Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೊಮ್ಮೆ ದೆಹಲಿ ವಿಧಾನಸಭೆಯಿಂದ ಹೊರಹಾಕಲ್ಪಟ್ಟಿದ್ದ ಬಿಜೆಪಿಯ ವಿಜೇಂದ್ರ ಗುಪ್ತಾ ಈಗ ಸ್ಪೀಕರ್

ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಧಾನಸಭೆಯ ಸ್ಪೀಕರ್ ಮತ್ತು ಉಪ ಸ್ಪೀಕರ್ ಹೆಸರುಗಳನ್ನು ಘೋಷಿಸಿದೆ. ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದ್ರ ಗುಪ್ತಾ ಅವರು ವಿಧಾನಸಭಾ ಸ್ಪೀಕರ್ ಆಗಲಿದ್ದಾರೆ. ಪಕ್ಷವು ಉಪಸಭಾಪತಿ ಹುದ್ದೆಗೆ ಮೋಹನ್ ಸಿಂಗ್ ಬಿಶ್ತ್ ಅವರ ಹೆಸರನ್ನು ಘೋಷಿಸಿದೆ. ಉತ್ತರಾಖಂಡ ಮೂಲದ ಮೋಹನ್ ಸಿಂಗ್ ಬಿಶ್ತ್ ಏಳು ಬಾರಿ ಶಾಸಕರಾಗಿದ್ದು, ಈ ಬಾರಿ ಅವರು ಬಿಜೆಪಿಗೆ ಕಷ್ಟಕರವೆಂದು ಪರಿಗಣಿಸಲಾದ ಮುಸ್ತಾಬಾದ್‌ನಂತಹ ವಿಧಾನಸಭಾ ಸ್ಥಾನದಿಂದ ಗೆದ್ದಿದ್ದಾರೆ.

ಹಿಂದೊಮ್ಮೆ ದೆಹಲಿ ವಿಧಾನಸಭೆಯಿಂದ ಹೊರಹಾಕಲ್ಪಟ್ಟಿದ್ದ ಬಿಜೆಪಿಯ ವಿಜೇಂದ್ರ ಗುಪ್ತಾ ಈಗ ಸ್ಪೀಕರ್
ವಿಜೇಂದರ್ Image Credit source: Indian Express
Follow us
ನಯನಾ ರಾಜೀವ್
|

Updated on:Feb 20, 2025 | 12:46 PM

ದೆಹಲಿ, ಫೆಬ್ರವರಿ 20: ಆಮ್ ಆದ್ಮಿ ಪಕ್ಷದ 10 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿಯ ಹಿರಿಯ ನಾಯಕ ವಿಜೇಂದ್ರ ಗುಪ್ತಾ ಅವರನ್ನು ವಿಧಾನಸಭೆಯಿಂದ ಹೊರಹಾಕಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, 27 ವರ್ಷಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದು, ಗುಪ್ತಾ ಅವರನ್ನು ಸ್ಪೀಕರ್​ ಆಗಿ ಆಯ್ಕೆ ಮಾಡಲಾಗಿದೆ. ಮಾಜಿ ಸ್ಪೀಕರ್ ಮತ್ತು ಅರವಿಂದ್ ಕೇಜ್ರಿವಾಲ್ ಇಬ್ಬರೂ ಈಗ ವಿಧಾನಸಭೆಯ ಭಾಗವಾಗಿಲ್ಲ. 2015 ಮತ್ತು 2020 ರಲ್ಲಿ ಕೇಜ್ರಿವಾಲ್ ಅಲೆಯ ನಡುವೆ ವಿಜೇಂದರ್ ಗುಪ್ತಾ ಗೆದ್ದಿದ್ದರು, ದೆಹಲಿಯಲ್ಲಿ ಎಎಪಿ ಭಾರಿ ಬಹುಮತದೊಂದಿಗೆ ಆಗ ಗೆಲುವು ಸಾಧಿಸಿತ್ತು. ವಿಧಾನಸಭೆಯಲ್ಲಿ ನಡೆದ ಗದ್ದಲದ ಸಮಯದಲ್ಲಿ ಗುಪ್ತಾ ಅವರನ್ನು ಸದನದಿಂದ ಹೊರಹಾಕಲಾಗಿತ್ತು.

ವಿಜೇಂದರ್ ಗುಪ್ತಾ ರೋಹಿಣಿ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ, ವಿಜೇಂದ್ರ ಗುಪ್ತಾ ಅವರು ತಮ್ಮ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಪ್ರದೀಪ್ ಮಿತ್ತಲ್ ಅವರನ್ನು ಸುಮಾರು 38 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿದರು.

ಹಿಂದಿನ ದೆಹಲಿ ವಿಧಾನಸಭೆಯಲ್ಲಿ ವಿಜೇಂದರ್ ಗುಪ್ತಾ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಆಗಸ್ಟ್ 5, 2024 ರಂದು ವಿಜೇಂದ್ರ ಗುಪ್ತಾ ಅವರನ್ನು ಆಗಿನ ವಿರೋಧ ಪಕ್ಷ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಯಿತು. ಆಮ್ ಆದ್ಮಿ ಪಕ್ಷದ ಸರ್ಕಾರದ ಅವಧಿಯಲ್ಲಿ, ವಿಜೇಂದ್ರ ಗುಪ್ತಾ ಅವರನ್ನು ಮಾರ್ಷಲ್‌ಗಳನ್ನು ಕರೆಸಿ  ಹೊರಹಾಕಲಾಯಿತು.

ಮತ್ತಷ್ಟು ಓದಿ: Rekha Gupta: ಮೊದಲ ಪ್ರಯತ್ನದಲ್ಲೇ ಖುಲಾಯಿಸಿದ ಅದೃಷ್ಟ; ದೆಹಲಿ ಸಿಎಂ ರೇಖಾ ಗುಪ್ತಾ ಹಿನ್ನೆಲೆಯೇನು?

ಅಧಿಕಾರ ಬದಲಾವಣೆಯ ನಂತರ, ಅದೇ ವಿಜೇಂದ್ರ ಗುಪ್ತಾ ಈಗ ವಿಧಾನಸಭೆಯ ಕಲಾಪಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮುಸ್ತಫಾಬಾದ್ ಶಾಸಕ ಮೋಹನ್ ಸಿಂಗ್ ಬಿಶ್ತ್ ದೆಹಲಿ ವಿಧಾನಸಭೆಯ ಉಪಸಭಾಪತಿಯಾಗಲಿದ್ದಾರೆ. ಮೋಹನ್ ಸಿಂಗ್ ಬಿಶ್ತ್ 1998 ರಿಂದ 2013 ರವರೆಗೆ ಸತತ ನಾಲ್ಕು ಬಾರಿ ಕರವಾಲ್ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು.

2015 ರ ಚುನಾವಣೆಯಲ್ಲಿ, ಮೋಹನ್ ಅವರು ಆಗ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದ ಕಪಿಲ್ ಮಿಶ್ರಾ ವಿರುದ್ಧ ಸೋತಿದ್ದರು. 2020 ರ ಚುನಾವಣೆಯಲ್ಲಿ, ಮೋಹನ್ ಸಿಂಗ್ ಬಿಶ್ಟ್ ಅವರು ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರನ್ನು ಸೋಲಿಸಿ, ಕರವಾಲ್ ನಗರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವಂತೆ ಮಾಡಿದರು.

ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ ಮೋಹನ್ ಸಿಂಗ್ ಬಿಶ್ತ್ ಬದಲಿಗೆ ಕಪಿಲ್ ಮಿಶ್ರಾ ಅವರನ್ನು ಕರವಾಲ್ ನಗರ ಸ್ಥಾನದಿಂದ ಅಭ್ಯರ್ಥಿಯನ್ನಾಗಿ ಮಾಡಿತ್ತು. ಟಿಕೆಟ್ ಕಡಿತಗೊಂಡ ನಂತರ, ಮೋಹನ್ ಸಿಂಗ್ ಬಿಶ್ತ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದಾಗ್ಯೂ, ಎರಡು ದಿನಗಳಲ್ಲಿ ಪಕ್ಷವು ಅವರನ್ನು ಮುಸ್ತಫಾಬಾದ್‌ನಿಂದ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು. ಮುಸ್ಲಿಂ ಪ್ರಾಬಲ್ಯದ ಮುಸ್ತಾಬಾದ್ ಕ್ಷೇತ್ರದಲ್ಲಿ ಮೋಹನ್ ಸಿಂಗ್ ಬಿಶ್ತ್ ಅವರು AIMIM ಅಭ್ಯರ್ಥಿ ತಾಹಿರ್ ಹುಸೇನ್ ಅವರನ್ನು ಸೋಲಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:08 pm, Thu, 20 February 25