ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು

ದೆಹಲಿಯಲ್ಲಿ ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ಆಕೃತಿ ಸುತಾರ್ ನಿಗೂಢವಾಗಿ ಮೃತಪಟ್ಟಿದ್ದಾರೆ. ಪೋಷಕರು ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಪತಿ ಮತ್ತು ಆತನ ಕುಟುಂಬದವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಪತಿ 20 ಲಕ್ಷ ರೂ. ವರದಕ್ಷಿಣೆ ಕೇಳಿ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಪೊಲೀಸರು ಪ್ರಸ್ತುತ ಹತ್ಯೆ ಮತ್ತು ಆತ್ಮಹತ್ಯೆ ಎರಡೂ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆ ನಿಗೂಢ ಸಾವು
ಆಕೃತಿ

Updated on: Jul 06, 2026 | 8:12 AM

ನವದೆಹಲಿ, ಜುಲೈ 06: ದೆಹಲಿಯ ಅಪಾರ್ಟ್​ಮೆಂಟ್ ಆವರಣದಲ್ಲಿ ಶನಿವಾರ ರಾತ್ರಿ 28 ವರ್ಷದ ನವವಿವಾಹಿತೆ ಆಕೃತಿ ಸುತಾರ್ ಎಂಬುವವರ ಶವ ಪತ್ತೆಯಾಗಿದೆ. ಇದು ಆತ್ಮಹತ್ಯೆಯಲ್ಲ, ವರದಕ್ಷಿಣೆ(Dowry)ಗಾಗಿ ಆಕೆಯ ಪತಿ ಮತ್ತು ಕುಟುಂಬಸ್ಥರೇ ಸೇರಿ ಮಾಡಿರುವ ಕೊಲೆ ಎಂದು ಆಕೃತಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಛತ್ತರ್‌ಪುರದ ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಆಕೃತಿ ಮೃತದೇಹ, ಲೋಧಿ ಕಾಲೋನಿಯಲ್ಲಿರುವ ಅಪಾರ್ಟ್​ಮೆಂಟ್​ ಹೊರಗೆ ಶನಿವಾರ ರಾತ್ರಿ 9 ಗಂಟೆ ಪತ್ತೆಯಾಗಿತ್ತು. ಆಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.

ಕೆಲಸಕ್ಕೆ ಸೇರಿದ್ದ ದಿನವೇ ಪಾರ್ಟಿ ಮಾಡಿದ್ದ ಆಕೃತಿ
ಕಳೆದ ಏಪ್ರಿಲ್ 24 ರಂದು ವಿವಾಹವಾಗಿದ್ದ ಆಕೃತಿ, ಮದುವೆಯ ರಜೆಯ ನಂತರ ಶನಿವಾರವಷ್ಟೇ ಹೊಸ ಕೆಲಸಕ್ಕೆ ಸೇರಿದ್ದರು. ಅದೇ ದಿನವೇ, ಅದೇ ಖುಷಿಯಲ್ಲಿ ಅಂದೇ ಅವರು ತಮ್ಮ ಸಹೋದ್ಯೋಗಿಗಳಿಗೆ ಒಂದು ಸಣ್ಣ ಪಾರ್ಟಿಯನ್ನೂ ಸಹ ಆಯೋಜಿಸಿದ್ದರು. ಸಂಜೆ 6 ಗಂಟೆ ಸುಮಾರಿಗೆ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ, ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿರುವುದಾಗಿ ಹೇಳಿದ್ದರು.

ಹೀಗೆ ಕಚೇರಿಯಲ್ಲಿ ಸಂತೋಷದಿಂದ ಪಾರ್ಟಿ ಮುಗಿಸಿ ಬಂದವಳು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಆಕೆಯ ಚಿಕ್ಕಪ್ಪ ಮನಂಜಯ್ ಹಾಗೂ ಸಹೋದರ ಅಮಯ್ ಸುತಾರ್ ವಾದಿಸಿದ್ದಾರೆ.

ಮತ್ತಷ್ಟು ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್​​ಗೆ ನಾಲೆಗೆ ಹಾರಿದ ಮಹಿಳೆ

90 ನಿಮಿಷಗಳಲ್ಲಿ ಬದಲಾದ ದೃಶ್ಯ
ಆಕೃತಿ ತಾಯಿಯೊಂದಿಗೆ ಮಾತನಾಡಿದ ಕೇವಲ ಎರಡು ಗಂಟೆಗಳ ನಂತರ, ಅಂದರೆ ರಾತ್ರಿ 8 ಗಂಟೆಗೆ ಆಕೆಯ ಪತಿ ಅರಸು ಸಿಕ್ಕಾ ಆಕೆಯ ಪೋಷಕರಿಗೆ ಕರೆ ಮಾಡಿ, ಆಕೃತಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಅದಾಗಿ ಕೇವಲ 90 ನಿಮಿಷಗಳ ಒಳಗೆ ಪಾಲಿಕಾ ಕುಂಜ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಆಕೃತಿ ಮತ್ತು ಅರಸು ಸಿಕ್ಕಾ ಪರಸ್ಪರ ಎಂಟು ವರ್ಷಗಳ ಕಾಲ ಪ್ರೀತಿಸಿ ಏಪ್ರಿಲ್ 24 ರಂದು ಮದುವೆಯಾಗಿದ್ದರು. ಪತಿ ಅರಸು ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದ. ಮದುವೆಯಾದ ದಿನದಿಂದಲೇ ಅರಸು ಮತ್ತು ಆತನ ಕುಟುಂಬದವರು 20 ಲಕ್ಷ ರೂ. ವರದಕ್ಷಿಣೆ ತರುವಂತೆ ಆಕೃತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಅರಸು ಹಲವು ಬಾರಿ ಆಕೃತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನ್ನು ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ.

ಸಾವಿಗೆ ಕೇವಲ ಎರಡು ದಿನಗಳ ಮುನ್ನ ದಂಪತಿ ನಡುವೆ ಭಾರಿ ಜಗಳ ನಡೆದಿತ್ತು ಎಂದು ತಿಳಿದುಬಂದಿದೆ. ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹತ್ಯೆ ಮತ್ತು ಆತ್ಮಹತ್ಯೆ ಎರಡೂ ಕೋನಗಳಿಂದ ತನಿಖೆ ಚುರುಕುಗೊಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us