ಡೆಹ್ರಾಡೂನ್: ಸುಮಾರು 15 ದಿನಗಳ ಹಿಂದೆ ಮೇ 10ರಂದು ಉತ್ತರಾಖಂಡದಲ್ಲಿ ಚಾರ್ ಧಾಮ ಯಾತ್ರೆ (Char Dham Yatra 2024) ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಬದರಿನಾಥ್ (Badrinath), ಕೇದಾರನಾಥ (Kedarnath), ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳನ್ನು ಒಳಗೊಂಡಿರುವ ತೀರ್ಥಯಾತ್ರೆಗೆ ಪ್ರತಿದಿನ ಸರಾಸರಿ 70,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಿರಂತರವಾಗಿ ಬರುತ್ತಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗರ್ವಾಲ್ ಕಮಿಷನರ್ ವಿನಯ್ ಶಂಕರ್ ಪಾಂಡೆ, “ಇದುವರೆಗೆ 52 ಚಾರ್ ಧಾಮ ಯಾತ್ರಿಕರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಾಗಿ ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು” ಎಂದು ಹೇಳಿದ್ದಾರೆ. ಗಂಗೋತ್ರಿಯಲ್ಲಿ ಮೂವರು, ಯಮುನೋತ್ರಿಯಲ್ಲಿ 12, ಬದರಿನಾಥದಲ್ಲಿ 14 ಮತ್ತು ಕೇದಾರನಾಥದಲ್ಲಿ 23 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Char Dham Yatra 2024: ಕಳೆದ 10 ದಿನಗಳಲ್ಲಿ ಚಾರ್ ಧಾಮ ಯಾತ್ರೆಗೆ 6 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ
50 ವರ್ಷ ಮೇಲ್ಪಟ್ಟ ಭಕ್ತರಿಗೆ ವೈದ್ಯಕೀಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಹಿಮಾಲಯದ ದೇವಾಲಯಗಳಿಗೆ ಹೋಗುವ ಮಾರ್ಗದಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಯಾತ್ರಾರ್ಥಿಗಳು ವೈದ್ಯಕೀಯವಾಗಿ ಸಾಕಷ್ಟು ಫಿಟ್ ಆಗಿಲ್ಲದಿದ್ದರೆ ಪ್ರಯಾಣಿಸದಂತೆ ಸೂಚಿಸಲಾಗಿದೆ. ಚಾರ್ ಧಾಮ ಯಾತ್ರೆಯ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದುವರೆಗೆ 9.67 ಲಕ್ಷ ಭಕ್ತರು ಚಾರ್‌ಧಾಮ್‌ಗೆ ಭೇಟಿ ನೀಡಿದ್ದಾರೆ.
ಗಂಗೋತ್ರಿ ಮತ್ತು ಯಮುನೋತ್ರಿ ಧಾಮ ಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಳೆದ 14 ದಿನಗಳಲ್ಲಿ 15 ಮಂದಿ ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಪೈಕಿ 12 ಸಾವುಗಳು ಯಮುನೋತ್ರಿ ಧಾಮದಲ್ಲಿ ಮತ್ತು 3 ಸಾವುಗಳು ಗಂಗೋತ್ರಿ ಧಾಮದಲ್ಲಿ ಸಂಭವಿಸಿವೆ. ಇದನ್ನು ಕಂಡ ಉತ್ತರಾಖಂಡದ ಆರೋಗ್ಯ ಇಲಾಖೆ ಎಚ್ಚೆತ್ತಿದ್ದು, ಹೃದ್ರೋಗದಿಂದ ಬಳಲುತ್ತಿರುವ ಭಕ್ತರ ಮೇಲೆ ವಿಶೇಷ ನಿಗಾ ಇರಿಸಿದೆ. ಅಂತಹ ಭಕ್ತರು ಚಾರ್ ಧಾಮ ಯಾತ್ರೆಗೆ ಬರದಂತೆ ಇಲಾಖೆ ಸೂಚಿಸುತ್ತಿದೆ.
ಇದನ್ನೂ ಓದಿ: Char Dham Yatra 2024: ಚಾರ್ ಧಾಮ್ ಯಾತ್ರೆ; ಯಮುನೋತ್ರಿ ಮಾರ್ಗದಲ್ಲಿ ಸೆಕ್ಷನ್ 144 ಹೇರಿಕೆ, ಕುದುರೆಗಳ ಬಳಕೆಗೆ ಮಿತಿ
ಹೃದಯ ಸಂಬಂಧಿ ಕಾಯಿಲೆ ಇರುವ ಭಕ್ತರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಬಾರದು ಎಂದು ಮುಖ್ಯ ಕಾರ್ಯದರ್ಶಿ ಆರ್ ಮೀನಾಕ್ಷಿ ಸುಂದರಂ ಹೇಳಿದ್ದಾರೆ. ಅಂತಹ ಭಕ್ತರಿಗೆ ಮತ್ತು ನೋಂದಣಿ ಇಲ್ಲದವರಿಗೆ ರಾಜ್ಯ ಸರ್ಕಾರವು ಇತರ ರಾಜ್ಯಗಳಲ್ಲಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ