ನಿಷೇಧಾಜ್ಞೆ ನಡುವೆಯೂ ಬ್ಯಾರಿಕೇಡ್ ಮುರಿದು ಜಂತರ್ ಮಂತರ್‌ಗೆ ನುಗ್ಗಿದ ಸಿಜೆಪಿ ನಾಯಕರು: ಸೌರವ್ ದಾಸ್, ಅಶುತೋಷ್ ರಂಕಾ ಮತ್ತೆ ವಶಕ್ಕೆ
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ, ನಿಷೇಧಾಜ್ಞೆ ನಡುವೆಯೂ ಜಂತರ್ ಮಂತರ್‌ಗೆ ನುಗ್ಗಿದ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ ಈ ನಾಯಕರು ಪೊಲೀಸರ ಬ್ಯಾರಿಕೇಡ್ ಮುರಿದು ಪ್ರವೇಶಿಸಿದ್ದು, ಅವರ 50,000 ರೂ. ಬಾಂಡ್ ರದ್ದಾಗುವ ಭೀತಿಯಿದೆ. ರಾಜಧಾನಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ನವದೆಹಲಿ, ಅಕ್ಟೋಬರ್ 13: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮತ್ತು ದೆಹಲಿ ಪೊಲೀಸರ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ. ಪೊಲೀಸರ ಬಿಗಿ ಭದ್ರತೆ ಹಾಗೂ ನಿರ್ಬಂಧಿತ ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೆ ಜಂತರ್ ಮಂತರ್‌ನೊಳಗೆ ನುಸುಳಿದ ಸಿಜೆಪಿ ಸಹ-ಸಂಚಾಲಕ ಸೌರವ್ ದಾಸ್ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರನ್ನು ದೆಹಲಿ ಪೊಲೀಸರು ಸೋಮವಾರ ಸ್ಥಳದಲ್ಲೇ ವಶಕ್ಕೆ ಪಡೆದು ಬಂಧಿಸಿದ್ದಾರೆ.
ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ನಾಯಕರು ಮತ್ತೆ ಪ್ರತಿಭಟನಾ ಸ್ಥಳಕ್ಕೆ ಲಗ್ಗೆ ಇಟ್ಟಿದ್ದು, ರಾಜಧಾನಿಯಲ್ಲಿ ತೀವ್ರ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗೃಹ ಸಚಿವಾಲಯವು ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ರದ್ದುಗೊಳಿಸಿ, ಸುತ್ತಮುತ್ತ ಸೆಕ್ಷನ್ 163 (ಹಿಂದಿನ ಸೆಕ್ಷನ್ 144) ಜಾರಿಗೊಳಿಸಿತ್ತು. ಆದಾಗ್ಯೂ, ಮಧ್ಯಾಹ್ನದ ವೇಳೆಗೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ, ಪೊಲೀಸರ ಮೊದಲ ಸುತ್ತಿನ ಬ್ಯಾರಿಕೇಡ್‌ಗಳನ್ನು ತಳ್ಳಿ ನಿಷೇಧಿತ ಪ್ರದೇಶಕ್ಕೆ ನುಗ್ಗಿದರು.
ಪೊಲೀಸರೊಂದಿಗೆ ತಳ್ಳಾಟ: ಜಂತರ್ ಮಂತರ್ ಗೇಟ್ ಬಳಿ ಪೊಲೀಸರು ಇವರನ್ನು ತಡೆದಾಗ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಇಬ್ಬರೂ ನಾಯಕರನ್ನು ಬಲವಂತವಾಗಿ ಎತ್ತಿ ಪೊಲೀಸ್ ವ್ಯಾನ್‌ಗೆ ಹಾಕಿ ಅಪರಿಚಿತ ಪೊಲೀಸ್ ಠಾಣೆಗೆ ಕರೆದೊಯ್ದರು.
ಮತ್ತಷ್ಟು ಓದಿ: ಎಸ್‌ಐಆರ್ ಅಕ್ರಮ; ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ರಾಹುಲ್ ಗಾಂಧಿ
50,000 ಬಾಂಡ್ ರದ್ದಾಗುವ ಭೀತಿ: ಭಾನುವಾರವಷ್ಟೇ ದೆಹಲಿ ಕಂಟೋನ್ಮೆಂಟ್‌ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಕೋರ್ಟ್, ಮುಂದಿನ ಒಂದು ವರ್ಷದವರೆಗೆ ಸಾರ್ವಜನಿಕ ಶಾಂತಿ ಕದಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂಬ 50,000 ರೂ. ಶ್ಯೂರಿಟಿ ಬಾಂಡ್ ಷರತ್ತಿನ ಮೇಲೆ ಇವರನ್ನು ಬಿಡುಗಡೆ ಮಾಡಿತ್ತು.
ಜಾಮೀನು ರದ್ದು ಸಾಧ್ಯತೆ: ಈಗ ನಿಷೇಧಾಜ್ಞೆ ಉಲ್ಲಂಘಿಸಿ ಮತ್ತೆ ಜಂತರ್ ಮಂತರ್‌ಗೆ ನುಗ್ಗಿರುವುದರಿಂದ, ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪದಡಿ ಇವರ ಜಾಮೀನು ರದ್ದಾಗುವ ಮತ್ತು ಶ್ಯೂರಿಟಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
#WATCH | Cockroach Janta Party (CJP) Chief Spokesperson Saurav Das and its National Spokesperson Ashutosh Ranka had arrived at Jantar Mantar. Both of them have been detained by the Delhi Police.
(Video: Delhi Police) https://t.co/seS0edOCHA
— ANI (@ANI) October 13, 2026
ಸ್ಥಳ ಬದಲಾವಣೆಗೆ ಸಿಜೆಪಿ ವಿರೋಧ: ಸರ್ಕಾರವು ಪ್ರತಿಭಟನೆಗಾಗಿ ಜಂತರ್ ಮಂತರ್ ರದ್ದುಪಡಿಸಿ ರಾಮಲೀಲಾ ಮೈದಾನ, ಬುರಾರಿ ಮತ್ತು ಸಿಬಿಡಿ ಮೈದಾನಗಳನ್ನು ನಿಗದಿಪಡಿಸಿದ್ದರೂ, “ಚುನಾವಣಾ ಆಯೋಗ ಹಾಗೂ ಸಂಸತ್ತಿನ ಬಳಿಯೇ ನಮ್ಮ ಧ್ವನಿ ಕೇಳಬೇಕು, ನಗರದ ಹೊರವಲಯದ ಮೈದಾನಗಳಿಗೆ ನಾವು ಹೋಗುವುದಿಲ್ಲ” ಎಂದು ಸಿಜೆಪಿ ಪಟ್ಟು ಹಿಡಿದಿತ್ತು.
ದೆಹಲಿಯಲ್ಲಿ ಮುಂದುವರೆದ ಹೈ ಅಲರ್ಟ್: ಮತ್ತೊಬ್ಬ ಸಂಸ್ಥಾಪಕ ಅಭಿಜಿತ್ ದಿಪ್ಕೆ ತಮ್ಮ ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ದೆಹಲಿಗೆ ಮರಳುತ್ತಿದ್ದು, ಮಂಗಳವಾರ ಮತ್ತಷ್ಟು ಕಾರ್ಯಕರ್ತರು ಬೀದಿಗಿಳಿಯುವ ಮುನ್ಸೂಚನೆ ಇರುವುದರಿಂದ ನವದೆಹಲಿ ವ್ಯಾಪ್ತಿಯಲ್ಲಿ ನಾಕಾಬಂದಿಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:58 am, Tue, 13 October 26




