ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ

ದೆಹಲಿಯ ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿದು ಕನಿಷ್ಠ ಐವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಹಾಗೂ ಕಟ್ಟರ್‌ಗಳ ನೆರವಿನೊಂದಿಗೆ ಭರದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಅಕ್ರಮ ನಿರ್ಮಾಣಗಳ ಕುರಿತು ದೂರುಗಳಿದ್ದು, ಹಿಂದೆ ಇದೇ ರೀತಿ ಕಟ್ಟಡ ಕುಸಿದು ಜೀವಹಾನಿಯಾಗಿದ್ದ ಘಟನೆ ನಡೆದಿತ್ತು. ಗಾಯಾಳುಗಳಿಗೆ ಚಿಕಿತ್ಸೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ.

ದೆಹಲಿಯ ಸತ್ಯ ನಿಕೇತನದಲ್ಲಿ ಹಠಾತ್ ಕುಸಿದ ಕಟ್ಟಡ: ಅವಶೇಷಗಳಡಿ ಐವರು ಸಿಲುಕಿರುವ ಶಂಕೆ
ಕಟ್ಟಡ ಕುಸಿತ

Updated on: Sep 06, 2026 | 2:52 PM

ನವದೆಹಲಿ, ಸೆಪ್ಟೆಂಬರ್ 06: ರಾಷ್ಟ್ರ ರಾಜಧಾನಿ ದಕ್ಷಿಣ ದೆಹಲಿಯ ಜನನಿಬಿಡ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಕಟ್ಟಡವೊಂದು ದಿಢೀರನೆ ಕುಸಿದು ಬಿದ್ದಿದ್ದು, ಅವಶೇಷಗಳ ಅಡಿಯಲ್ಲಿ ಕನಿಷ್ಠ ಐದು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಧ್ಯಾಹ್ನ ಸುಮಾರು 1.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಅವಶೇಷಗಳನ್ನು ತೆರವುಗೊಳಿಸುವ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

5 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ: ಘಟನೆಯ ಮಾಹಿತಿ ತಿಳಿದ ತಕ್ಷಣ ದೆಹಲಿ ಅಗ್ನಿಶಾಮಕ ಸೇವೆಯ (DFS) ಐದು ವಾಹನಗಳು ಸ್ಥಳಕ್ಕೆ ತಲುಪಿವೆ. ಜೆಸಿಬಿ ಹಾಗೂ ಗ್ಯಾಸ್ ಕಟ್ಟರ್‌ಗಳ ನೆರವಿನಿಂದ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿ, ಒಳಗೆ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತರಲು ಶ್ರಮಿಸಲಾಗುತ್ತಿದೆ.

ಐವರು ಸಿಲುಕಿರುವ ಆತಂಕ: ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಅಥವಾ ನೆಲಮಹಡಿಯಲ್ಲಿದ್ದ ಸುಮಾರು ಐದು ಜನರು ಕಲ್ಲು-ಮಣ್ಣಿನ ರಾಶಿಯಡಿ ಸಿಲುಕಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕವಷ್ಟೇ ನಿಖರ ಸಂಖ್ಯೆ ಮತ್ತು ಸಾವುನೋವಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ, 7 ವರ್ಷದ ಮಗು ಸಾವು, 12 ಜನರ ರಕ್ಷಣೆ

ಹಾಸ್ಟೆಲ್ ಕಟ್ಟಡವೇ ಎಂಬ ಬಗ್ಗೆ ತನಿಖೆ: ಕುಸಿದ ಕಟ್ಟಡವನ್ನು ವಿದ್ಯಾರ್ಥಿ ನಿಲಯವಾಗಿ ಬಳಸಲಾಗುತ್ತಿತ್ತೇ ಅಥವಾ ಅಲ್ಲಿ ಯಾವುದೇ ದುರಸ್ತಿ ಮತ್ತು ನವೀಕರಣ ಕಾಮಗಾರಿ ನಡೆಯುತ್ತಿತ್ತೇ ಎಂಬುದನ್ನು ದೆಹಲಿ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು ಪರಿಶೀಲಿಸುತ್ತಿದ್ದಾರೆ.

ಸತ್ಯ ನಿಕೇತನ ಪ್ರದೇಶವು ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಮುಂಭಾಗದಲ್ಲೇ ಇರುವುದರಿಂದ, ಇಲ್ಲಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಪಿಜಿಗಳು ಮತ್ತು ಹಾಸ್ಟೆಲ್‌ಗಳಲ್ಲಿ ನೆಲೆಸಿದ್ದಾರೆ. ಈ ಕಾರಣದಿಂದಾಗಿ ಇಲ್ಲಿ ಕಿರಿದಾದ ಜಾಗದಲ್ಲಿ ಹಳೆಯ ಕಟ್ಟಡಗಳ ಮೇಲೆ ಹೆಚ್ಚುವರಿ ಅಂತಸ್ತುಗಳನ್ನು ಅಕ್ರಮವಾಗಿ ನಿರ್ಮಿಸಿರುವ ದೂರುಗಳು ಹಿಂದಿನಿಂದಲೂ ಇವೆ.

ವಿಡಿಯೋ

ಹಿಂದಿನ ದುರಂತದ ನೆನಪು: ಇದೇ ಸತ್ಯ ನಿಕೇತನ ಪ್ರದೇಶದಲ್ಲಿ ಈ ಹಿಂದೆಯೂ ದುರಸ್ತಿ ಕಾರ್ಯ ನಡೆಯುತ್ತಿದ್ದ ಮೂರು ಅಂತಸ್ತಿನ ಹಳೆಯ ಕಟ್ಟಡವೊಂದು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು.

ಅವಶೇಷಗಳು ದೊಡ್ಡ ಮಟ್ಟದಲ್ಲಿದ್ದರೆ ಶ್ವಾನದಳ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಜ್ಞರನ್ನು ಶೋಧ ಕಾರ್ಯಾಚರಣೆಗೆ ಕರೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮೀಪದ ಸಫ್ದರ್‌ಜಂಗ್ ಹಾಗೂ ಏಮ್ಸ್ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us