ಪಹಲ್ಗಾಮ್ ದಾಳಿ ಬಳಿಕ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆಯನ್ನು ಬಹಿರಂಗಪಡಿಸಿದ ಅಜಿತ್ ದೋವಲ್
ಪಹಲ್ಗಾಮ್ ಉಗ್ರರ ದಾಳಿಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊದಲಿಗೆ ತಿಳಿಯಲು ಬಯಸಿದ್ದು ಈ ದಾಳಿಗೆ ಯಾರು ಹೊಣೆಗಾರರು ಎಂಬುದನ್ನು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ. ಡಿಸ್ಕವರಿ ಚಾನೆಲ್ನ ಸಂದರ್ಶನವೊಂದರಲ್ಲಿ ಅವರು ಭಾರತ ನಡೆಸಿದ 'ಆಪರೇಷನ್ ಸಿಂಧೂರ್' (Operation Sindoor) ಕಾರ್ಯಾಚರಣೆಗೆ ಕಾರಣವಾದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ನೀಡಿರುವ ತಮ್ಮ ಮೊದಲ ಸಂದರ್ಶನದಲ್ಲಿ ದೋವಲ್ ಅವರು, ಭಾರತದ ಸೈನಿಕ ಪ್ರತಿಕ್ರಿಯೆಯನ್ನು ರೂಪಿಸಿದ ಪ್ರಮುಖ ನಿರ್ಧಾರಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.

ನವದೆಹಲಿ, ಆಗಸ್ಟ್ 15: 2025ರ ಪಹಲ್ಗಾಮ್ ದಾಳಿಯ (Pahalgam Attack) ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ 26 ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕೂಡಲೇ ತಿಳಿದುಕೊಳ್ಳಿ ಎಂದು ಹೇಳಿದ್ದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ದಾಳಿಗೆ ತಕ್ಷಣದ ಪ್ರತಿಕ್ರಿಯೆಯನ್ನು ಪ್ರಧಾನಿ ಕೋರಿದ್ದರು ಎಂದು ಅವರು ಬಹಿರಂಗಪಡಿಸಿದ್ದಾರೆ. ಡಿಸ್ಕವರಿ ವಾಹಿನಿಯ “ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್” (Declassified: Operation Sindoor) ಸಾಕ್ಷ್ಯಚಿತ್ರ ಸರಣಿಯ ಸಂದರ್ಶನದಲ್ಲಿ ಮಾತನಾಡಿದ ಅಜಿತ್ ದೋವಲ್, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕಾರಣವಾದ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.
ಮಾಜಿ ಗುಪ್ತಚರ ಅಧಿಕಾರಿಯೂ ಆಗಿರುವ ಅಜಿತ್ ದೋವಲ್, 88 ಗಂಟೆಗಳ ಕಾಲ ನಡೆದ ಈ ಮಿಲಿಟರಿ ಕಾರ್ಯಾಚರಣೆಯು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಶತ್ರುಗಳ ಶಿಬಿರಗಳನ್ನು, ಅದರಲ್ಲೂ ವಿಶೇಷವಾಗಿ ಪಹಲ್ಗಾಮ್ ಉಗ್ರರ ದಾಳಿಯ ಜೊತೆ ನಂಟಿರುವ ತಾಣಗಳನ್ನು ಧ್ವಂಸಗೊಳಿಸುವ ಗುರಿಯನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 22ರಂದು 26 ಜನರ ಪ್ರಾಣವನ್ನು ಬಲಿ ಪಡೆದ ದಶಕಗಳಲ್ಲೇ ಅತ್ಯಂತ ಭೀಕರವಾದ ಪಹಲ್ಗಾಮ್ ದಾಳಿಗೆ ತಿರುಗೇಟು ನೀಡಲು ಭಾರತೀಯ ಸಶಸ್ತ್ರ ಪಡೆಗಳು ಮೇ ತಿಂಗಳಲ್ಲಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ನಡೆಸಿದ್ದವು.
‘ಆಪರೇಷನ್ ಸಿಂಧೂರ್’ ನಡೆದು ಒಂದು ವರ್ಷಕ್ಕೂ ಹೆಚ್ಚು ಅವಧಿಯ ನಂತರ ನೀಡಿದ ತಮ್ಮ ಮೊದಲ ಸಂದರ್ಶನದಲ್ಲಿ ಅಜಿತ್ ದೋವಲ್, ಸೌದಿ ಅರೇಬಿಯಾ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಹಿಂತಿರುಗಿದ್ದ ಪ್ರಧಾನಿ ಮೋದಿಯನ್ನು ತಾವು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಸೌದಿ ಪ್ರವಾಸದಲ್ಲಿದ್ದ ಮೋದಿ:
“ಪ್ರಧಾನಮಂತ್ರಿಯವರು ಸೌದಿಯ ಪ್ರವಾಸವನ್ನು ಅರ್ಧಕ್ಕೇ ಬಿಟ್ಟು ಹಿಂತಿರುಗಿದರು. ನಂತರ, ವಿಮಾನ ನಿಲ್ದಾಣದಲ್ಲೇ ಪ್ರಧಾನಿ ಮೋದಿ ಮತ್ತು ವಿದೇಶಾಂಗ ಕಾರ್ಯದರ್ಶಿ ಹಾಗೂ ನಾನು ಸಭೆ ನಡೆಸಿದೆವು. ಮೊದಲಿಗೆ, ಅವರು ಎಲ್ಲ ಸತ್ಯಾಸತ್ಯತೆಗಳನ್ನು ತಿಳಿಯಲು ಬಯಸಿದ್ದರು. ಈ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಪ್ರಧಾನಿ ಮೋದಿ ತಿಳಿಯಲು ಬಯಸಿದ್ದರು. ಆ ಬಗ್ಗೆ ತಕ್ಷಣವೇ ವಿವರಗಳನ್ನು ಕೋರಿದ್ದರು” ಎಂದು ಎನ್‌ಎಸ್‌ಎ ಅಜಿತ್ ದೋವಲ್ ಹೇಳಿದ್ದಾರೆ.
“ಆಗ ಅವರು ನನಗೆ ಕೇಳಿದ ಮೊದಲ ಪ್ರಶ್ನೆ ‘ಇದನ್ನು ಯಾರು ಮಾಡಿದ್ದಾರೆ? ಯಾರು ಇದಕ್ಕೆ ಹೊಣೆಗಾರರು? ದಾಳಿಕೋರರು ಯಾರು ಎಂಬುದರ ಬಗ್ಗೆ ನಾವು ಅತ್ಯಂತ ಸ್ಪಷ್ಟವಾಗಿರಬೇಕು. ನನಗೆ ಆ ವಿವರ ತಕ್ಷಣವೇ ಬೇಕು’ ಎಂದಾಗಿತ್ತು” ಎಂದು ಅಜಿತ್ ದೋವಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ
‘ಆಪರೇಷನ್ ಸಿಂಧೂರ್’ ಮಿಷನ್ ಕೇವಲ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸುವುದರ ಮೇಲಷ್ಟೇ ಗಮನ ಹರಿಸಬೇಕು ಎಂದು ಭಾರತ ನಿರ್ಧರಿಸಿತ್ತು . “ಭಯೋತ್ಪಾದನೆಗೆ ನೀಡುವ ಬೆಂಬಲ ಅಥವಾ ಉಗ್ರರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಸೇನೆ ಅರ್ಥಮಾಡಿಕೊಳ್ಳುವಂತೆ ಮಾಡುವುದು ಭಾರತದ ಉದ್ದೇಶವಾಗಿತ್ತು” ಎಂದು ಅವರು ತಿಳಿಸಿದರು.
‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನವು ಭಾರತದ ವಿರುದ್ಧ ದಾಳಿಗಳನ್ನು ನಡೆಸಿತು, ಇದಕ್ಕೆ ಪ್ರತಿಯಾಗಿ ಭಾರತವೂ ತೀವ್ರವಾಗಿ ತಿರುಗೇಟು ನೀಡಿತು. ಉಭಯ ದೇಶಗಳ ನಡುವೆ ಸಾವು-ನೋವುಗಳಿಗೆ ಕಾರಣವಾದ ಈ ಮೂರು ದಿನಗಳ ಗಡಿಯ ಸಂಘರ್ಷವು, ಎರಡೂ ನೆರೆಹೊರೆಯ ರಾಷ್ಟ್ರಗಳು ಕಟ್ಟುನಿಟ್ಟಿನ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ ಅಂತ್ಯಗೊಂಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




