Coimbatore Blast: ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಉಗ್ರರ ನಂಟು; ಐವರು ಆರೋಪಿಗಳ ಬಂಧನ
ತಮಿಳುನಾಡಿನ ಕೊಯಮತ್ತೂರಿನ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಕಾರಿನೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 25 ವರ್ಷದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾದ ಘಟನೆ ನಡೆದಿತ್ತು.
ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನಲ್ಲಿ ಕಾರು ಸ್ಫೋಟ (Coimbatore Car Blast) ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲಾಗಿದೆ. ಅಕ್ಟೋಬರ್ 23ರಂದು ಕೊಯಮತ್ತೂರಿನಲ್ಲಿ ಕಾರು ಸ್ಫೋಟಗೊಂಡು ಓರ್ವ ಮೃತಪಟ್ಟಿದ್ದರು. ತಮಿಳುನಾಡಿನ (Tamil Nadu) ಕೊಯಮತ್ತೂರಿನ ಕೊಟ್ಟೈ ಈಶ್ವರನ್ ದೇವಸ್ಥಾನದ ಬಳಿ ಕಾರಿನೊಳಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 25 ವರ್ಷದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾದ ಘಟನೆ ನಡೆದಿತ್ತು. ಈ ಘಟನೆಯು ಸ್ಥಳದಲ್ಲಿ ಆತಂಕವನ್ನು ಉಂಟುಮಾಡಿದ ನಂತರ ಪೊಲೀಸ್ ತಂಡವು ತಕ್ಷಣವೇ ಸ್ಥಳಕ್ಕೆ ಧಾವಿಸಿತ್ತು. ವ್ಯಕ್ತಿಯ ಸಾವಿನ ತನಿಖೆಯ ಸಂದರ್ಭದಲ್ಲಿ ಪೊಲೀಸರು ಇದರ ಹಿಂದೆ ಭಯೋತ್ಪಾದಕ ಸಂಚನ್ನು ಬಯಲಿಗೆಳೆದ ನಂತರ ಈ ಕಾರು ಸ್ಫೋಟ ಪ್ರಕರಣವು ದೊಡ್ಡ ತಿರುವು ಪಡೆದುಕೊಂಡಿದೆ.
ಮೃತರನ್ನು 25 ವರ್ಷದ ಜಮೇಜಾ ಮುಬಿನ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗಿತ್ತು. ಸಿಲಿಂಡರ್ ಸ್ಫೋಟ ಪ್ರಕರಣದ ತನಿಖೆ ಮುಂದುವರೆದಿದ್ದು, ಪೊಲೀಸರು ಜಮೇಜಾ ಅವರ ಮನೆಯಲ್ಲಿ ಶೋಧ ನಡೆಸಿದಾಗ ಕೆಲವು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಸ್ಫೋಟದ ದಿನದಂದು ಜಮೇಜಾ ಅವರ ನಿವಾಸದ ಹೊರಗೆ 4 ಜನರು ಗೋಣಿಚೀಲದಲ್ಲಿ ಸುತ್ತಿದ ವಸ್ತುವನ್ನು ಸಾಗಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊಯಮತ್ತೂರಿನ ಕಾರಿನ ಸಿಲಿಂಡರ್ ಸ್ಫೋಟಕ್ಕೂ ಶ್ರೀಲಂಕಾದ ಬಾಂಬ್ ಸ್ಫೋಟಕ್ಕೂ ಏನು ಸಂಬಂಧ?
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕೊಯಮತ್ತೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಐವರು ಆರೋಪಿಗಳನ್ನು ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್, ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮಾಯಿಲ್ ಮತ್ತು ಮುಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. ಆ ಐವರು ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಯಮತ್ತೂರು ಪೊಲೀಸ್ ಆಯುಕ್ತ ಬಾಲಕೃಷ್ಣನ್ ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯು 2019ರಲ್ಲಿ ಕೆಲವರನ್ನು ವಿಚಾರಣೆಗೊಳಪಡಿಸಿದೆ. ಎಲ್ಲಾ ಐವರು ಆರೋಪಿಗಳನ್ನು ನವೆಂಬರ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.