ಆಪರೇಷನ್ ಸಿಂಧೂರ್ ವೇಳೆ ಉಡಾವಣೆಯಾಗಿದ್ದ ಪಾಕಿಸ್ತಾನಿ ಕ್ಷಿಪಣಿಯ ಅವಶೇಷಗಳು ದಾಲ್ ಸರೋವರದಲ್ಲಿ ಪತ್ತೆ
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತದ ಮೇಲೆ ಉಡಾಯಿಸಿದ್ದ ಪಾಕಿಸ್ತಾನಿ ಕ್ಷಿಪಣಿಯ ಅವಶೇಷಗಳು ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ಪತ್ತೆಯಾಗಿವೆ. ದಾಲ್ ಸರೋವರವನ್ನು ಭಾನುವಾರ ಶುಚಿಗೊಳಿಸುವ ಅಭಿಯಾನದ ಸಮಯದಲ್ಲಿ ಕಂಡುಬಂದ ಕ್ಷಿಪಣಿಯ ಅವಶೇಷಗಳನ್ನು ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಸಮಯದಲ್ಲಿ ಉಡಾಯಿಸಲಾಗಿತ್ತು. ಆ ಅವಶೇಷಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಶ್ರೀನಗರ, ಸೆಪ್ಟೆಂಬರ್ 22: ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಸಮಯದಲ್ಲಿ ದಾಲ್ ಸರೋವರದಲ್ಲಿ ಸ್ಫೋಟಗೊಂಡ ಪಾಕಿಸ್ತಾನಿ ಶೆಲ್‌ನ ಅವಶೇಷಗಳು ಸ್ವಚ್ಛತಾ ಅಭಿಯಾನದ ಸಮಯದಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರೋವರ ಸಂರಕ್ಷಣೆ ಮತ್ತು ನಿರ್ವಹಣಾ ಪ್ರಾಧಿಕಾರದ (LCMA) ತಂಡಗಳು ನೀರಿನ ಮೂಲವನ್ನು ಸ್ವಚ್ಛಗೊಳಿಸುವಾಗ ಶೆಲ್ ಅವಶೇಷಗಳು ಕಂಡುಬಂದಿತು. ಮೇ 10ರಂದು, ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ದಾಲ್ ಸರೋವರದೊಳಗೆ ಕ್ಷಿಪಣಿಯಂತಹ ವಸ್ತುವೊಂದು ಆಳವಾಗಿ ಇಳಿಯುವ ಮೂಲಕ ಶ್ರೀನಗರವನ್ನು ನಡುಗಿಸಿತ್ತು. ಆ ವಸ್ತು ಇಳಿಯುವಾಗ ಸರೋವರದ ಮೇಲ್ಮೈಯಿಂದ ಹೊಗೆ ಹೊರಹೊಮ್ಮಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಭದ್ರತಾ ಪಡೆಗಳು ಅವಶೇಷಗಳನ್ನು ಹೊರತೆಗೆದವು. ಅದೇ ದಿನ, ನಗರದ ಹೊರವಲಯದಲ್ಲಿರುವ ಲಸ್ಜನ್‌ನಿಂದ ಮತ್ತೊಂದು ಶಂಕಿತ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು. ದಾಲ್ ಸರೋವರದಲ್ಲಿ ಪತ್ತೆಯಾಗಿದ್ದ ಕ್ಷಿಪಣಿಯ ಘಟಕಗಳನ್ನು ನಿಷ್ಕ್ರಿಯಗೊಳಿಸಿ ಬೇರೆ ಸ್ಥಳಕ್ಕೆ ಸಾಗಿಸಲಾಗಿದೆ. ಕ್ಷಿಪಣಿಯ ಒಂದು ಘಟಕವನ್ನು ವಾಯುಪಡೆಗೆ ಹಸ್ತಾಂತರಿಸಲಾಗಿದೆ. ಒಂದುವೇಳೆ ಈ ಕ್ಷಿಪಣಿ ಸ್ಫೋಟಗೊಂಡಿದ್ದರೆ, ಅದು ದೊಡ್ಡ ವಿಪತ್ತಿಗೆ ಕಾರಣವಾಗುತ್ತಿತ್ತು. ಏಕೆಂದರೆ ದಾಲ್ ಸರೋವರವು ಶ್ರೀನಗರದಲ್ಲಿ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಅಮಾಯಕರ ಸಾವು ತಪ್ಪಿಸಲು ಮಧ್ಯರಾತ್ರಿ ಆಪರೇಷನ್ ಸಿಂಧೂರ್ ದಾಳಿ ನಡೆಸಿದೆವು; ಸಿಡಿಎಸ್ ಅನಿಲ್ ಚೌಹಾಣ್
ಮೇ 10ರಂದು ಶ್ರೀನಗರದಾದ್ಯಂತ ಹಲವಾರು ಸ್ಫೋಟಗಳು ವರದಿಯಾಗಿತ್ತು. ಈ ಘಟನೆಗಳು ಆಪರೇಷನ್ ಸಿಂಧೂರ್‌ನ ಭಾಗವಾಗಿತ್ತು. 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು. ಇದರ ನಂತರ, ಭಾರತವು ಭಯೋತ್ಪಾದಕ ಮೂಲಸೌಕರ್ಯ ಮತ್ತು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಿತು. ಅದಕ್ಕೆ ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಇವುಗಳನ್ನು ಭಾರತೀಯ ಸಶಸ್ತ್ರ ಪಡೆಗಳು ತಟಸ್ಥಗೊಳಿಸಿದವು. ಈ ಅವಧಿಯಲ್ಲಿ ತೀವ್ರವಾದ ಗಡಿಯಾಚೆಗಿನ ಶೆಲ್ ದಾಳಿಯೂ ನಡೆಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




