Arvind Kejriwal: ದೆಹಲಿ ಅಬಕಾರಿ ನೀತಿ ಹಗರಣ; ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

|

Updated on: Jun 20, 2024 | 8:41 PM

Delhi Excise Policy Scam: ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ 1 ತಿಂಗಳಿನಿಂದ ಬಂಧನಕ್ಕೊಳಗಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆಗೆ ಜಾಮೀನು ಮಂಜೂರಾಗಿದೆ.

Arvind Kejriwal: ದೆಹಲಿ ಅಬಕಾರಿ ನೀತಿ ಹಗರಣ; ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು
ಸಿಎಂ ಅರವಿಂದ್ ಕೇಜ್ರಿವಾಲ್‌
Follow us on

ನವದೆಹಲಿ: 2021-22ರ ದೆಹಲಿ ಮದ್ಯ ನೀತಿಗೆ (Delhi Liquor Policy) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ತಿಂಗಳು ಬಂಧನಕ್ಕೊಳಗಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಇಂದು ಜಾಮೀನು ಮಂಜೂರಾಗಿದೆ. ನಿನ್ನೆ ಕೇಜ್ರಿವಾಲ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಇಂದಿಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶರಾದ ನಿಯಯ್ ಬಿಂದು 2 ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ, ಇಂದು ಈ ಪ್ರಕರಣದ ಆದೇಶ ಪ್ರಕಟಿಸಿದೆ.

ಇದೀಗ ರದ್ದುಗೊಂಡಿರುವ ಮದ್ಯದ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇಂದು ಮುಂಜಾನೆ ಕಾಯ್ದಿರಿಸಿದ ನಂತರ ರೂಸ್ ಅವೆನ್ಯೂ ನ್ಯಾಯಾಲಯದ ರಜಾಕಾಲದ ನ್ಯಾಯಾಧೀಶ ನ್ಯಾಯ್ ಬಿಂದು ಅವರು ಆದೇಶವನ್ನು ಹೊರಡಿಸಿದ್ದಾರೆ. ಆದರೆ, ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ 100 ಕೋಟಿ ಕಿಕ್‌ಬ್ಯಾಕ್‌ ಪಡೆದಿದ್ದಕ್ಕೆ ನಮ್ಮ ಬಳಿ ಸಾಕ್ಷಿ ಇದೆ; ಇಡಿ ಹೇಳಿಕೆ

ಈ ಆದೇಶವನ್ನು ಜಾರಿಗೊಳಿಸಿದ ನಂತರ, ಇಡಿ ತನ್ನ ಕಾನೂನು ಪರಿಹಾರಗಳನ್ನು ಚಲಾಯಿಸಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು. ಆದರೆ, ನ್ಯಾಯಾಧೀಶರು ಆದೇಶಕ್ಕೆ ತಡೆ ನೀಡಲು ನಿರಾಕರಿಸಿದರು.

ಎಎಪಿ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ 1 ಲಕ್ಷ ರೂ. ಜಾಮೀನು ಬಾಂಡ್ ಪಾವತಿಸಿದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಹೊರಬರಬಹುದು.

ಅರವಿಂದ್ ಕೇಜ್ರಿವಾಲ್ ಸಂಜಯ್ ಸಿಂಗ್ ನಂತರ ಈ ಪ್ರಕರಣದಲ್ಲಿ ಜಾಮೀನು ಪಡೆದ ಎರಡನೇ ಎಎಪಿ ನಾಯಕರಾಗಿದ್ದಾರೆ. ದೆಹಲಿಯ ಮಾಜಿ ಸಚಿವ ಮನೀಶ್ ಸಿಸೋಡಿಯಾ ತಿಹಾರ್ ಜೈಲಿನಲ್ಲಿಯೇ ಇನ್ನೂ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಲೋಕಸಭೆ ಚುನಾವಣೆಗೆ ಮುನ್ನ ನಡೆದ ಹೈಡ್ರಾಮಾದಲ್ಲಿ ಮಾರ್ಚ್ 21ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2ರಂದು ಮತ್ತೆ ನ್ಯಾಯಾಲಯದ ಮುಂದೆ ಶರಣಾಗಿದ್ದರು.

ಇದನ್ನೂ ಓದಿ: Arvind Kejriwal: ಅಬಕಾರಿ ನೀತಿ: ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಜುಲೈ 3ರವರೆಗೆ ವಿಸ್ತರಣೆ

ವಿಚಾರಣೆಯ ವೇಳೆ, ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ 100 ಕೋಟಿ ರೂ.ಗೆ ಕಿಕ್‌ಬ್ಯಾಕ್‌ಗೆ ಬೇಡಿಕೆ ಇಟ್ಟಿದ್ದಕ್ಕೆ ತನ್ನ ಬಳಿ ಸಾಕ್ಷ್ಯವಿದೆ ಎಂದು ಇಡಿ ಹೇಳಿಕೊಂಡಿತ್ತು. ಗೋವಾದಲ್ಲಿ ಎಎಪಿಯ ಚುನಾವಣಾ ಪ್ರಚಾರಕ್ಕೆ ಹಣ ನೀಡಲು ಮದ್ಯ ಮಾರಾಟಗಾರರಿಂದ ಪಡೆದ ಕಿಕ್‌ಬ್ಯಾಕ್‌ಗಳನ್ನು ಬಳಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿತ್ತು. ಅರವಿಂದ್ ಕೇಜ್ರಿವಾಲ್ ಅವರ ವಕೀಲರು ಜಾರಿ ನಿರ್ದೇಶನಾಲಯ (ಇಡಿ) ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಸಾಕ್ಷ್ಯವನ್ನು ಹೊಂದಿಲ್ಲ ಎಂದು ವಾದಿಸಿದ್ದರು.

ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ನಾಳೆ (ಶುಕ್ರವಾರ) ತಿಹಾರ್ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ಜಾಮೀನು ಆದೇಶವು ಮೊದಲು ಜೈಲಿಗೆ ತಲುಪಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Thu, 20 June 24