ಕೊರೊನಾ ಲಸಿಕೆ ಸಂಗ್ರಹಣೆಗೆ ಸಿದ್ಧವಾಯ್ತು ಭಾರತ.. ಅಡ್ಡಪರಿಣಾಮ ತಡೆಗಟ್ಟಲೆಂದೇ ವಿಶೇಷ ತಂಡ ಸ್ಥಾಪನೆ
ಯಾವುದೇ ಲಸಿಕೆಯ ಆರಂಭಿಕ ಹಂತದಲ್ಲಿ ಒಂದಷ್ಟು ಎಚ್ಚರಿಕೆ ಅಗತ್ಯ. ಎಷ್ಟೇ ಅನುಭವ ಇದ್ದರೂ ಹೊಸದಾದ ಕೆಲವು ಪರಿಣಾಮಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮೈಮರೆಯುವಂತಿಲ್ಲ. ಕೆಲವು ಲಸಿಕೆಗಳು ಅಲರ್ಜಿ, ವಿಪರೀತ ಜ್ವರ, ಸುಸ್ತು ಇತ್ಯಾದಿ ಅಡ್ಡಪರಿಣಾಮ ಬೀರುತ್ತವೆ. ಅಂತೆಯೇ ಕೊರೊನಾ ಲಸಿಕೆಯೂ ಕೆಲ ಪರಿಣಾಮಗಳನ್ನು ಬೀರಬಹುದು.
ದೆಹಲಿ: ಭಾರತ ಕೊರೊನಾ ಲಸಿಕೆಗಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಕೊರೊನಾ ಲಸಿಕೆ ಸಂಗ್ರಹಣೆಗೆಂದೇ 29 ಸಾವಿರ ಕೋಲ್ಡ್ ಚೈನ್ ಕೇಂದ್ರ, 41 ಸಾವಿರ ಡೀಪ್ ಫ್ರೀಜರ್, 45 ಸಾವಿರ ಐಸ್ ಲೈನ್ಡ್ ರೆಫ್ರಿಜರೇಟರ್ಸ್, 300 ಸೋಲಾರ್ ರೆಫ್ರಿಜರೇಟರ್ಸ್ ಸೇರಿದಂತೆ ಹಲವು ಅವಶ್ಯಕ ಉಪಕರಣಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆ ಸಂಗ್ರಹಣೆಗೆ ಅತಿ ಕನಿಷ್ಠ ಉಷ್ಣಾಂಶ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ. ಈ ಕಾರಣಕ್ಕಾಗಿ ಆಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ದೊಡ್ಡ ಸಂಖ್ಯೆಯ ಕೋಲ್ಡ್ ಸ್ಟೋರೇಜ್ ಜೊತೆಗೆ 240 ವಾಕ್ ಇನ್ ಕೂಲರ್ಸ್, 70 ವಾಕ್ ಇನ್ ಫ್ರೀಜರ್ಸ್ ಸಹ ಬಳಕೆಗೆ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯ ಅಡ್ಡಪರಿಣಾಮ ತಡೆಗಟ್ಟಲು ತಜ್ಞರ ವಿಶೇಷ ತಂಡ ರಚನೆ ಇನ್ನೊಂದೆಡೆ, ಕೊರೊನಾ ಲಸಿಕೆಯಿಂದ ಸಂಭವಿಸಬಹುದಾದ ಅಡ್ಡಪರಿಣಾಮಗಳ ಕುರಿತು ನಿಗಾ ವಹಿಸಲು ಭಾರತ ಸರ್ಕಾರ ತಜ್ಞರ ವಿಶೇಷ ತಂಡವನ್ನು ರಚಿಸಿದೆ ಎಂದು ಲಸಿಕೆಗಳ ಅಡ್ಡಪರಿಣಾಮ ನಿರ್ವಹಣಾ ತಂಡದ (AEFI) ಸದಸ್ಯ ಪಾಲ್ ತಿಳಿಸಿದ್ದಾರೆ. ಈ ಹಿಂದೆ ಭಾರತದಲ್ಲಿ ಕೆಲವು ನಿರ್ದಿಷ್ಟ ಕಾಯಿಲೆಗಳಿಗೆ ಲಸಿಕೆ ನೀಡಿದಾಗ ಅದರಿಂದಾಗಿದ್ದ ತೊಂದರೆ ತಡೆಯಲೆಂದೇ ಹಲವು ವೈದ್ಯಕೀಯ ಪದ್ಧತಿಗಳನ್ನು ಅನುಸರಿಸಲಾಗುತ್ತಿತ್ತು. ಆದರೆ, ಕೊವಿಡ್ ಅವೆಲ್ಲವುಗಳಿಗಿಂತ ಭಿನ್ನವಾಗಿರುವುದರಿಂದ ಈ ಕುರಿತು ವಿಶೇಷ ಕಾಳಜಿ ಅಗತ್ಯ ಎಂದಿದ್ದಾರೆ.
ಜನರಲ್ಲಿ ಕೊರೊನಾ ಲಸಿಕೆಯ ಕುರಿತಾದ ನಂಬಿಕೆ ಕ್ಷೀಣಗೊಳ್ಳಬಾರದು. ಅದಕ್ಕಾಗಿ ನಾವು ಯಾವುದೇ ರೀತಿಯ ಅಡ್ಡಪರಿಣಾಮ ಆಗದಂತೆ ನಿಗಾ ವಹಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಈಗಾಗಲೇ ಹೆಜ್ಜೆ ಇರಿಸಿದ್ದು, ಅದಕ್ಕಾಗಿಯೇ ಕೋ-ವಿನ್ ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದ್ದಾರೆ.
ಯಾವುದೇ ಲಸಿಕೆಯ ಆರಂಭಿಕ ಹಂತದಲ್ಲಿ ಒಂದಷ್ಟು ಎಚ್ಚರಿಕೆ ಅಗತ್ಯ. ಎಷ್ಟೇ ಅನುಭವ ಇದ್ದರೂ ಹೊಸದಾದ ಕೆಲವು ಪರಿಣಾಮಗಳು ಎದುರಾಗುವ ಸಾಧ್ಯತೆ ಇರುವುದರಿಂದ ಮೈಮರೆಯುವಂತಿಲ್ಲ. ಕೆಲವು ಲಸಿಕೆಗಳು ಅಲರ್ಜಿ, ವಿಪರೀತ ಜ್ವರ, ಸುಸ್ತು ಇತ್ಯಾದಿ ಅಡ್ಡಪರಿಣಾಮ ಬೀರುತ್ತವೆ. ಅಂತೆಯೇ ಕೊರೊನಾ ಲಸಿಕೆಯೂ ಕೆಲ ಪರಿಣಾಮಗಳನ್ನು ಬೀರಬಹುದು. ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಪಾಲ್ ಹೇಳಿದ್ದಾರೆ.
ಭಾರತದಲ್ಲಿ ಈ ನಾಲ್ಕು ವರ್ಗದವರಿಗೆ ಮಾತ್ರ ಮೊದಲ ಹಂತದ ಕೊರೊನಾ ಲಸಿಕೆ ಸಿಗಲಿದೆ