ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್ ನಿರ್ದೇಶಕ
ಇತ್ತೀಚೆಗೆ ಸಿಟಿ ಸ್ಕ್ಯಾನ್ ತುಂಬ ದುರ್ಬಳಕೆ ಆಗುತ್ತಿದೆ. ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಕೊರೊನಾ ರೂಪಾಂತರಿ ವೈರಸ್ಗಳು ಪತ್ತೆಯಾಗುವುದಿಲ್ಲ ಎಂದು ವರದಿಯಾದ ಬೆನ್ನಲ್ಲೇ ಅನೇಕರು ಈಗ ಸಿಟಿ ಸ್ಕ್ಯಾನ್ನ್ನೇ ಜಾಸ್ತಿ ಅವಲಂಬಿಸಿದ್ದಾರೆ.
ನವದೆಹಲಿ: ಕೊವಿಡ್ 19 ಸೋಂಕಿನ ಸೌಮ್ಯ ಲಕ್ಷಣಗಳಿದ್ದಾಗ ಸಿಟಿ ಸ್ಕ್ಯಾನ್ (ಗಣಕೀಕೃತ ಟೊಮೊಗ್ರಫಿ ಸ್ಕ್ಯಾನ್)ನಿಂದ ಅದನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಏಮ್ಸ್ (AIIMS) ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ತಪರೀಕ್ಷೆಯಿಂದಲೂ ಕೊವಿಡ್ 19 ಇರುವುದು ಗೊತ್ತಾಗಿಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಿಟಿ ಸ್ಕ್ಯಾನ್ ತುಂಬ ದುರ್ಬಳಕೆ ಆಗುತ್ತಿದೆ. ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಕೊರೊನಾ ರೂಪಾಂತರಿ ವೈರಸ್ಗಳು ಪತ್ತೆಯಾಗುವುದಿಲ್ಲ ಎಂದು ವರದಿಯಾದ ಬೆನ್ನಲ್ಲೇ ಅನೇಕರು ಈಗ ಸಿಟಿ ಸ್ಕ್ಯಾನ್ನ್ನೇ ಜಾಸ್ತಿ ಅವಲಂಬಿಸಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವವರ ಸಂಖ್ಯೆ ಕಳೆದ ವರ್ಷಕ್ಕಿಂತಲೂ ಈ ವರ್ಷ ಅಧಿಕವಾಗಿದೆ. ಆದರೆ ನೆನಪಿರಲಿ ಕೊವಿಡ್ 19 ಸೌಮ್ಯ ಲಕ್ಷಣಗಳು ಇದ್ದಾಗ ಸಿಟಿ ಸ್ಕ್ಯಾನ್ನಲ್ಲಿ ಗೊತ್ತಾಗುವುದಿಲ್ಲ. ಹಾಗಾಗಿ ಸಿಟಿ ಸ್ಕ್ಯಾನ್ನಲ್ಲಿ ಕೊರೊನಾ ಇಲ್ಲ ಎಂದು ವರದಿ ಬಂದರೂ, ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಿಟಿ ಸ್ಕ್ಯಾನ್ ವರದಿ ನೋಡಿ ಸುಮ್ಮನಿದ್ದು, ನಂತರ ವೈರಸ್ ಏಕಾಏಕಿ ಉಲ್ಬಣ ಆಗಬಹುದು ಎಂದು ರಣದೀಪ್ ಗುಲೇರಿಯಾ ತಿಳಿಸಿದ್ದಾರೆ. ಹಾಗಾಗಿ ಹೆಚ್ಚೇನೂ ಲಕ್ಷಣಗಳಿಲ್ಲದೆ, ಆಕ್ಸಿಜನ್ ಮಟ್ಟ ಸರಿಯಾಗಿ ಇದ್ದವರು ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳುವುದು ಅಗತ್ಯವಿಲ್ಲ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ, ಇಂಥವರಿಗೆ ರಕ್ತಪರೀಕ್ಷೆ ಸಹ ಬೇಕಾಗುವುದಿಲ್ಲ ಎಂದಿದ್ದಾರೆ. ಹಾಗೇ ಇನ್ನೊಂದು ಮಹತ್ವದ ಎಚ್ಚರಿಕೆ ನೀಡಿರುವ ಗುಲೇರಿಯಾ, ಕೊರೊನಾ ಮೊದಲ ಹಂತದಲ್ಲಿ ಇರುವಾಗ ಸ್ಟೀರಾಯ್ಡ್ಗಳ ಬಳಕೆ ಮಾಡುವುದು ಅಪಾಯ ಎಂದೂ ಹೇಳಿದ್ದಾರೆ.
ನಾವು ಕೊವಿಡ್ ನಿರ್ವಹಣೆಗಾಗಿ ವೈದ್ಯಕೀಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದೇವೆ. ಕೊರೊನಾದ ಸೌಮ್ಯ ಲಕ್ಷಣಗಳು ಇದ್ದಾಗ ಸಿಟಿ ಸ್ಕ್ಯಾನ್ ಆಗಲೀ, ಸ್ಟೀರಾಯ್ಡ್ನಂತಹ ತೀವ್ರ ಔಷಧಿಯಾಗಲೀ ಅಗತ್ಯವಿಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಪ್ರಾರಂಭಿಕ ಹಂತದ ಕೊರೊನಾಕ್ಕೆ ಸ್ಟೀರಾಯ್ಡ್ ತೆಗೆದುಕೊಳ್ಳುವುದರಿಂದ ತುಂಬ ಅಪಾಯವಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ರೆಮ್ಡೆಸಿವಿರ್, ಟೊಸಿಲಿಜುಮಾಬ್ ಮತ್ತು ಪ್ಲಾಸ್ಮಾ ಥೆರಪಿಗಳೆಲ್ಲ ತುರ್ತು ಪರಿಸ್ಥಿತಿಯಲ್ಲಿ ಬಳಸಬೇಕಾದಂಥವು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Explainer: ಏನಿದು ವೈದ್ಯಕೀಯ ಆಮ್ಲಜನಕ? ಇದನ್ನು ಉತ್ಪಾದಿಸುವುದು ಹೇಗೆ?
ಅರ್ಜುನ್ ಜನ್ಯ ಅಣ್ಣ ಕೊರೊನಾದಿಂದ ನಿಧನ; ನೋವು ತೋಡಿಕೊಂಡ ಸಂಗೀತ ನಿರ್ದೇಶಕ
Published On - 7:09 pm, Mon, 3 May 21