ಕೊವಿಡ್ -19 ಉಲ್ಬಣ: ದೆಹಲಿಯಲ್ಲಿ ಖಾಸಗಿ ಕಚೇರಿ ಬಂದ್, ಮನೆಯಿಂದಲೇ ಕೆಲಸ ಕಡ್ಡಾಯ

ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಲಾಕ್ ಡೌನ್ ವಿಧಿಸುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. "ಚಿಂತಿಸಬೇಡಿ, ನಾವು ಲಾಕ್‌ಡೌನ್  ವಿಧಿಸುವುದಿಲ್ಲ" ಎಂದಿದ್ದಾರೆ ಕೇಜ್ರಿವಾಲ್.

ಕೊವಿಡ್ -19 ಉಲ್ಬಣ: ದೆಹಲಿಯಲ್ಲಿ ಖಾಸಗಿ ಕಚೇರಿ ಬಂದ್, ಮನೆಯಿಂದಲೇ ಕೆಲಸ  ಕಡ್ಡಾಯ
ಪ್ರಾತಿನಿಧಿಕ ಚಿತ್ರ

ದೆಹಲಿ: ದೆಹಲಿಯ (Delhi) ಖಾಸಗಿ ಕಚೇರಿಗಳನ್ನು ಮುಚ್ಚುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ಆದೇಶಿಸಿದೆ. ಮನೆಯಿಂದ ಕೆಲಸ ಮಾಡುವುದನ್ನು ಈಗ ಅನುಸರಿಸಬೇಕು ಎಂದು ಮಂಗಳವಾರ ಹೊರಡಿಸಿದ ಆದೇಶ ತಿಳಿಸಿದೆ. ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ (Anil Baijal)  ನೇತೃತ್ವದ ಡಿಡಿಎಂಎ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ದೆಹಲಿಯಲ್ಲಿನ ಕೊವಿಡ್ (Covid-19)  ಪರಿಸ್ಥಿತಿಯನ್ನು ಡಿಡಿಎಂಎ ಸಭೆಯಲ್ಲಿ ಪರಿಶೀಲಿಸಲಾಗಿದೆ. ಕೊವಿಡ್ -19 ಪ್ರಕರಣಗಳ ಸಂಖ್ಯೆ (ಒಮಿಕ್ರಾನ್ ರೂಪಾಂತರದ ಪ್ರಕರಣಗಳನ್ನು ಒಳಗೊಂಡಂತೆ) ಕಳೆದ ಕೆಲವು ದಿನಗಳಿಂದ ವೇಗವಾಗಿ ಹೆಚ್ಚುತ್ತಿದೆ ಎಂದು ಗಮನಿಸಲಾಗಿದೆ. ಪರೀಕ್ಷೆ ಧನಾತ್ಮಕ ದರವು ಶೇ 23 ದಾಟಿದೆ. ಆದ್ದರಿಂದ, ಹೆಚ್ಚು ಸಾಂಕ್ರಾಮಿಕ ಮತ್ತು ಹರಡುವ ಒಮಿಕ್ರಾನ್ (Omicron) ರೂಪಾಂತರವನ್ನು ಒಳಗೊಂಡಂತೆ ಕೊವಿಡ್ -19 ವೈರಸ್ ಹರಡುವುದನ್ನು ತಡೆಯಲು ದೆಹಲಿಯಲ್ಲಿ ಇನ್ನೂ ಕೆಲವು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುವುದು ಅಗತ್ಯವೆಂದು ಭಾವಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇಲ್ಲಿಯವರೆಗೆ, ಖಾಸಗಿ ಕಚೇರಿಗಳು ತಮ್ಮ ಶೇಕಡಾ 50 ರಷ್ಟು ಸಿಬ್ಬಂದಿಯನ್ನು ಮಾತ್ರ ಕಚೇರಿಗೆ ಕರೆಯುವಂತೆ ತಿಳಿಸಲಾಗಿತ್ತು.

ಈ ನಿರ್ಬಂಧಗಳಿಂದ ವಿನಾಯಿತಿ ಪಡೆದಿರುವ ಕಚೇರಿಗಳ ಪಟ್ಟಿ ಇಲ್ಲಿದೆ:

ಖಾಸಗಿ ಬ್ಯಾಂಕ್‌ಗಳು

ಔಷಧ ಸೇವೆಗಳು, ರೆಸ್ಟೋರೆಂಟ್‌ಗಳು, ಟೆಲಿಕಾಂ ಸೇವೆಗಳು, ಸರಕು ಸಾಗಣೆ, ವಾಯುಯಾನ ಸೇವೆಗಳಂತಹ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳು

RBI ನಿಯಂತ್ರಿತ ಘಟಕಗಳು

ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಗಳು

ಮೈಕ್ರೋ ಫೈನಾನ್ಸ್ ಸಂಸ್ಥೆಗಳು

ವಕೀಲರ ಕಚೇರಿಗಳು

ಕೊರಿಯರ್ ಸೇವೆಗಳು

ಕಳೆದ ವಾರ ಕೊವಿಡ್ -19 ಪ್ರಕರಣಗಳು 20,000 ಗಡಿ ದಾಟಿದ ಕಾರಣ ಸರ್ಕಾರವು ಜಾರಿಗೊಳಿಸಿದ ನಿರ್ಬಂಧಗಳ ಸರಣಿಯಲ್ಲಿ ಇದು ಇತ್ತೀಚಿನದು. ನಗರದಲ್ಲಿ ಪರೀಕ್ಷೆಯ ಧನಾತ್ಮಕತೆಯ ಪ್ರಮಾಣವು ಹೆಚ್ಚುತ್ತಲೇ ಇದೆ, 25 ಪ್ರತಿಶತ (4 ರಲ್ಲಿ 1) ಜನರು ಕೊವಿಡ್ -19 ಗೆ ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದ್ದಾರೆ. ಡಿಡಿಎಂಎ ರೆಸ್ಟೋರೆಂಟ್‌ಗಳಿಗೆ ಡೈನ್-ಇನ್ ಸೇವೆಗಳನ್ನು ಮುಚ್ಚಲು ಆದೇಶಿಸಿದೆ, ಟೇಕ್‌ಅವೇ ಮತ್ತು ಹೋಮ್ ಡೆಲಿವರಿ ಸೇವೆಗಳನ್ನು ಮಾತ್ರ ಅನುಮತಿಸುತ್ತದೆ. ಏತನ್ಮಧ್ಯೆ, ಮಾರುಕಟ್ಟೆಗಳು ಮತ್ತು ಮಾಲ್‌ಗಳು ಕಳೆದ ವಾರದಿಂದ ಅನುಸರಿಸಿದಂತೆ ಬೆಸ-ಸಮ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ.

ದೆಹಲಿಯಲ್ಲಿ ಲಾಕ್‌ಡೌನ್ ಇಲ್ಲ, ಚಿಂತಿಸಬೇಡಿ: ಅರವಿಂದ್ ಕೇಜ್ರಿವಾಲ್

ದೆಹಲಿಯಲ್ಲಿ ಯಾವುದೇ ಲಾಕ್‌ಡೌನ್ ಇರುವುದಿಲ್ಲ, ಇಲ್ಲಿ ಧನಾತ್ಮಕ ದರವು ಏಳು ತಿಂಗಳ ಗರಿಷ್ಠ ಶೇಕಡಾ 25 ರಷ್ಟಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಹೇಳಿದ್ದಾರೆ.  “ಚಿಂತಿಸಬೇಡಿ, ನಾವು ಲಾಕ್‌ಡೌನ್  ವಿಧಿಸುವುದಿಲ್ಲ” ಎಂದು ದೆಹಲಿ ಮುಖ್ಯಮಂತ್ರಿ ರಾಜಧಾನಿಯಲ್ಲಿ ಪ್ರಕರಣಗಳ ಏರಿಕೆಯ ಕುರಿತು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.  “ನಾವು ದೆಹಲಿಯಲ್ಲಿ ಸುಮಾರು 20,000-22,000 ಹೊಸ ಕೊವಿಡ್ ಪ್ರಕರಣಗಳನ್ನು ನಿರೀಕ್ಷಿಸುತ್ತಿದ್ದೇವೆ. ಕಳೆದ ಎರಡು ದಿನಗಳಿಂದ ಸಕಾರಾತ್ಮಕತೆಯ ಪ್ರಮಾಣವು ಶೇಕಡಾ 24-25 ರಷ್ಟಿದೆ. ನಾವು ಬಲವಂತದಿಂದ ದೆಹಲಿಯಲ್ಲಿ ರಾತ್ರಿ ಕರ್ಫ್ಯೂನಂತಹ ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೊಳಿಸುತ್ತಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ವರ್ಷ ಡೆಲ್ಟಾ ರೂಪಾಂತರದಿಂದ ನಡೆಸಲ್ಪಟ್ಟ ಮಾರಣಾಂತಿಕ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯವ್ವಿ ಹೆಚ್ಚಿನ ಪ್ರಕರಣಗಳು ಸೌಮ್ಯವಾದ ರೋಗಲಕ್ಷಣಗಳನ್ನು ತೋರಿಸುತ್ತಿವೆ.ಒಮಿಕ್ರಾನ್ ಸೌಮ್ಯವಾಗಿದೆ ಆದರೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

“ಡಿಡಿಎಂಎ ಸಭೆಯಲ್ಲಿ ನಾವು ಸಂಪೂರ್ಣ ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ವ್ಯಾಪ್ತಿಗೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ವಿನಂತಿಸಿದ್ದೇವೆ. ಅವರು ನಮಗೆ ಭರವಸೆ ನೀಡಿದರು” ಎಂದು ಕೇಜ್ರಿವಾಲ್ ಹೇಳಿದರು. ದಿನ 48 ಗಂಟೆಗಳಲ್ಲಿ ನಗರದಲ್ಲಿ ಪ್ರಕರಣಗಳು ಉತ್ತುಂಗಕ್ಕೇರಬಹುದು ಅಥವಾ “ಖಂಡಿತವಾಗಿ ಈ ವಾರ” ಏರಿಕೆಯಾಗಬಹುದು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಅದೇ ವೇಳೆ ಮತ್ತೊಂದು ವಾರಾಂತ್ಯದ ಕರ್ಫ್ಯೂ ಸಾಧ್ಯತೆಯ ಬಗ್ಗೆಯೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಪ್ರಕರಣ ಏರಿಕೆ: ದೆಹಲಿಯಲ್ಲಿ ಬಾರ್, ರೆಸ್ಟೋರೆಂಟ್ ಮುಚ್ಚಲು ಆದೇಶ; ಪಾರ್ಸೆಲ್​​​ಗಷ್ಟೇ ಅವಕಾಶ

Click on your DTH Provider to Add TV9 Kannada