ಸ್ಕಾಚ್, ವಿಸ್ಕಿ ಕುಡಿಯುವವರು ವಿದ್ಯಾವಂತರು; ಮಧ್ಯಪ್ರದೇಶ ಹೈಕೋರ್ಟ್ ಹೀಗೆ ಹೇಳಿದ್ದೇಕೆ?
'ಬ್ಲೆಂಡರ್ಸ್ ಪ್ರೈಡ್' ಟ್ರೇಡ್‌ಮಾರ್ಕ್ ಮತ್ತು 'ಇಂಪೀರಿಯಲ್ ಬ್ಲೂ' ಬಾಟಲಿಯ ವಿನ್ಯಾಸ ಒಂದೇ ರೀತಿ ಇದೆ ಎಂದು ಆರೋಪಿಸಿ ಜೆಕೆ ಎಂಟರ್‌ಪ್ರೈಸಸ್ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಪೆರ್ನೋಡ್ ರಿಕಾರ್ಡ್ ನ್ಯಾಯಾಲಯವನ್ನು ಕೋರಿತ್ತು.

ಸ್ಕಾಚ್, ವಿಸ್ಕಿಯ ಗ್ರಾಹಕರು ವಿದ್ಯಾವಂತರು ಮತ್ತು ಅವರು ಸಮಾಜದ ಶ್ರೀಮಂತ ವರ್ಗಕ್ಕೆ ಸೇರಿದವರು ಎಂದು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ಹೇಳಿದೆ. ಅವರು ಎರಡು ವಿಭಿನ್ನ ಬ್ರಾಂಡ್‌ಗಳ ಬಾಟಲಿಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸುವಷ್ಟು ವಿದ್ಯಾವಂತರು ಎಂದು ನ್ಯಾಯಾಲಯ ಹೇಳಿದೆ. ಬಾರ್ ಆ್ಯಂಡ್ ಬೆಂಚ್ ವರದಿಯ ಪ್ರಕಾರ, ಇಂದೋರ್ ಮೂಲದ ಕಂಪನಿಯಾದ ಜೆಕೆ ಎಂಟರ್‌ಪ್ರೈಸಸ್ ಅನ್ನು ‘ಲಂಡನ್ ಪ್ರೈಡ್’ ಮಾರ್ಕ್‌ನಡಿಯಲ್ಲಿ ಪಾನೀಯಗಳನ್ನು ತಯಾರಿಸುವುದನ್ನು ತಡೆಯಲು ಲಿಕ್ಕರ್ ಕಂಪನಿಯಾದ ಪೆರ್ನೋಡ್ ರಿಕಾರ್ಡ್ ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಈ ಹೇಳಿಕೆ ನೀಡಿದೆ.
‘ಬ್ಲೆಂಡರ್ಸ್ ಪ್ರೈಡ್’ ಟ್ರೇಡ್‌ಮಾರ್ಕ್ ಮತ್ತು ‘ಇಂಪೀರಿಯಲ್ ಬ್ಲೂ’ ಬಾಟಲಿಯ ವಿನ್ಯಾಸ ಒಂದೇ ರೀತಿ ಇದೆ. ನಿಯಮವನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಜೆಕೆ ಎಂಟರ್‌ಪ್ರೈಸಸ್ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಪೆರ್ನೋಡ್ ರಿಕಾರ್ಡ್ ನ್ಯಾಯಾಲಯವನ್ನು ಕೋರಿತ್ತು. ಜೆಕೆ ಎಂಟರ್‌ಪ್ರೈಸಸ್ ತನ್ನ ಗ್ರಾಹಕರನ್ನು ವಂಚಿಸಲು ‘ಲಂಡನ್ ಪ್ರೈಡ್’ ಮಾರ್ಕ್ ಅನ್ನು ಬಳಸುತ್ತಿದೆ ಎಂದು ರಿಕಾರ್ಡ್ ಆರೋಪಿಸಿತ್ತು.
ಇದನ್ನೂ ಓದಿ: ಸಿಒಪಿಡಿಗೂ ಅಸ್ತಮಾಗೂ ಏನು ವ್ಯತ್ಯಾಸ?; ಯಾವುದು ಹೆಚ್ಚು ಅಪಾಯಕಾರಿ?
ನ್ಯಾಯಮೂರ್ತಿ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಪ್ರಣಯ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದ್ದು, 2 ಬ್ರಾಂಡ್‌ಗಳ ಉತ್ಪನ್ನಗಳು “ಪ್ರೀಮಿಯಂ” ಅಥವಾ “ಅಲ್ಟ್ರಾ ಪ್ರೀಮಿಯಂ” ವಿಸ್ಕಿಯನ್ನು ಒಳಗೊಂಡಿರುತ್ತದೆ. ಅದರ ಗ್ರಾಹಕರು ವಿದ್ಯಾವಂತರು ಮತ್ತು ವಿವೇಚನಾಶೀಲರಾಗಿರುತ್ತಾರೆ. ಅವರಿಗೆ ಅವುಗಳೆರಡರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ ಎಂದು ಹೇಳಿದೆ.
ಇಂತಹ ಪ್ರೀಮಿಯಂ ಉತ್ಪನ್ನಗಳ ಗ್ರಾಹಕರು ಹೆಚ್ಚಾಗಿ ವಿದ್ಯಾವಂತರಾಗಿರುತ್ತಾರೆ. ಬ್ಲೆಂಡರ್ಸ್ ಪ್ರೈಡ್ / ಇಂಪೀರಿಯಲ್ ಬ್ಲೂ ಮತ್ತು ಲಂಡನ್ ಪ್ರೈಡ್ ಬಾಟಲಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಅವರಿಗೆ ಕಷ್ಟವಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಆಲ್ಕೋಹಾಲ್ ಕುಡಿಯುವುದರಿಂದ ತೂಕ ಹೆಚ್ಚಾಗುತ್ತಾ? ಅಸಲಿ ಸತ್ಯ ಇಲ್ಲಿದೆ
ಇಂದೋರ್‌ನ ನ್ಯಾಯಾಲಯವು ಈ ಹಿಂದೆ ತಾತ್ಕಾಲಿಕ ತಡೆಯಾಜ್ಞೆಗಾಗಿ ರಿಕಾರ್ಡ್‌ನ ಅರ್ಜಿಯನ್ನು ವಜಾಗೊಳಿಸಿತ್ತು. ರಿಕಾರ್ಡ್ ಕಂಪನಿ 1995 ರಿಂದ ‘ಬ್ಲೆಂಡರ್ಸ್ ಪ್ರೈಡ್’ ಮಾರ್ಕ್ ಅನ್ನು ಬಳಸುತ್ತಿದೆ ಎಂದು ಹೇಳಿತ್ತು. ಜೆಕೆ ಎಂಟರ್‌ಪ್ರೈಸಸ್ ತನ್ನ ವಿಸ್ಕಿಯನ್ನು ಲೇಬಲ್ ಹಾಕುವ ಮೂಲಕ, ಪ್ಯಾಕೇಜಿಂಗ್, ನೋಟ ಮತ್ತು ಟ್ರೇಡ್ ಡ್ರೆಸ್‌ಗಳನ್ನು ಬಳಸಿಕೊಂಡು ಪೆರ್ನಾಡ್ ರಿಕಾರ್ಡ್‌ನ ‘ಇಂಪೀರಿಯಲ್ ಬ್ಲೂ’ ವಿಸ್ಕಿಯನ್ನು ಮೋಸಗೊಳಿಸುವ ರೀತಿಯಲ್ಲಿ ಮಾರಾಟ ಮಾಡುತ್ತಿದೆ ಎಂದು ಅದು ಹೇಳಿಕೊಂಡಿದೆ.
ಆದರೆ, ಇಂಪೀರಿಯಲ್ ಬ್ಲೂ ಮತ್ತು ಲಂಡನ್ ಪ್ರೈಡ್ ಎರಡರ ಬಾಟಲಿಗಳನ್ನು ಹೋಲಿಸಿದಾಗ ಜೆಕೆ ಎಂಟರ್ಪ್ರೈಸಸ್ನ ಉತ್ಪನ್ನದ ಒಟ್ಟಾರೆ ನೋಟವು ರಿಕಾರ್ಡ್‌ನ ಗುರುತುಗಳಿಗೆ ಮೋಸಗೊಳಿಸುವ ರೀತಿಯಲ್ಲಿ ಹೋಲುತ್ತದೆ ಎಂದು ಹೇಳಲಾಗುವುದಿಲ್ಲ. ಬಾಟಲಿಗಳ ಆಕಾರವೂ ವಿಭಿನ್ನವಾಗಿದೆ ಎಂದು ನ್ಯಾಯಾಲಯವು ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ