
ನವದೆಹಲಿ, ಮೇ 2: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನ್ಯಾಯಾಧೀಶರೊಬ್ಬರು ಇಂದು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನ್ಯಾಯಾಧೀಶರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ನ್ಯಾಯಾಧೀಶರ ಈ ನಿರ್ಧಾರಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಕಂಡುಬಂದಿಲ್ಲ. ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ನ್ಯಾಯಾಧೀಶರ ಹೆಸರು ಅಮನ್ ಕುಮಾರ್ ಶರ್ಮಾ. ಇವರಿಗೆ 30 ವರ್ಷವಾಗಿತ್ತು.
30 ವರ್ಷದ ಅಮನ್ ಕುಮಾರ್ ಶರ್ಮಾ ಅವರನ್ನು ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ಆತ್ಮಹತ್ಯೆಯ ಬಗ್ಗೆ ಇಂದು ಮಧ್ಯಾಹ್ನ 1.45ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಇದಾದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಐಇಡಿ ನಿಷ್ಕ್ರಿಯಗೊಳಿಸುವಾಗ ಸ್ಫೋಟ; ನಾಲ್ವರು ಭದ್ರತಾ ಸಿಬ್ಬಂದಿ ಸಾವು
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದವು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಮನ್ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೆಹಲಿ ಪೊಲೀಸರು ಅವರ ಸಾವನ್ನು ದೃಢಪಡಿಸಿ, ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದಾರೆ. ನ್ಯಾಯಾಧೀಶ ಅಮನ್ ಕುಮಾರ್ ಶರ್ಮಾ ಅವರ ಹಠಾತ್ ಸಾವು ನಗರದ ಕಾನೂನು ಸಮುದಾಯದಲ್ಲಿ ಆಘಾತ ಉಂಟುಮಾಡಿದೆ. ಅವರ ಮನೆ ಗ್ರೀನ್ ಪಾರ್ಕ್ ಪ್ರದೇಶದಲ್ಲಿದೆ.
ಅಮನ್ ಕುಮಾರ್ ಶರ್ಮಾ ಜೂನ್ 19, 2021ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರಿದರು. ಅವರು 2018ರಲ್ಲಿ ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಅವರ ಅಧಿಕಾರಾವಧಿಯಲ್ಲಿ ಅವರು ಹಲವಾರು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಆಲಿಸಿದ್ದರು. ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2025ರಿಂದ ಅವರನ್ನು ಕಾರ್ಕಾರ್ಡೂಮಾ ನ್ಯಾಯಾಲಯದಲ್ಲಿ ಈಶಾನ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪೂರ್ಣ ಸಮಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ