ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು ಗಡುವುಗಳ ವಿಸ್ತರಣೆ
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಟ್ಯಾಕ್ಸ್ ಆಡಿಟ್ ವರದಿ (Tax Audit Report) ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30ರಂದು ಇದ್ದ ಡೆಡ್ಲೈನ್ ಅನ್ನು ಅಕ್ಟೋಬರ್ 21ಕ್ಕೆ ವಿಸ್ತರಿಸಲಾಗಿದೆ. ಆಡಿಟಿಂಗ್ ಅಗತ್ಯ ಇರುವ ಕಾರ್ಪೊರೇಟ್ಗಳು ಹಾಗು ಇತರ ತೆರಿಗೆದಾರರಿಗೆ ಇನ್ಕಮ್ ರಿಟರ್ನ್ ಸಲ್ಲಿಸಲು ನವೆಂಬರ್ 21ರವರೆಗೂ ಕಾಲಾವಕಾಶ ಕೊಡಲಾಗಿದೆ. ಈ ಹೊಸ ಗಡುವು ಮತ್ತು ತೆರಿಗೆದಾರರಿಗೆ ಸಿಗುವ ಪ್ರಯೋಜನಗಳ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 28: ಅಕ್ಟೋಬರ್ 31ಕ್ಕೆ ಐಟಿ ರಿಟರ್ನ್ಸ್ ಫೈಲ್ ಮಾಡಲು ಡೆಡ್ಲೈನ್ ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳು ಹಾಗು ನಿರ್ದಿಷ್ಟ ತೆರಿಗೆದಾರರಿಗೆ ನಿರಾಳ ತರುವ ಸುದ್ದಿ ಬಂದಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಈ ಡೆಡ್ಲೈನ್ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದೆ. ಇನ್ಕಮ್ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 31ರಿಂದ ನವೆಂಬರ್ 21ಕ್ಕೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಟ್ಯಾಕ್ಸ್ ಆಡಿಟಿಂಗ್ ಮಾಡಿಸಬೇಕಾದ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸಲು ನವೆಂಬರ್ 21ರವರೆಗೂ ಕಾಲಾವಕಾಶ ಸಿಕ್ಕಂತಾಗಿದೆ.
ಟ್ಯಾಕ್ಸ್ ಆಡಿಟ್ ರಿಪೋರ್ಟ್ಗಳನ್ನು (Tax Audit Reports) ಸಲ್ಲಿಸುವ ಡೆಡ್ಲೈನ್ ಅನ್ನೂ ವಿಸ್ತರಿಸಲಾಗಿದೆ. ಆಡಿಟ್ ರಿಪೋರ್ಟ್ಗಳನ್ನು ಸೆಪ್ಟೆಂಬರ್ 30ಕ್ಕೆ ಸಲ್ಲಿಸಬೇಕಿತ್ತು. ಅದನ್ನು ಅಕ್ಟೋಬರ್ 21ರವರೆಗೂ ವಿಸ್ತರಿಸಲಾಗಿದೆ.
ಸಿಬಿಡಿಟಿ ನಿರ್ಧಾರಗಳಿವು
- ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಸುವ ಡೆಡ್ಲೈನ್ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 21ಕ್ಕೆ ವಿಸ್ತರಣೆ
- ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಡೆಡ್ಲೈನ್ ಅಕ್ಟೋಬರ್ 31ರಿಂದ ನವೆಂಬರ್ 21ಕ್ಕೆ ವಿಸ್ತರಣೆ
ಇದನ್ನೂ ಓದಿ: ಪಿಎಂ ಆವಾಸ್ ಯೋಜನೆ; ಸ್ವಂತ ಸೂರು ಇಲ್ಲದವರಿಗೆ ಒಂದು ಆಶಾಕಿರಣ; ಸರ್ಕಾರದ ನೆರವು ಬಳಸಿ
ಗಡುವು ವಿಸ್ತರಣೆಗೆ ಕಾರಣ: ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಕಂಡುಬಂದ ತಾಂತ್ರಿಕ ಅಡಚಣೆಗಳು ಹಾಗೂ ತೆರಿಗೆ ವೃತ್ತಿಪರರು (Tax Consultants) ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಿಂದ ಬಂದ ಸಾಲು ಸಾಲು ಮನವಿಗಳನ್ನು ಪರಿಗಣಿಸಿ ಸಿಬಿಡಿಟಿ ಈ ನಿರ್ಧಾರ ತೆಗೆದುಕೊಂಡಿದೆ.
ಆದಾಯ ತೆರಿಗೆ ಇಲಾಖೆ ಎಕ್ಸ್ ಪೋಸ್ಟ್
The Central Board of Direct Taxes (CBDT) has decided to extend the due date of furnishing of Return of Income for Assessment Year 2026-27 in the case of persons mentioned at S. No. 2 in the Table below Explanation 2 to sub-section (1) of section 139 of the Income-tax Act, 1961… pic.twitter.com/wyLzVBXSNY
— Income Tax India (@IncomeTaxIndia) September 28, 2026
ಹೊಸ ಆದೇಶದ ಪ್ರಕಾರ, ಆಡಿಟ್‌ಗೆ ಒಳಪಡುವ ಉದ್ಯಮಿಗಳು ಮತ್ತು ವೃತ್ತಿಪರರಿಗೆ ತಮ್ಮ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಸಿಕ್ಕಂತಾಗಿದೆ. ಇದರಿಂದಾಗಿ ಕೊನೆಯ ಕ್ಷಣದ ಧಾವಂತ ಮತ್ತು ಸರ್ವರ್ ಸಮಸ್ಯೆಗಳಿಂದ ಉಂಟಾಗುವ ತೊಂದರೆ ತಪ್ಪಲಿದೆ.
ರಿಟರ್ನ್ಸ್ ಸಲ್ಲಿಕೆಗೆ ಸುಲಭ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಸಲ್ಲಿಕೆಯ ದಿನಾಂಕ ವಿಸ್ತರಣೆಯು ತರುವಾಯ ಸಲ್ಲಿಸಬೇಕಾದ ಆದಾಯ ತೆರಿಗೆ ರಿಟರ್ನ್ಸ್ (ITR) ಪ್ರಕ್ರಿಯೆಯನ್ನು ಸಹ ಸರಾಗಗೊಳಿಸಲಿದೆ ಎಂದು ಸಿಬಿಡಿಟಿ ತಿಳಿಸಿದೆ.
ತೆರಿಗೆದಾರರು ಯಾವುದೇ ಗೊಂದಲವಿಲ್ಲದೆ ನಿಗದಿತ ವಿಸ್ತೃತ ಅವಧಿಯೊಳಗೆ ತಮ್ಮ ಇ-ಫೈಲಿಂಗ್ ಪೋರ್ಟಲ್ ಮೂಲಕ ಆಡಿಟ್ ವರದಿಗಳನ್ನು ಸಲ್ಲಿಸಲು ಇಲಾಖೆ ಸೂಚಿಸಿದೆ. ನಿಗದಿತ ಸಮಯಕ್ಕೆ ಆಡಿಟ್ ವರದಿ ಸಲ್ಲಿಸದಿದ್ದರೆ ಬೀಳುತ್ತಿದ್ದ ಭಾರಿ ದಂಡ ಹಾಗೂ ಬಡ್ಡಿ ಪಾವತಿಯಿಂದ ತೆರಿಗೆದಾರರಿಗೆ ಈ ವಿಸ್ತರಣೆಯು ದೊಡ್ಡ ಮಟ್ಟದ ಅನುಕೂಲ ಮಾಡಿಕೊಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




