AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rekha Gupta: ಮೊದಲ ಪ್ರಯತ್ನದಲ್ಲೇ ಖುಲಾಯಿಸಿದ ಅದೃಷ್ಟ; ದೆಹಲಿ ಸಿಎಂ ರೇಖಾ ಗುಪ್ತಾ ಹಿನ್ನೆಲೆಯೇನು?

ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಹೈಕಮಾಂಡ್ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದೆ. ನಾಳೆ (ಗುರುವಾರ) ರೇಖಾ ಗುಪ್ತಾ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ಬಿಜೆಪಿಯು ರಾಷ್ಟ್ರೀಯ ಕಾರ್ಯದರ್ಶಿ ಓಂ ಪ್ರಕಾಶ್ ಧನಕರ್ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಕೇಂದ್ರ ವೀಕ್ಷಕರನ್ನಾಗಿ ನೇಮಿಸಿತ್ತು. ರೇಖಾ ಗುಪ್ತಾ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಇವರ ಹಿನ್ನೆಲೆಯೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Rekha Gupta: ಮೊದಲ ಪ್ರಯತ್ನದಲ್ಲೇ ಖುಲಾಯಿಸಿದ ಅದೃಷ್ಟ; ದೆಹಲಿ ಸಿಎಂ ರೇಖಾ ಗುಪ್ತಾ ಹಿನ್ನೆಲೆಯೇನು?
Delhi Cm Rekha Gupta
Follow us
ಸುಷ್ಮಾ ಚಕ್ರೆ
|

Updated on:Feb 19, 2025 | 9:23 PM

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಹೈಕಮಾಂಡ್ ಇಂದು ದೆಹಲಿಯ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕಿ ರೇಖಾ ಗುಪ್ತಾ ಅವರ ಹೆಸರನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಇತರೆ ಸಂಸದೀಯ ಸದಸ್ಯರು ಬನಿಯಾ ಸಮುದಾಯದವರನ್ನು ಸಿಎಂ ಆಗಿ ಆಯ್ಕೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅದರಂತೆ ಬನಿಯಾ ಸಮುದಾಯದ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ. ಮೊದಲು ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆದ್ದ ಪರ್ವೇಶ್ ವರ್ಮ ಅವರನ್ನು ಆಯ್ಕೆ ಮಾಡಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ರೇಖಾ ಗುಪ್ತಾ ದೆಹಲಿಯ ಸಿಎಂ ಆಗಿ ಆಯ್ಕೆಯಾಗಿದ್ದು, ಪರ್ವೇಶ್ ವರ್ಮ ದೆಹಲಿಯ ಉಪಮುಖ್ಯಮಂತ್ರಿಯಾಗಲಿದ್ದಾರೆ.

ರೇಖಾ ಗುಪ್ತಾ ಯಾರು?:

ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರೇಖಾ ಗುಪ್ತಾ ಅವರ ಹೆಸರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ರೇಖಾ ಗುಪ್ತಾ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಂದನಾ ಕುಮಾರಿ ಅವರನ್ನು 29,595 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ.

ಇದನ್ನೂ ಓದಿ: Delhi CM: ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿ; ಬಿಜೆಪಿ ಘೋಷಣೆ

ರೇಖಾ ಗುಪ್ತಾ ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಸಕ್ರಿಯ ಸದಸ್ಯೆ. ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂಲಕ ವಿದ್ಯಾರ್ಥಿ ರಾಜಕೀಯವನ್ನು ಪ್ರವೇಶ ಮಾಡಿದ ರೇಖಾ ಗುಪ್ತಾ 2003-2004ರವರೆಗೆ ಬಿಜೆಪಿ ಯುವ ಮೋರ್ಚಾ ದೆಹಲಿಯಲ್ಲಿ ಕಾರ್ಯದರ್ಶಿಯಾಗಿದ್ದರು. 2004-2006ರಲ್ಲಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅವರು 2007ರ ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಟಿಕೆಟ್‌ ಪಡೆದು ಉತ್ತರ ಪಿತಂಪುರಾ ವಾರ್ಡ್‌ನಿಂದ ಕೌನ್ಸಿಲರ್ ಆಗಿದ್ದರು. 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರನ್ನಾಗಿದ್ದರು.

ಬಿಜೆಪಿಯ 2ನೇ ಮಹಿಳಾ ಸಿಎಂ:

ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಲಿರುವ ರೇಖಾ ಗುಪ್ತಾ ಬಿಜೆಪಿಯಿಂದ ಎರಡನೇ ಮಹಿಳಾ ಸಿಎಂ ಆಗಿದ್ದಾರೆ. ಸುಷ್ಮಾ ಸ್ವರಾಜ್ ಬಳಿಕ ಸಿಎಂ ಸ್ಥಾನಕ್ಕೆ ಏರುತ್ತಿರುವ ರೇಖಾ ಗುಪ್ತಾ ವಿದ್ಯಾರ್ಥಿ ನಾಯಕತ್ವದಲ್ಲಿ ಬೇರೂರಿರುವ ದೀರ್ಘ ರಾಜಕೀಯ ಜೀವನವನ್ನು ಹೊಂದಿರುವ ಅನುಭವಿ ಬಿಜೆಪಿ ನಾಯಕಿ. ಪ್ರಸ್ತುತ ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ 50 ವರ್ಷ ವಯಸ್ಸಿನ ರೇಖಾ ಶರ್ಮ ಈ ಹಿಂದೆ ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಶಾಲಿಮಾರ್ ಬಾಗ್ (ವಾಯುವ್ಯ) ಸ್ಥಾನವನ್ನು 68,200 ಮತಗಳಿಂದ ಗೆದ್ದರು.

ಇದನ್ನೂ ಓದಿ: ದೆಹಲಿಗೆ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿ?; ಬಿಜೆಪಿಯಿಂದ ಅಚ್ಚರಿಯ ಆಯ್ಕೆ ಸಾಧ್ಯತೆ

ವೃತ್ತಿಯಲ್ಲಿ ವಕೀಲರಾಗಿರುವ ರೇಖಾ ಗುಪ್ತಾ, 1996ರಿಂದ 1997ರವರೆಗೆ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (DUSU) ಅಧ್ಯಕ್ಷರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು ಪುರಸಭೆಯ ರಾಜಕೀಯಕ್ಕೆ ಪ್ರವೇಶಿಸಿದರು. 2007ರಲ್ಲಿ ಉತ್ತರಿ ಪಿತಂಪುರ (ವಾರ್ಡ್ 54) ನಿಂದ ದೆಹಲಿ ಕೌನ್ಸಿಲರ್ ಚುನಾವಣೆಯಲ್ಲಿ ಗೆದ್ದರು. ರೇಖಾ ಗುಪ್ತಾ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ನಾಳೆ ಪ್ರಮಾಣವಚನ ಸ್ವೀಕಾರ:

ದೆಹಲಿಯ ಮುಖ್ಯಮಂತ್ರಿ ಹೆಸರು ಘೋಷಿಸಿದ ನಂತರ ಫೆಬ್ರವರಿ 20ರಂದು ರೇಖಾ ಗುಪ್ತಾ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನೂತನ ಸಿಎಂ, ಸಚಿವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಸಿಎಂಗಳು ಹಾಗೂ ಡಿಸಿಎಂಗಳು ಭಾಗಿಯಾಗಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Wed, 19 February 25