
ನವದೆಹಲಿ, ಅಕ್ಟೋಬರ್ 14: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ನಿಷೇಧಿತ ಜಂತರ್ ಮಂತರ್ ಪ್ರದೇಶಕ್ಕೆ ಬ್ಯಾರಿಕೇಡ್ ಮುರಿದು ಅಕ್ರಮವಾಗಿ ನುಸುಳಿದ್ದ ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರಿಗೆ ದೆಹಲಿ ನ್ಯಾಯಾಲಯವು ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವಿಶೇಷವೆಂದರೆ, ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಹುಟ್ಟುಹಬ್ಬದಂದೇ ನ್ಯಾಯಾಲಯ ಈ ಆದೇಶ ನೀಡಿದ್ದು, ಹುಟ್ಟುಹಬ್ಬದ ದಿನವೇ ಅವರು ತಿಹಾರ್ ಜೈಲು ಪಾಲಾಗಿದ್ದಾರೆ.
ಭಾನುವಾರವಷ್ಟೇ ಷರತ್ತುಬದ್ಧ ಜಾಮೀನು ಪಡೆದಿದ್ದ ಈ ಇಬ್ಬರೂ ಮುಖಂಡರು, ಸೋಮವಾರ ಮತ್ತೆ ಜಂತರ್ ಮಂತರ್ ಒಳಗೆ ಬಲವಂತವಾಗಿ ನುಗ್ಗಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ನಿಷೇಧಿತ ಆವರಣವನ್ನು ಅತಿಕ್ರಮಿಸಿದ ಆರೋಪದಡಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಇಬ್ಬರನ್ನೂ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.
ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಕೋರ್ಟ್ ನೀಡಿದ್ದ ಆದೇಶದ ಪ್ರಕಾರ, ಮುಂದಿನ ಒಂದು ವರ್ಷ ಶಾಂತಿ ಕದಡಬಾರದು ಎಂದು ಇವರಿಬ್ಬರು 50,000 ರೂ. ಮುಚ್ಚಳಿಕೆ ಬಾಂಡ್ಗೆ ಸಹಿ ಹಾಕಿದ್ದರು. ಜಾಮೀನು ಪಡೆದ 24 ಗಂಟೆಯೊಳಗೆ ನಿಷೇಧಾಜ್ಞೆ ಉಲ್ಲಂಘಿಸಿ ಮತ್ತೆ ಪ್ರತಿಭಟನೆಗೆ ಧುಮುಕಿದ್ದರಿಂದ, ಹಳೆಯ ಜಾಮೀನು ರದ್ದಾಗುವುದರ ಜೊತೆಗೆ ಶ್ಯೂರಿಟಿ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಕಾನೂನು ಮೂಲಗಳು ತಿಳಿಸಿವೆ.
ಮತ್ತಷ್ಟು ಓದಿ: ಪ್ರತಿಭಟನೆ ಮಾಡೋಕೂ ಲಕ್ಷ ಲಕ್ಷ ಹಣ ಕೊಡ್ಬೇಕು, ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಈ ವರ್ಷ 3 ದಿನ ಮಾತ್ರ ಅವಕಾಶ
ಮಂಗಳವಾರ ಅಶುತೋಷ್ ರಂಕಾ ಅವರ ಜನ್ಮದಿನವಾಗಿದ್ದು, ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುತ್ತಿದ್ದ ವೇಳೆಯಲ್ಲೇ ನ್ಯಾಯಾಲಯ ಅವರನ್ನು ಜೈಲಿಗೆ ರವಾನಿಸಿದೆ. ಮಂಗಳವಾರ ಸಂಜೆ ನಡೆದ ರಾಹುಲ್ ಗಾಂಧಿ ಅವರ ‘ಹೈ ಟೀ’ ಸಭೆಯಲ್ಲಿ ‘ಇಂಡಿ’ ಮೈತ್ರಿಕೂಟದ ಪಕ್ಷಗಳು ಸಿಜೆಪಿ ಪ್ರತಿಭಟನೆಯಿಂದ ಅಧಿಕೃತವಾಗಿ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿವೆ. ಇದರಿಂದಾಗಿ ಸಿಜೆಪಿ ನಾಯಕರು ವಿರೋಧ ಪಕ್ಷಗಳ ಪ್ರಮುಖ ಬೆಂಬಲವಿಲ್ಲದೆ ಏಕಾಂಗಿ ಕಾನೂನು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ದೆಹಲಿಗೆ ಮರಳುತ್ತಿದ್ದು, ನಾಯಕರ ಬಂಧನವನ್ನು ಖಂಡಿಸಿ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಜಂತರ್ ಮಂತರ್ ಸುತ್ತಮುತ್ತ ದೆಹಲಿ ಪೊಲೀಸರ ಬಿಗಿ ಕಣ್ಗಾವಲು ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Wed, 14 October 26