ದೆಹಲಿಯಲ್ಲಿ ಶೇ.2.70ಕ್ಕೆ ಏರಿಕೆಯಾದ ಕೊರೊನಾ ಪಾಸಿಟಿವಿಟಿ ದರ; ಮಾಸ್ಕ್ ಕಡ್ಡಾಯವಲ್ಲ ಎಂದಿದ್ದೇ ಮುಳ್ಳಾಯ್ತಾ?
ದೇಶದಲ್ಲಿ ಏಪ್ರಿಲ್ 1ರಿಂದ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟು ಯಾವುದೇ ನಿರ್ಬಂಧಗಳೂ ಇಲ್ಲ. ಹಾಗಿದ್ದಾಗ್ಯೂ ಮಾಸ್ಕ್ ಮಾತ್ರ ಕಡ್ಡಾಯವಾಗಿ ಧರಿಸಿ ಎಂದು ಕೇಂದ್ರ ಸರ್ಕಾರ ಹೇಳಿತ್ತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ 0.5ರಿಂದ ಶೇ.2.70ಕ್ಕೆ ಏರಿಕೆಯಾಗಿದೆ. ಒಂದೇ ವಾರದಲ್ಲಿ ಇಷ್ಟು ಏರಿಕೆಯಾಗಿದ್ದು ಸಹಜವಾಗಿಯೇ ಜನರಲ್ಲ ಆತಂಕ ಮೂಡಿಸಿದೆ. ಆದರೆ ವೈದ್ಯರು, ಆರೋಗ್ಯ ತಜ್ಞರು ಧೈರ್ಯ ಹೇಳುತ್ತಿದ್ದಾರೆ. ಯಾರೂ ಗಾಬರಿಯಾಗಬೇಡಿ, ಪ್ರತಿದಿನ ದಾಖಲಾಗುವ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯೇ ಇದೆ ಎಂದಿದ್ದಾರೆ. ಜನರು ಜಾಗರೂಕರಾಗಿ ಇರಬೇಕು. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಬೇಕು ಎಂದೂ ತಿಳಿಸಿದ್ದಾರೆ. ಫೆ.5ರಂದು ದೆಹಲಿಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.2.78ರಷ್ಟಿತ್ತು. ಅದಾದ ಎರಡು ತಿಂಗಳ ಬಳಿಕ ಈಗ ಮತ್ತೆ ಶೇ.2ರ ಮೇಲೆ ಏರಿದೆ.
ಪ್ರತಿದಿನ 130-150ರಷ್ಟು ಕೊರೊನಾ ಕೇಸ್ಗಳು ಕಾಣಿಸಿಕೊಳ್ಳುತ್ತಿವೆ. ದಾಖಲಾಗುವ ಪ್ರಮಾಣದಲ್ಲಿ ಸಣ್ಣಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಹಾಗೆ ಕೆಲವು ದಿನಗಳಿಂದ ಪಾಸಿಟಿವಿಟಿ ರೇಟ್ ಕೂಡ ಹೆಚ್ಚಾಗಿದೆ. ಈಗಂತೂ ಶೇ.2.70ಕ್ಕೆ ತಲುಪಿದೆ. ಹಾಗಿದ್ದಾಗ್ಯೂ ಯಾರೂ ಹೆದರುವ ಅಗತ್ಯವಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆಯ ಡಾ. ರಿಚಾ ಸರೀನ್ ತಿಳಿಸಿದ್ದಾರೆ. ಆದರೂ ಸದ್ಯ ಕೊರೊನಾದ ಎಕ್ಸ್ಇ ರೂಪಾಂತರಿ ಭಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಜನ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯ ಎಂಬುದು ತಜ್ಞರ ಅಭಿಪ್ರಾಯ.
ದೇಶದಲ್ಲಿ ಏಪ್ರಿಲ್ 1ರಿಂದ ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟು ಯಾವುದೇ ನಿರ್ಬಂಧಗಳೂ ಇಲ್ಲ. ಹಾಗಿದ್ದಾಗ್ಯೂ ಮಾಸ್ಕ್ ಮಾತ್ರ ಕಡ್ಡಾಯವಾಗಿ ಧರಿಸಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ದೆಹಲಿ ಸರ್ಕಾರ ಅದನ್ನೂ ಆಯ್ಕೆಗೆ ಬಿಟ್ಟಿತ್ತು. ಮಾಸ್ಕ್ ಕಡ್ಡಾಯವಲ್ಲ, ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸುವುದಿಲ್ಲ ಎಂದು ಹೇಳಿತ್ತು. ದೆಹಲಿಯಲ್ಲಿ ಸೋಮವಾರ 137 ಹೊಸ ಕೊವಿಡ್ 19 ಪ್ರಕರಣಗಳು ದಾಖಲಾಗಿವೆ. ಇದೆಲ್ಲದರ ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಈ ಬಗ್ಗೆ ಮಾತನಾಡಿ, ದೆಹಲಿಯಲ್ಲಿನ ಕೊವಿಡ್ 19 ಪರಿಸ್ಥಿತಿ ಬಗ್ಗೆ ನಮ್ಮ ಸರ್ಕಾರ ಗಮನ ಹರಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಯಾವುದಕ್ಕೂ ಇರಲಿ ಎಂದು ಬಾಟಲಿಯಲ್ಲಿ ಮೂತ್ರ ಮಾಡಿಟ್ಟುಕೊಂಡಿದ್ದೆವು; ರೋಪ್ ವೇದಲ್ಲಿ ಸಿಲುಕಿದವರ ಭಯಾನಕ ಅನುಭವ
Published On - 10:43 pm, Tue, 12 April 22




