪ್ರಧಾನ ಮಂತ್ರಿ ದೃಢವಾದ ನಂಬಿಕೆ ಹೊಂದಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಬಿಜೆಪಿಯ ಮಿತ್ರ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ಮೀಸಲಾತಿ ನೀಡದೆ ಸರ್ಕಾರಿ ಹುದ್ದೆಗಳಲ್ಲಿ ಯಾವುದೇ ನೇಮಕಾತಿಗಳನ್ನು ಮಾಡುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಒಂದು ದಿನದ ನಂತರ ಈ ಕ್ರಮ ಬಂದಿದೆ. ಲ್ಯಾಟರಲ್ ಎಂಟ್ರಿ ಬಗ್ಗೆ ರಾಜಕೀಯ ಗದ್ದಲ ಉಲ್ಬಣಗೊಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ದಲಿತರು, ಒಬಿಸಿಗಳು ಮತ್ತು ಆದಿವಾಸಿಗಳ ಮೇಲೆ ದಾಳಿ ಎಂದು ಹೇಳಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಲ್ಯಾಟರಲ್ ಎಂಟ್ರಿಯ ಬಗ್ಗೆ ತಪ್ಪುದಾರಿಗೆಳೆಯುವ ಹಕ್ಕುಗಳನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೇಂದ್ರ ಆರೋಪಿಸಿದ್ದು, ಈ ಕ್ರಮವು ಅಖಿಲ ಭಾರತ ಸೇವೆಗಳಲ್ಲಿ SC/ST ಗಳ ನೇಮಕಾತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ 1970 ರ ದಶಕದಿಂದಲೂ ಆಡಳಿತ ವ್ಯವಸ್ಥೆಯಲ್ಲಿ ಲ್ಯಾಟರಲ್ ಪ್ರವೇಶ ನಡೆಯುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಈ ಹಿಂದೆ ಕೈಗೊಂಡ ಇಂತಹ ಉಪಕ್ರಮಗಳಿಗೆ ಪ್ರಮುಖ ಉದಾಹರಣೆಗಳಾಗಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸರ್ಕಾರವು ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ಲೋಕಸಭೆಯ ವಿರೋಧ ಪಕ್ಷದ ನಾಯಕ ಮನಮೋಹನ್ ಸಿಂಗ್ ಅವರನ್ನು 1976 ರಲ್ಲಿ ಲ್ಯಾಟರಲ್ ಎಂಟ್ರಿ ಮಾರ್ಗದ ಮೂಲಕ ಹಣಕಾಸು ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ನೀವು ಲ್ಯಾಟರಲ್ ಎಂಟ್ರಿಯನ್ನು ಪ್ರಾರಂಭಿಸಿದ್ದೀರಿ. ಪ್ರಧಾನಿ ಮೋದಿ ಅದನ್ನು ಕ್ರಮಬದ್ಧಗೊಳಿಸಿದ್ದಾರೆ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: Kolkata murder case: ಆರ್‌ಜಿ ಕರ್ ಆಸ್ಪತ್ರೆಗೆ ಸಿಐಎಸ್ಎಫ್ ಭದ್ರತೆ ನೀಡಲು ಸುಪ್ರೀಂಕೋರ್ಟ್ ಆದೇಶ
ಲ್ಯಾಟರಲ್ ಎಂಟ್ರಿ ಎಂದರೇನು?
ಐಎಎಸ್‌ನಂತಹ ಆಡಳಿತಾತ್ಮಕ ಹುದ್ದೆಗಳಿಗೆ ಲೋಕ ಸೇವಾ ಆಯೋಗ ಸರ್ಕಾರ ಇಲಾಖೆಗಳಲ್ಲಿನ ಮಧ್ಯಮ ಹಾಗೂ ಹಿರಿಯ ಹುದ್ದೆಗಳಿಗಾಗಿ ತನ್ನ ಸಾಂಪ್ರದಾಯಿಕ ಸರ್ಕಾರಿ ಸೇವಾ ಕೇಡರ್ ಹೊರತು ಪಡಿಸಿ ಇತರ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಇದನ್ನೇ ಲ್ಯಾಟರಲ್ ಎಂಟ್ರಿ ಎಂದು ಹೇಳಲಾಗುತ್ತದೆ. ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳನ್ನು ಸಾಮಾನ್ಯವಾಗಿ ಮೂರರಿಂದ ಐದು ವರ್ಷಗಳ ಅವಧಿಯ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ