
ನವದೆಹಲಿ, ಸೆಪ್ಟೆಂಬರ್ 20: ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ, ಕೇಂದ್ರ ಸಚಿವ ಎಸ್. ಜೈಶಂಕರ್, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರಿಗೆ ಮತದಾರರ ಪಟ್ಟಿಯ ಎಸ್‌ಐಆರ್ ವೇಳೆ ವಿವರಗಳಲ್ಲಿ ಕಂಡುಬಂದ ವ್ಯತ್ಯಾಸಗಳಿಗಾಗಿ ನೋಟೀಸ್ ನೀಡಲಾಗಿದೆ. ಒಟ್ಟಾರೆ, 33.13 ಲಕ್ಷ ಜನರಿಗೆ ಆಯೋಗದಿಂದ ನೋಟೀಸ್ ಜಾರಿಯಾಗಿದೆ. 98 ವರ್ಷದ ಎಲ್. ಕೆ. ಅಡ್ವಾಣಿ, ಅವರ ಮಗಳು ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರ ಹೆಸರು 2002ರ ಎಸ್‌ಐಆರ್ ಮತದಾರರ ಪಟ್ಟಿಯೊಂದಿಗೆ ಲಿಂಕ್ ಆಗದ ಹಿನ್ನೆಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ.
ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅವರ ಪತ್ನಿ ಸೀಮಾ ಮತ್ತು ಮಗ ಮೀರ್ ಸಿಸೋಡಿಯಾ ಅವರಿಗೂ ನೋಟೀಸ್ ನೀಡಲಾಗಿದೆ. ಸಿಸೋಡಿಯಾ ಅವರಿಗೆ ನೀಡಿರುವ ನೋಟೀಸ್‌ಗೆ ಚುನಾವಣಾ ಆಯೋಗವು ನಿರ್ದಿಷ್ಟ ಕಾರಣ ತಿಳಿಸಿಲ್ಲವಾದರೂ, ಅವರ ಮಗ ಮೀರ್ ಅವರ ನೋಟಿಸ್‌ನಲ್ಲಿ ಪೋಷಕರ ಹೆಸರಿನಲ್ಲಿ ವ್ಯತ್ಯಾಸ ಮತ್ತು ಪತ್ನಿ ಸೀಮಾ ಅವರ ನೋಟೀಸ್‌ನಲ್ಲಿ ಸ್ವಯಂ ಹೆಸರಿನಲ್ಲಿ ವ್ಯತ್ಯಾಸ ಎಂದು ನಮೂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರು ಸಲ್ಲಿಸಿದ ನಮೂನೆಗಳಲ್ಲಿನ ತಾರ್ಕಿಕ ವ್ಯತ್ಯಾಸಗಳಿಂದ ಈ ನೋಟೀಸ್‌ಗಳು ಜಾರಿಯಾಗಿವೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಅಡ್ವಾಣಿ ಮತ್ತು ಸಿಸೋಡಿಯಾ ಅವರು ನೋಟೀಸ್ ಪಡೆದ 33.13 ಲಕ್ಷ ಮತದಾರರ ಪಟ್ಟಿಯಲ್ಲಿದ್ದಾರೆ ಎಂಬುದನ್ನು ದೃಢೀಕರಿಸಿದ ಅವರು, ಮತದಾರರು ಸಲ್ಲಿಸುವ ದಾಖಲೆಗಳು ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ತಾಯಿಗೆ ನೋಟಿಸ್ ಕೊಟ್ಟಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ, ಎಸ್‌ಐಆರ್ ಪರಿಶೀಲನೆ ಹೇಗಿರಲಿದೆ ಎಂಬ ವಿವರ ಇಲ್ಲಿದೆ
ಕೇಂದ್ರ ಸಚಿವ ಎಸ್. ಜೈಶಂಕರ್ ಮತ್ತು ಅವರ ಪತ್ನಿಯನ್ನು ಹಿಂದಿನ ಎಸ್‌ಐಆರ್‌ನೊಂದಿಗೆ ಹೊಂದಾಣಿಕೆಯಾಗದ ವಿಭಾಗದಲ್ಲಿ ಇರಿಸಲಾಗಿದೆ. ಅಂದರೆ, ಅವರ ಪ್ರಸ್ತುತ ಮತದಾರರ ವಿವರಗಳು 2002ರಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯೊಂದಿಗೆ ಲಿಂಕ್ ಆಗಿಲ್ಲ. ಇವರು ದೆಹಲಿ ವಿಧಾನಸಭಾ ಕ್ಷೇತ್ರದ ಸುಂದರ್ ಬಾಗ್ ಭಾಗದಲ್ಲಿ ನೋಂದಾಯಿತರಾಗಿದ್ದಾರೆ.
ಈ ಎಸ್‌ಐಆರ್ ಪ್ರಕ್ರಿಯೆಯಡಿಯಲ್ಲಿ ಉನ್ನತ ಸರ್ಕಾರಿ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳಿಗೆ ನೋಟಿಸ್ ಜಾರಿಯಾಗಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರಿಗೂ ಇದೇ ಕಾರಣಕ್ಕಾಗಿ ನೋಟೀಸ್ ನೀಡಲಾಗಿತ್ತು. ಸಿಎಂ ರೇಖಾ ಗುಪ್ತಾ ಅವರ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ನವೆಂಬರ್ 4ರಂದು ಪ್ರಕಟವಾಗಲಿರುವ ಶಾಲೀಮಾರ್ ಬಾಗ್ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಅನುಮೋದಿಸಲಾಗಿದೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಸೆಬಿ ಅಧ್ಯಕ್ಷ ತುಹಿನ್ ಕಾಂತ ಪಾಂಡೆ, ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್, ಮತ್ತು ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಅವರಿಗೂ ಎಸ್‌ಐಆರ್ ಅಡಿಯಲ್ಲಿ ನೋಟೀಸ್ ನೀಡಲಾಗಿದೆ. ಅಲ್ಲದೆ, ಮೀನುಗಾರಿಕೆ ಕಾರ್ಯದರ್ಶಿ ಅಭಿಲಾಷ್ ಲಿಖಿ, ಅವರ ಪತ್ನಿ ಸುಕೃತಿ ಲಿಖಿ, ರಸಗೊಬ್ಬರ ಕಾರ್ಯದರ್ಶಿ ರಜತ್ ಕುಮಾರ್ ಮಿಶ್ರಾ ಮತ್ತು ಭೂ ಸಂಪನ್ಮೂಲ ಕಾರ್ಯದರ್ಶಿ ನರೇಂದ್ರ ಭೂಷಣ್ ಅವರ ಹೆಸರುಗಳೂ ಈ ಪಟ್ಟಿಯಲ್ಲಿವೆ.
ಇದನ್ನೂ ಓದಿ: SIR: ಎಸ್‌ಐಆರ್ ಫಾರ್ಮ್‌ಗಳಲ್ಲಿ 2002ರ ಮಾಹಿತಿ ಕಡ್ಡಾಯವಲ್ಲ; ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ
ಕಳೆದ 2002ರ ಎಸ್‌ಐಆರ್ ಮತದಾರರ ಪಟ್ಟಿಯೊಂದಿಗೆ ಲಿಂಕ್ ಆಗದ ಅಥವಾ ಹಿಂದಿನ ಪಟ್ಟಿಗೆ ಹೋಲಿಸಿದಾಗ ವ್ಯತ್ಯಾಸ ಕಂಡುಬಂದ ಮತದಾರರಿಗೆ ಈ ನೋಟೀಸ್‌ಗಳನ್ನು ನೀಡಲಾಗುತ್ತಿದೆ ಎಂದು ದೆಹಲಿ ಸಿಇಒ ಕಚೇರಿ ತಿಳಿಸಿದೆ. ಜೂನ್ 30ರಿಂದ ಆಗಸ್ಟ್ 17ರವರೆಗೆ ನಡೆದ ಮನೆ-ಮನೆ ಪರಿಶೀಲನೆ ವೇಳೆ ಪ್ರತಿಯೊಬ್ಬ ಮತದಾರರು ಈ ನಮೂನೆಯನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು.
ಕರಡು ಪಟ್ಟಿಯಲ್ಲಿರುವ ಸುಮಾರು 97 ಲಕ್ಷ ಮತದಾರರಲ್ಲಿ, 33.13 ಲಕ್ಷ ಮತದಾರರ ಅರ್ಜಿಗಳಲ್ಲಿ ವ್ಯತ್ಯಾಸಗಳನ್ನು ಗುರುತಿಸಲಾಗಿದ್ದು, ಈವರೆಗೆ 31.63 ಲಕ್ಷಕ್ಕೂ ಹೆಚ್ಚು ನೋಟೀಸ್‌ಗಳನ್ನು ಜಾರಿ ಮಾಡಲಾಗಿದೆ. ಹೆಚ್ಚಿನ ನೋಟೀಸ್‌ಗಳು 2002ರ ಎಸ್‌ಐಆರ್ ಪಟ್ಟಿಯಲ್ಲಿ ಸಂಬಂಧಿತ ದಾಖಲೆಗಳಿಲ್ಲದ ಕಾರಣಕ್ಕಾಗಿ ಜಾರಿಯಾಗಿವೆ.
ಎಸ್‌ಐಆರ್ ನೋಟೀಸ್‌ನ ಅರ್ಥವೇನು?
ನೋಟೀಸ್ ಬಂದ ತಕ್ಷಣವೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ ಎಂದರ್ಥವಲ್ಲ ಎಂದು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. “ಇಸಿಐನೆಟ್ ವ್ಯವಸ್ಥೆಯಲ್ಲಿ ವಿವರಗಳನ್ನು ಸರಿಪಡಿಸಲು ಈ ನೋಟೀಸ್‌ಗಳನ್ನು ಜಾರಿ ಮಾಡಲಾಗುತ್ತಿದೆ. ಆಕ್ಷೇಪಣೆ ಸಲ್ಲಿಸಲು ಸೂಕ್ತ ಅವಕಾಶ ನೀಡದೆ ಮತ್ತು ಅಧಿಕೃತ ಆದೇಶ ಹೊರಡಿಸದೆ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕುವುದಿಲ್ಲ” ಎಂದು ಸಿಇಒ ತಿಳಿಸಿದ್ದಾರೆ. ಈ ನೋಟೀಸ್‌ಗಳ ವಿಲೇವಾರಿ ಪ್ರಕ್ರಿಯೆಯು ಅಕ್ಟೋಬರ್ 29ರೊಳಗೆ ಪೂರ್ಣಗೊಳ್ಳಲಿದ್ದು, ಅಂತಿಮ ಮತದಾರರ ಪಟ್ಟಿಯು ನವೆಂಬರ್ 4ರಂದು ಪ್ರಕಟವಾಗಲಿದೆ.
ಕೇಜ್ರಿವಾಲ್ ಕುಟುಂಬಕ್ಕೂ ಬಂದಿತ್ತು ನೋಟೀಸ್:
ಕೆಲವೇ ದಿನಗಳ ಹಿಂದೆಯಷ್ಟೇ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರಿಗೂ ಎಸ್‌ಐಆರ್ ಅಡಿಯಲ್ಲಿ ನೋಟೀಸ್ ನೀಡಲಾಗಿತ್ತು. ಕೇಜ್ರಿವಾಲ್, ಅವರ ಪತ್ನಿ ಸುನೀತಾ, ಪೋಷಕರಾದ ಗೋವಿಂದ್ ರಾಮ್ ಕೇಜ್ರಿವಾಲ್ ಮತ್ತು ಗೀತಾ ದೇವಿ ಹಾಗೂ ಮಗ ಪುಲ್ಕಿತ್ ಕೇಜ್ರಿವಾಲ್ ಅವರ ಹೆಸರುಗಳು ಹೊಂದಾಣಿಕೆಯಾಗದ ವಿಭಾಗದಲ್ಲಿದ್ದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ