ಭಾರತದ ಸಹಿಷ್ಣುತೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ; ‘ಆಪರೇಷನ್ ಸಿಂಧೂರ್’ ಕುರಿತು ಅಜಿತ್ ದೋವಲ್ ಸಂದೇಶ
ಭಾರತದ ಔದಾರ್ಯ ಹಾಗೂ ಸಹಿಷ್ಣುತೆಯನ್ನು ಎಂದಿಗೂ ದೌರ್ಬಲ್ಯವೆಂದು ತಪ್ಪು ತಿಳಿಯಬೇಡಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಶತ್ರು ದೇಶಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಗತ್ಯ ಬಿದ್ದಾಗ ಎಂತಹದ್ದೇ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿ ಭಾರತ ಕಠಿಣ ಪ್ರತ್ಯುತ್ತರ ನೀಡಬಲ್ಲದು ಎಂದು ಅವರು ಪ್ರತಿಪಾದಿಸಿದ್ದಾರೆ. ಡಿಸ್ಕವರಿ ವಾಹಿನಿಯ 'ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್' ಡಾಕ್ಯುಸರಣಿಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಅಜಿತ್ ದೋವಲ್ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ ಅಜಿತ್ ದೋವಲ್ ನೀಡಿದ ಮೊದಲ ಸಂದರ್ಶನ ಇದಾಗಿದೆ.

ನವದೆಹಲಿ, ಆಗಸ್ಟ್ 14: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ (Operation Sindoor) ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಡಿಸ್ಕವರಿ ಚಾನೆಲ್‌ನ ಮುಂಬರುವ ಡಾಕ್ಯುಸರಣಿ ‘ಡಿಕ್ಲಾಸಿಫೈಡ್: ಆಪರೇಷನ್ ಸಿಂಧೂರ್’ ನಲ್ಲಿ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಹಿರಿಯ ಸೇನಾ ಮತ್ತು ರಾಷ್ಟ್ರೀಯ ಭದ್ರತಾ ನಾಯಕರ ಪ್ರತ್ಯಕ್ಷ ಅನುಭವಗಳನ್ನು ಒಳಗೊಂಡಿರುವ ಈ ಸಾಕ್ಷ್ಯಚಿತ್ರದಲ್ಲಿ, 88 ಗಂಟೆಗಳ ಕಾಲ ನಡೆದ ಈ ಸುದೀರ್ಘ ಆಪರೇಷನ್ ಸಿಂಧೂರ್ ದಾಳಿಯ ಕುರಿತು ಅಜಿತ್ ದೋವಲ್ ಅವರ ಅಪರೂಪದ ಸಂದರ್ಶನವಿದೆ.
“ಭಯೋತ್ಪಾದನೆಗೆ ನೀಡುವ ಈ ಬೆಂಬಲ ಅಥವಾ ಭಯೋತ್ಪಾದಕರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿರುವುದನ್ನು ನಮಗೆ ಸಹಿಸಲು ಸಾಧ್ಯವಿಲ್ಲ ಎಂಬುದನ್ನು ಪಾಕಿಸ್ತಾನ ಸೇನೆ ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸಿದ್ದೆವು. ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಭಾರತ ಯಾವ ಮಟ್ಟಕ್ಕೆ ಬೇಕಾದರೂ ಹೋಗಲು ಸಿದ್ಧವಾಗಿದೆ. ಒಮ್ಮೆ ವಿಷಯ ಶುರುವಾದರೆ, ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಎಷ್ಟು ಅಗತ್ಯವೋ ಅಷ್ಟು ದೂರ ಹೋಗಲು ನಾವು ಸಿದ್ಧರಿದ್ದೇವೆ. ಅದಕ್ಕೆ ಯಾವುದೇ ಮಿತಿಗಳಿಲ್ಲ. ನಾವು ನಮ್ಮ ದೇಹದ ಕೊನೆಯ ರಕ್ತದ ಹನಿಯವರೆಗೂ ಹೋರಾಡುತ್ತೇವೆ” ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಅಜಿತ್ ದೋವಲ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಹುತಾತ್ಮರಾದ ವೀರ ಯೋಧರ ಹೆಸರು ಪ್ರಕಟ
“ಪ್ರಪಂಚಕ್ಕೆ ಭಾರತದ ಸಂದೇಶ ಅತ್ಯಂತ ಸ್ಪಷ್ಟವಾಗಿದೆ. ಭಾರತ ತೋರುವ ಔದಾರ್ಯ ಅಥವಾ ಸಹಿಷ್ಣುತೆಯನ್ನು ನಮ್ಮ ದೌರ್ಬಲ್ಯವೆಂದು ತಪ್ಪಾಗಿ ಭಾವಿಸಬಾರದು. ಭಾರತವು ಅಪಾಯಗಳನ್ನು ಎದುರಿಸಲು ಸಿದ್ಧವಿದೆ. ಅದರ ಪರಿಣಾಮ ಏನೇ ಇರಲಿ, ಶತ್ರುಗಳ ಮೇಲೆ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ” ಎಂದು ಅಜಿತ್ ದೋವಲ್ ಹೇಳಿದ್ದಾರೆ.
ಶತ್ರು ಶಿಬಿರಗಳ ಧ್ವಂಸವೇ ಮುಖ್ಯ ಉದ್ದೇಶ:
88 ಗಂಟೆಗಳ ಕಾಲ ನಡೆದ ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯ ಮುಖ್ಯ ಉದ್ದೇಶ ಶತ್ರುಗಳ ತರಬೇತಿ ಶಿಬಿರಗಳನ್ನು ನಾಶಪಡಿಸುವುದಾಗಿತ್ತು. ವಿಶೇಷವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕಾರಣರಾದವರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ರೂಪಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಏನಿದು ಆಪರೇಷನ್ ಸಿಂಧೂರ್?:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳು ಮತ್ತು ಶಿಬಿರಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯ ನಂತರ ಪಾಕಿಸ್ತಾನವೂ ಭಾರತದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ಮೂಲಕ ದಾಳಿಗೆ ಯತ್ನಿಸಿತ್ತು. ಭಾರತದ ಪ್ರತ್ಯುತ್ತರದೊಂದಿಗೆ ಎರಡೂ ದೇಶಗಳ ನಡುವೆ ಸುಮಾರು 88 ಗಂಟೆಗಳ ಕಾಲ ತೀವ್ರ ಮಿಲಿಟರಿ ಸಂಘರ್ಷ ನಡೆಯಿತು. ಮೇ 10ರ ಸಂಜೆ ಎರಡೂ ದೇಶಗಳ ನಡುವೆ ಮಾತುಕತೆ ನಡೆದ ನಂತರ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಯಿತು.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಹುತಾತ್ಮರ ವಿವಾದ; ಸಚಿವ ರಾಜನಾಥ್ ಸಿಂಗ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸ್ಪೀಕರ್ಗೆ ಕಾಂಗ್ರೆಸ್ ಪತ್ರ
ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ 2 ಭಾಗಗಳ ಡಾಕ್ಯುಸರಣಿಯಲ್ಲಿ ಆಪರೇಷನ್ ಸಿಂಧೂರ್‌ನ ನಿರ್ಧಾರಗಳು, ತಂತ್ರಗಳು ಮತ್ತು ನೈಜ ಘಟನೆಗಳ ಬಗ್ಗೆ ಭಾರತದ ಸೇನಾ ನಾಯಕರು ಮತ್ತು ಭದ್ರತಾ ಅಧಿಕಾರಿಗಳು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಆಗಸ್ಟ್ 15ರಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಮತ್ತು ಡಿಸ್ಕವರಿ ಪ್ಲಸ್‌ನಲ್ಲಿ ಈ ಡಾಕ್ಯುಸರಣಿ ಪ್ರತ್ಯೇಕವಾಗಿ ಪ್ರಸಾರವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




