ಕಾಂಗ್ರೆಸ್ ಸರ್ಕಾರ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ರೂ. ಲೂಟಿ ಮಾಡಿದೆ; ಮೋದಿ ಆರೋಪ

|

Updated on: Nov 09, 2024 | 4:18 PM

ಕರ್ನಾಟಕಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಸಮಯದಲ್ಲಿ ಸುಲಿಗೆ ದುಪ್ಪಟ್ಟಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮದ್ಯದಂಗಡಿಯ ಮಾಲೀಕರಿಂದ 700 ಕೋಟಿ ರೂಪಾಯಿ ಸುಲಿಗೆ ಮಾಡಿದೆ ಎಂಬ ಆರೋಪವಿದೆ ಎಂದು ಮಹಾರಾಷ್ಟ್ರದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕದ ಮದ್ಯ ಮಾರಾಟಗಾರರಿಂದ 700 ಕೋಟಿ ರೂ. ಲೂಟಿ ಮಾಡಿದೆ; ಮೋದಿ ಆರೋಪ
ಅಕೋಲಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ
Follow us on

ಮುಂಬೈ: ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶವನ್ನು ಕಾಂಗ್ರೆಸ್ ಎಟಿಎಂಗಳಾಗಿ ಬಳಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಆರೋಪಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕೋಲಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಮದ್ಯ ಮಾರಾಟಗಾರರಿಂದ ಕಾಂಗ್ರೆಸ್ 700 ಕೋಟಿ ರೂ. ಲೂಟಿ ಮಾಡಿದೆ. ಎಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುತ್ತದೋ ಆ ರಾಜ್ಯ ಕಾಂಗ್ರೆಸ್‌ನ ರಾಜಮನೆತನಕ್ಕೆ ಎಟಿಎಂ ಆಗುತ್ತಿದೆ ಎಂದು ಟೀಕಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ಅವರ ಎಟಿಎಂಗಳಾಗಿ ಮಾರ್ಪಟ್ಟಿವೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮದ್ಯದಂಗಡಿ ಮಾಲೀಕರಿಂದ 700 ಕೋಟಿ ಲೂಟಿ ಮಾಡಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅವರು ಎಷ್ಟು ಲೂಟಿ ಮಾಡಬಹುದು ಎಂಬುದನ್ನು ನೀವು ಊಹಿಸಬಹುದು ಎಂದು ಮೋದಿ ಹೇಳಿದ್ದಾರೆ.


ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ಲಂಚಕ್ಕೆ ಬೇಸತ್ತ ಮಾಲೀಕರು, ರಾಜ್ಯಾದ್ಯಂತ ಈ ದಿನ ಮದ್ಯ ಮಾರಾಟ ಬಂದ್​ಗೆ ನಿರ್ಧಾರ

ಕಾಂಗ್ರೆಸ್‌ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ನ್ಯಾಯಾಲಯ ಅಥವಾ ದೇಶದ ಭಾವನೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶವು ಎಷ್ಟು ದುರ್ಬಲಗೊಳ್ಳುತ್ತದೆಯೋ ಅವರು ಹೆಚ್ಚು ಬಲಗೊಳ್ಳುತ್ತಾರೆ ಎಂಬುದು ಕಾಂಗ್ರೆಸ್‌ಗೆ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ವಿವಿಧ ಜಾತಿಗಳ ನಡುವೆ ಒಡಕು ಸೃಷ್ಟಿಸುತ್ತದೆ. ನಮ್ಮ ಜಾತಿಗಳು ಒಂದಾಗಲು ಬಿಡಲೇ ಇಲ್ಲ. ನಮ್ಮ ಜಾತಿಗಳು ಒಗ್ಗಟ್ಟಾಗಿ ಉಳಿಯದೇ ಪರಸ್ಪರ ಸಂಘರ್ಷಕ್ಕಿಳಿದರೆ ಕಾಂಗ್ರೆಸ್ ಅದರ ಲಾಭ ಪಡೆಯುತ್ತದೆ. ಎಸ್​ಸಿಗಳ ಹಕ್ಕುಗಳನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತದೆ. ಇದು ಅವರ ಪಿತೂರಿಯಾಗಿದೆ. ನೀವು ಜಾಗೃತರಾಗಿರಬೇಕು ಎಂದು ಮೋದಿ ಹೇಳಿದ್ದಾರೆ.


ಕೇಂದ್ರದ ತಮ್ಮ ಸರ್ಕಾರವು ದೇಶದ ಹಿಂದುಳಿದವರಿಗೆ ಹೆಚ್ಚುವರಿಯಾಗಿ 3 ಕೋಟಿ ಮನೆಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. “ಕಳೆದ 2 ಅವಧಿಯಲ್ಲಿ ನಮ್ಮ ಸರ್ಕಾರ ಬಡವರಿಗಾಗಿ 4 ಕೋಟಿ ಮನೆಗಳನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಅಂದು ನಿಗದಿಪಡಿಸಿದ ಗುರಿಯನ್ನು ಸಹ ಸಾಧಿಸಲಾಗಿದೆ. ಈಗ ನಾವು ಬಡವರಿಗಾಗಿ 3 ಕೋಟಿ ಹೆಚ್ಚು ಮನೆಗಳನ್ನು ನಿರ್ಮಿಸಲು ಪ್ರಾರಂಭಿಸುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ ಬಗ್ಗೆ ಎಲ್ಲಿಲ್ಲದ ಒಲವು: ಪ್ರಧಾನಿ ಮೋದಿ ಬಗ್ಗೆ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

“ಮಹಾರಾಷ್ಟ್ರದ ಜನರು 2014 ರಿಂದ 2024 ರವರೆಗೆ ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಮತ್ತು ಆಶೀರ್ವದಿಸಿದ್ದಾರೆ. ಇದು ಅವರ ದೇಶಭಕ್ತಿ, ರಾಜಕೀಯ ತಿಳುವಳಿಕೆ ಮತ್ತು ದೂರದೃಷ್ಟಿಯನ್ನು ತಿಳಿಸುತ್ತದೆ. ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುವುದು ನನಗೆ ಒಂದು ಅನನ್ಯ ಮತ್ತು ಸಂತೋಷಕರ ಅನುಭವವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ