Delhi CM: ರೇಖಾ ಗುಪ್ತಾ ದೆಹಲಿಯ ನೂತನ ಮುಖ್ಯಮಂತ್ರಿ; ಬಿಜೆಪಿ ಘೋಷಣೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಬಹುಮತ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಸುಮಾರು 3 ದಶಕಗಳ ಬಳಿಕ ದೆಹಲಿಯಲ್ಲಿ ಸರ್ಕಾರ ರಚಿಸಲಿರುವ ಬಿಜೆಪಿ ಈಗಾಗಲೇ ನಾಳೆ (ಫೆ. 20) ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಿಗದಿಪಡಿಸಿತ್ತು. ಆದರೆ, ಸಿಎಂ ಯಾರಾಗಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿಯೇ ಇತ್ತು. ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ರೇಖಾ ಗುಪ್ತಾ ಅವರನ್ನು ಬಿಜೆಪಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಈ ಮೂಲಕ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ.

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯ ಪದಗ್ರಹಣಕ್ಕೆ ನಾಳೆ ಮುಹೂರ್ತ ನಿಗದಿಯಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ಮಾತ್ರ ಬಿಜೆಪಿ ಬಿಟ್ಟುಕೊಟ್ಟಿರಲಿಲ್ಲ. ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಭಾರೀ ಬಹುಮತ ಪಡೆಯುವ ಮೂಲಕ ದಿಗ್ವಿಜಯ ಸಾಧಿಸಿದಾಗಿನಿಂದಲೂ ಈ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿ ಗೆದ್ದ ಪರ್ವೇಶ್ ವರ್ಮಾ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಿಶ್ ಸೂದ್, ಜಿತೇಂದ್ರ ಮಹಾಜನ್, ರೇಖಾ ಗುಪ್ತಾ ಮುಂತಾದವರ ಹೆಸರು ಸಿಎಂ ರೇಸ್ನಲ್ಲಿ ಕಾಣಿಸಿಕೊಂಡಿತ್ತು. ದೆಹಲಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಎಳೆದಿರುವ ಬಿಜೆಪಿ ರೇಖಾ ಗುಪ್ತಾ ಅವರನ್ನು ದೆಹಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಹಾಗೇ, ಪರ್ವೇಶ್ ವರ್ಮ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಇದಕ್ಕೂ ಮೊದಲು ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್ನ ಶೀಲಾ ದೀಕ್ಷಿತ್, ಆಮ್ ಆದ್ಮಿ ಪಕ್ಷದ ಅತಿಶಿ ದೆಹಲಿಯ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. 4ನೇ ಮಹಿಳಾ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ. ರೇಖಾ ಗುಪ್ತಾ (ಶಾಲಿಮಾರ್ ಬಾಗ್ ಶಾಸಕಿ) ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ. 29,595 ಮತಗಳ ಅಂತರದಿಂದ ತಮ್ಮ ಸ್ಥಾನವನ್ನು ಗೆದ್ದಿದ್ದಾರೆ.
ದೆಹಲಿಯ ನೂತನ ಮುಖ್ಯಮಂತ್ರಿಯ ಆಯ್ಕೆಗಾಗಿ ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ಶಾಸಕರ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸಿಎಂ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಂಸದೀಯ ಸದಸ್ಯರು ‘ಪಂಜಾಬಿ’ ಮತ್ತು ‘ಬನಿಯಾ’ ಸಮುದಾಯಗಳಿಂದ ಸಿಎಂ ಸಂಭಾವ್ಯರ ಹೆಸರುಗಳನ್ನು ಚರ್ಚಿಸಿದ್ದರು ಎನ್ನಲಾಗಿದೆ. ಹಾಗೇ, ಈ ಬಾರಿ ದೆಹಲಿಯಲ್ಲಿ ಮಹಿಳಾ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿದ್ದವು.
#WATCH | Delhi BJP MLAs meet to elect Chief Minister pic.twitter.com/uBkM2o0moq
— ANI (@ANI) February 19, 2025
ಇದನ್ನೂ ಓದಿ: ನಾಳೆಯ ದೆಹಲಿ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಕೇಜ್ರಿವಾಲ್, ಅತಿಶಿಗೂ ಆಹ್ವಾನ ಕಳುಹಿಸಿದ ಬಿಜೆಪಿ
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ನಾಳೆ (ಫೆಬ್ರವರಿ 20) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಲವಾರು ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನೂತನ ಸಿಎಂ, ಸಚಿವರಿಗೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಎನ್‌ಡಿಎ ಸಿಎಂಗಳು ಹಾಗೂ ಡಿಸಿಎಂಗಳು ಭಾಗಿಯಾಗಲಿದ್ದಾರೆ. ಹಾಗೇ, ಕೇಂದ್ರ ಸರ್ಕಾರದ ಸಂಪುಟದ ಸಚಿವರು ಕೂಡ ಭಾಗವಹಿಸಲಿದ್ದಾರೆ.
#WATCH | BJP MLA-elect Rekha Gupta arrives at the party office to attend legislative party meeting
The name of the new Delhi CM will be announced today. pic.twitter.com/WZPROQ7COr
— ANI (@ANI) February 19, 2025
70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗಳಿಸುವ ಮೂಲಕ ಭಾರೀ ಬಹುಮತ ಪಡೆದಿತ್ತು. ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಂಡಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಮುಖಭಂಗವಾಗಿತ್ತು. ಕಾಂಗ್ರೆಸ್ ಈ ಬಾರಿಯೂ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಸತತ 3ನೇ ಅವಧಿಗೆ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡುವ ಮೂಲಕ ದಾಖಲೆ ಬರೆದಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Wed, 19 February 25