ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರವಾಹದಿಂದ ದಿಢೀರ್ ಮೇಘಸ್ಫೋಟ ಉಂಟಾಗಿದೆ. ಪ್ರವಾಹದ ನೀರಿನಲ್ಲಿ 200ಕ್ಕೂ ಹೆಚ್ಚು ವಾಹನಗಳು ಕೊಚ್ಚಿಹೋಗಿವೆ. ರಜೌರಿ ಹಾಗೂ ಕಿಸ್ತ್ವಾರದಲ್ಲಿ ಪ್ರವಾಹದಿಂದ ಮೇಘಸ್ಫೋಟದ ಬಳಿಕ ಭೂಕುಸಿತ ಉಂಟಾಗಿ ಅವಘಡ ಸಂಭವಿಸಿದೆ. ಜಮ್ಮು-ಕಾಶ್ಮೀರದಲ್ಲಿ ಪ್ರವಾಹದಲ್ಲಿ ಸಿಲುಕಿ ಇದುವರೆಗೂ 11 ಜನ ಸಾವನ್ನಪ್ಪಿದ್ದಾರೆ. ಉತ್ತರ ಕಾಶ್ಮೀರದ ಬಾಂಡಿಪೋರಾ ಜಿಲ್ಲೆಯ ಗುರೇಜ್ ವಲಯದ ದಾವರ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಭೀಕರ ಮೇಘಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಭಾರಿ ಪ್ರವಾಹ ಉಂಟಾಗಿದ್ದು, ಜಾನುವಾರು ಕೊಟ್ಟಿಗೆಯೊಂದು ಧ್ವಂಸಗೊಂಡಿದೆ. ರಸ್ತೆಯ ಒಂದು ಭಾಗ ಕೊಚ್ಚಿಹೋಗಿದೆ

ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ, ಭೂಕುಸಿತ; 11 ಜನ ಸಾವು, ಹಲವರು ನಾಪತ್ತೆ
Jammu Kashmir Cloudburst
Image Credit source: PTI

Updated on: Jul 19, 2026 | 2:18 PM

ಪೂಂಚ್, ಜುಲೈ 19: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir Flood) ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಇಂದು ಕೂಡ ಮುಂದುವರಿದಿದ್ದು, ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿಯಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ ಒಟ್ಟು 11 ಜನರು ಬಲಿಯಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಹುಡುಕಾಟ ಮತ್ತು ಸಿಲುಕಿರುವ ನಿವಾಸಿಗಳ ರಕ್ಷಣೆಗಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.

ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಭೂಕುಸಿತ ಮತ್ತು ಮನೆಗಳು ಕುಸಿದು ಬಿದ್ದಿದೆ. ಪೂಂಚ್‌ನ ಸುರನ್‌ಕೋಟ್ ತಹಸಿಲ್ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಇಲ್ಲಿಯೇ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪ್ರವಾಹದಲ್ಲಿ ಮುಳುಗಿದ ರಜೌರಿ:

ರಜೌರಿ ಜಿಲ್ಲೆಯಲ್ಲೂ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರು ವಸತಿ ಪ್ರದೇಶಗಳು ಮತ್ತು ತಗ್ಗು ಪ್ರದೇಶಗಳಿಗೆ ನುಗ್ಗಿದ್ದರಿಂದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹದ ರಕ್ಷಣಾ ಗೋಡೆಗಳು ಕುಸಿದು ಬಿದ್ದಿದ್ದರಿಂದ ಹಲವು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರಜೌರಿ ಪಟ್ಟಣದ ನದಿಯೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.


ಇದನ್ನೂ ಓದಿ: ಜಮ್ಮು-ಕಾಶ್ಮೀರವನ್ನು ಪಾಕ್ ಭಾಗವೆಂದು ತೋರಿಸಿದ ಬಾಂಗ್ಲಾ; ಭಾರತೀಯ ರಾಜತಾಂತ್ರಿಕ ಅಧಿಕಾರಿ ಪೂಜಾ ಝಾ ಆಕ್ಷೇಪ

ದೆಹಲಿ ಪ್ರವಾಸ ಮೊಟಕುಗೊಳಿಸಿದ ಸಿಎಂ ಒಮರ್ ಅಬ್ದುಲ್ಲಾ:

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ದೆಹಲಿ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೂ ಸಹ ರಕ್ಷಣಾ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದು, ಪರಿಹಾರ ಕಾರ್ಯವನ್ನು ಚುರುಕುಗೊಳಿಸಲು ಆದೇಶಿಸಿದ್ದಾರೆ.


ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಸಿಎಂ ಒಮರ್ ಅಬ್ದುಲ್ಲಾ ಅವರೊಂದಿಗೆ ಫೋನ್​ನಲ್ಲಿ ಮಾತನಾಡಿ, ಪ್ರವಾಹದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ರಾಯಗಢ ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!

ಜುಲೈ 23ರವರೆಗೆ ಭಾರಿ ಮಳೆಯ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆ (IMD) ಜುಲೈ 23ರವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಪತ್ತು ನಿರ್ವಹಣಾ ಪಡೆಗಳನ್ನು (SDRF, NDRF) ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us