ಕಲ್ಲಿದ್ದಲು ಸಂಕಷ್ಟದ ಆತಂಕದ ನಡುವೆ ಅಗತ್ಯ ಪ್ರಮಾಣದ ಪೂರೈಕೆಯ ಭರವಸೆ ನೀಡಿದ ಪ್ರಲ್ಹಾದ ಜೋಶಿ

ಕಲ್ಲಿದ್ದಲು ಸಮಸ್ಯೆ ಎದುರಾಗಬಹುದು ಎಂಬ ವಿವಿಧ ರಾಜ್ಯಗಳ ಆತಂಕಗಳ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ.

ಕಲ್ಲಿದ್ದಲು ಸಂಕಷ್ಟದ ಆತಂಕದ ನಡುವೆ ಅಗತ್ಯ ಪ್ರಮಾಣದ ಪೂರೈಕೆಯ ಭರವಸೆ ನೀಡಿದ ಪ್ರಲ್ಹಾದ ಜೋಶಿ
ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ

ದೆಹಲಿ: ದೇಶದಲ್ಲಿ ಬೇಡಿಕೆಯಿರುವಷ್ಟು ಪ್ರಮಾಣದ ಕಲ್ಲಿದ್ದಲು ಪೂರೈಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ 22 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ. ಸೋಮವಾರ ದಾಖಲೆ ಪ್ರಮಾಣದ ಕಲ್ಲಿದ್ದಲು ಉತ್ಪಾದನೆಯಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಕಲ್ಲಿದ್ದಲು ಸಮಸ್ಯೆ ಎದುರಾಗಬಹುದು ಎಂಬ ವಿವಿಧ ರಾಜ್ಯಗಳ ಆತಂಕಗಳ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ.

‘ದೇಶದಲ್ಲಿ ಸೋಮವಾರ 19.5 ಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಯಾಗಿದೆ. ಇದು ಈವರೆಗಿನ ದಾಖಲೆ. ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮುಂದುವರೆಸುತ್ತೇವೆ. ಮುಂಗಾರು ಮುಗಿಯುವ ಹೊತ್ತಿಗೆ ಕಲ್ಲಿದ್ದಲು ಸರಬರಾಜು ಪ್ರಮಾಣ ಹೆಚ್ಚಾಗುವ ಭರವಸೆಯಿದೆ’ ಎಂದು ಜೋಶಿ ಹೇಳಿದರು. ಅಕ್ಟೋಬರ್ 21ರ ನಂತರ 20 ಲಕ್ಷ ಟನ್​ಗೆ ಕಲ್ಲಿದ್ದಲು ಉತ್ಪಾದನೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಜೋಶಿ ತಿಳಿಸಿದ್ದರು. ಅಗತ್ಯಕ್ಕೆ ತಕ್ಕಂತೆ ಕಲ್ಲಿದ್ದಲು ಪೂರೈಸಲಾಗುವುದು ಎಂದು ಇಡೀ ದೇಶಕ್ಕೆ ನಾವು ಭರವಸೆ ನೀಡಲು ಇಚ್ಛಿಸುತ್ತೇವೆ ಎಂದು ಸರ್ಕಾರದ ಪರವಾಗಿ ಜೋಶಿ ಭರವಸೆ ನೀಡಿದರು.

ಐದು ರಾಜ್ಯಗಳು ಅನಿಯಮಿತ ಲೋಡ್​ ಶೆಡಿಂಗ್ ಸ್ಥಿತಿ ತಲೆದೋರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ವಿದ್ಯುತ್ ಉತ್ಪಾದನೆ ಸ್ಥಿತಿಗತಿ ಅವಲೋಕಿಸಿದರು. ದೆಹಲಿ, ಪಂಜಾಬ್, ರಾಜಸ್ತಾನ, ಬಿಹಾರ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳು ಇಂಧನ ಕೊರತೆ ಎದುರಿಸುತ್ತಿವೆ. ದೇಶದ ಶೇ 70ರಷ್ಟು ವಿದ್ಯುತ್ ಉತ್ಪಾದನೆ ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಆಗುತ್ತಿದೆ.

ಪರಿಸ್ಥಿತಿಯ ಬಗ್ಗೆ ರಾಜ್ಯಗಳು ವ್ಯಕ್ತಪಡಿಸಿರುವ ಆತಂಕವನ್ನು ಕೇಂದ್ರ ಸರ್ಕಾರವು ಈ ಮೊದಲು ತಳ್ಳಿ ಹಾಕಿತ್ತು. ಕೇಂದ್ರ ಇಂಧನ ಸಚಿವ ಆರ್​.ಕೆ.ಸಿಂಗ್, ದೇಶದ ವಿದ್ಯುತ್ ಸ್ಥಾವರಗಳಿಗೆ ಅಗತ್ಯ ಪ್ರಮಾಣದ ಕಲ್ಲಿದ್ದಲು ದಾಸ್ತಾನು ಇದೆ ಎಂದು ಹೇಳಿದ್ದರು. ಕೆಲ ಅಧಿಕಾರಿಗಳು ಮತ್ತು ವಿತರಕರಿಂದ ತಪ್ಪು ಸಂದೇಶಗಳು ಹೋಗಿದ್ದ ಹಿನ್ನೆಲೆಯಲ್ಲಿ ಇಂಥ ಪರಿಸ್ಥಿತಿ ತಲೆದೋರಿದೆ ಎಂದು ಹೇಳಿದ್ದರು.

ಕಲ್ಲಿದ್ದಲು ಗಣಿಗಳಿಗೆ ಮಳೆನೀರು ನುಗ್ಗುವ ಕಾರಣ ಮಳೆಗಾಲದಲ್ಲಿ ಕಲ್ಲಿದ್ದಲು ಉತ್ಪಾದನೆ ಸಹಜವಾಗಿಯೇ ಕಡಿಮೆಯಾಗುತ್ತದೆ. ಈ ವರ್ಷ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಲ್ಲಿದ್ದಲು ಧಾರಣೆ ಏರಿಕೆಯಾಗಿರುವ ಕಾರಣ ದೇಶಕ್ಕೆ ಕಲ್ಲಿದ್ದಲು ಬರುವ ಪ್ರಮಾಣವೂ ಕಡಿಮೆಯಾಗಿದೆ. ಈ ಎಲ್ಲದರ ನಡುವೆಯೂ ದೇಶದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿಲ್ಲ. ಯಾವುದೇ ರಾಜ್ಯವು ಬೇಡಿಕೆ ಸಲ್ಲಿಸಿದರೆ ನಾವು ವಿದ್ಯುತ್ ಪೂರೈಸಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದರು.

ಇದನ್ನೂ ಓದಿ: ಗಣಿ ಕ್ಷೇತ್ರದಲ್ಲಿ ಹಲವು ಬದಲಾವಣೆಗೆ ಕೇಂದ್ರದ ಚಿಂತನೆ: ಸುಳಿವು ನೀಡಿದ ಸಚಿವ ಪ್ರಲ್ಹಾದ ಜೋಶಿ
ಇದನ್ನೂ ಓದಿ: Coal Crisis ಕಲ್ಲಿದ್ದಲು ಬಿಕ್ಕಟ್ಟು: ದೇಶದಲ್ಲಿ ವಿದ್ಯುತ್ ಸಮಸ್ಯೆ ನಿರೀಕ್ಷಿತ; ಯಾವ ರಾಜ್ಯಗಳಲ್ಲಿ ಹೇಗಿದೆ ಪರಿಸ್ಥಿತಿ?

Read Full Article

Click on your DTH Provider to Add TV9 Kannada