ಕೋವಿಡ್-19 ಪಿಡುಗಿನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಸೋನಿಯಾ ಗಾಂಧಿ ಸಲಹೆ
ದೇಶದಾದ್ಯಂತ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವುದು ಹೇಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯಾಗಿತ್ತೆನ್ನುವುದನ್ನು ತಮ್ಮ ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಗುರುವಾರದಂದು ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಕೊವಿಡ್-19 ಸೋಂಕಿಗೆ ದುಡಿಯುವ ತಂದೆ ಇಲ್ಲವೇ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸುವ ಏರ್ಪಾಟು ಮಾಡಬೇಕೆಂದು ಹೇಳಿದ್ದಾರೆ. ಈ ಕಾರ್ಯಕ್ಕೆ ದೇಶದೆಲ್ಲೆಡೆ ಇರುವ ನವೋದಯ ವಿದ್ಯಾಲಯಗಳನ್ನು ಬಳಸಿಕೊಳ್ಳಬಹುದೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ತಮ್ಮ ಪತ್ರದಲ್ಲಿ ಸೋನಿಯಾ, ಅಂಥ ಮಕ್ಕಳಿಗೆ ನೆರವಾಗಿ ಉಜ್ವಲ ಭವಿಷ್ಯದ ನಿರೀಕ್ಷೆ ಹುಟ್ಟಿಸುವ ಬಾಧ್ಯತೆ ದೇಶದ ಮೇಲಿದೆ ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಕಾಂಗ್ರಸ್ ನಾಯಕ ಜಿ ಎಸ್ ಬಾಲಿ ಅವರು ರಾಜ್ಯದ ಕಂಗ್ರಾ ಜಿಲ್ಲೆಯಲ್ಲಿ ಕೋವಿಡ್ ಪಿಡುಗಿನಿಂದ ಅನಾಥರಾಗಿರುವ ಎಲ್ಲ ಮಕ್ಕಳನ್ನು ದತ್ತು ಪಡೆಯುವ ಘೋಷಣೆ ಮಾಡಿದ ಕೆಲ ದಿನಗಳ ನಂತರ ಸೋನಿಯಾ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ದೇಶದಾದ್ಯಂತ ನವೋದಯ ವಿದ್ಯಾಲಯಗಳನ್ನು ಸ್ಥಾಪಿಸುವುದು ಹೇಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯಾಗಿತ್ತೆನ್ನುವುದನ್ನು ತಮ್ಮ ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ. ಗ್ರಾಮಾಂತರ ಭಾಗದ ಪ್ರತಿಭಾವಂತ ಮಕ್ಕಳಿಗೆ ಅತ್ಯುತ್ತಮ ದರ್ಜೆಯ ಶಿಕ್ಷಣ ಅವರಿಗೆ ಸಾಧ್ಯವಾಗಬಹುದಾದ ಶುಲ್ಕದಲ್ಲಿ ಲಭ್ಯವಾಗಬೇಕೆನ್ನುವುದು ಅವರ ಕನಸಾಗಿತ್ತು ಎಂದು ಸೋನಿಯಾ ಹೇಳಿದ್ದಾರೆ.
ಕೊವಿಡ್-19 ಎರಡನೇ ಅಲೆ ವಿರುದ್ಧ ಭಾರತದ ಹೋರಾಟ ಜಾರಿಯಲ್ಲಿರುವಂತೆಯೇ, ಸಾವಿರಾರು ಮಕ್ಕಳು ತಮ್ಮ ತಂದೆ ತಾಯಿಗಳನ್ನು ಕಳೆದುಕೊಂಡು ದಿಕ್ಕಿಲ್ಲದವರಂತಾಗಿದ್ದಾರೆ ಎಂದು ಸೋನಿಯಾ ಹೇಳಿದ್ದಾರೆ. ಕೆಲ ಮಕ್ಕಳ ಒಬ್ಬ ಪಾಲಕರು ಜೀವಂತವಾಗಿದ್ದರೂ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಅವರನ್ನು ನೋಡಿಕೊಳ್ಳುವಂಥ ಸ್ಥಿತಿಯಲ್ಲಿ ಅವರಿಲ್ಲ ಎಂದು ಸೋನಿಯಾ ಹೇಳಿದ್ದಾರೆ.
ಸೋನಿಯಾ ಅವರ ಪುತ್ರ ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಟ್ವೀಟ್ನಲ್ಲಿ, ‘ಕೊವಿಡ್ನಿಂದಾಗಿ ತಮ್ಮ ಪಾಲಕರನ್ನು ಕಳೆದುಕೊಂಡಿರುವ ಮಕ್ಕಳು ಅತಿ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಅವರು ಮಕ್ಕಳ ಭವಿಷ್ಯವನ್ನು ಕಾಪಾಡುವ ಮತ್ತು ಎನ್ವಿಗಳಲ್ಲಿ ಉಚಿತ ಶಿಕ್ಷಣ ನೀಡುವ ಕುರಿತು ಒಂದು ಮಹತ್ತರವಾದ ಸಲಹೆಯನ್ನು ನೀಡಿದ್ದಾರೆ. ಭಾರತ ಸರ್ಕಾರ ಅದನ್ನು ಕಡೆಗಣಿಸಬಾರದು,’ ಅಂತ ಹೇಳಿದ್ದಾರೆ.
Children are amongst the worst hit by Covid trauma, many having lost their parents to the dreadful situation.
Congress President makes an important suggestion to safeguard their future & provide them free education at NVs.
It’s high time GOI listened! pic.twitter.com/vc6MaysIVc
— Rahul Gandhi (@RahulGandhi) May 20, 2021
ಪಿಡುಗಿನಿಂದಾಗಿ ಅನಾಥರಾಗಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ಪೋಸ್ಟ್ಗಳ ಬಗ್ಗೆ ಕಳೆದ ವಾರ ಎಚ್ಚರಿಸಿರುವ ಉತ್ತರ ಪ್ರದೇಶ ಪೊಲೀಸ್, ಅವು ಮಕ್ಕಳ ಕಳ್ಳ ಸಾಗಾಣಿಕೆಯ ಗ್ಯಾಂಗ್ಗಳಾಗಿರಬಹುದಾದ ಸಾಧ್ಯತೆಯಿದೆ ಎಂದು ಹೇಳಿದೆ.
ಮಂಗಳವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಂಕಿಗೆ ತಂದೆ-ತಾಯಿಗಳನ್ನು ಕಳೆದುಕೊಂಡಿರುವ ಮಕ್ಕಳಿಗೆ ಅವರು 25 ವರ್ಷದವರಾಗುವವರೆಗೆ ಪ್ರತಿ ತಿಂಗಳು 2,500 ರೂಪಾಯಿಗಳ ಧನ ಸಹಾಯ ಒದಗಿಸುವುದರ ಜೊತೆಗೆ ಉಚಿತ ಶಿಕ್ಷಣ ನೀಡುವ ಘೋಷಣೆಯನ್ನೂ ಮಾಡಿದರು.
ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಬಿಜೆಪಿ ಸರ್ಕಾರಗಳು ಸಹ ಅನಾಥರಾಗಿರುವ ಮಕ್ಕಳಿಗೆ ಕೆಲವು ಯೋಜನೆಗಳನ್ನು ಘೋಷಿಸಿ ಅವರ ಯೋಗಕ್ಷೇಮ ನೋಡಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಿವೆ.
ಇದನ್ನೂ ಓದಿ: ಕೊರೊನಾದಿಂದ ಅನಾಥರಾದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ನಮ್ಮದು: ಆದಿಚುಂಚನಗಿರಿ ಮಠ ಘೋಷಣೆ