ದೆಹಲಿ ಮೇ 29: ಭಾರತದ ಹವಾಮಾನ ಇಲಾಖೆ (IMD) ಪ್ರಕಾರ, ದೆಹಲಿಯಲ್ಲಿ (Delhi) ತಾಪಮಾನವು (Temperature) 52.3 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದು ದಾಖಲೆ ಆಗಿದ್ದು ದೆಹಲಿಯ ಉಪನಗರವಾದ ಮುಂಗೇಶ್‌ಪುರದಲ್ಲಿ ಇಷ್ಟೊಂದು ಬಿಸಿಲು ದಾಖಲಾಗಿದೆ. ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂಗೇಶಪುರದ ಹವಾಮಾನ ಕೇಂದ್ರವು 52.3 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದರೆ, ನರೇಲಾದಲ್ಲಿ ಮಧ್ಯಾಹ್ನ 2.30 ಕ್ಕೆ 47.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಂಗಳವಾರ, ವಾಯುವ್ಯ ದೆಹಲಿ ಪ್ರದೇಶದ ಹವಾಮಾನ ಕೇಂದ್ರವು 49.9 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಇದು ದೆಹಲಿಯಲ್ಲಿ ಇದುವರೆಗೆ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಐಎಂಡಿಯ ಮುನ್ಸೂಚನೆಯು ಮುಂಬರುವ ದಿನಗಳಲ್ಲಿ ಇಲ್ಲಿ ಬಿಸಿಲ ಕಾವು ಏರಬಹುದು ಎಂಬುದನ್ನು ಸೂಚಿಸುತ್ತದೆ. “ಪಂಜಾಬ್, ಹರ್ಯಾಣ ಮತ್ತು ಚಂಡೀಗಢದ ಹೆಚ್ಚಿನ ಸ್ಥಳಗಳಲ್ಲಿ, ದೆಹಲಿ, ಉತ್ತರ ಪ್ರದೇಶ, ಮತ್ತು ರಾಜಸ್ಥಾನದ ಮೇಲೆ ಮತ್ತು ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿಲು ಹೆಚ್ಚಾಗಬಹುದು. ಪಂಜಾಬ್, ಹರ್ಯಾಣ, ಚಂಡೀಗಢ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ರಾತ್ರಿ ಹೊತ್ತು ಸೆಖೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ. ಎಲ್ಲಾ ವಯಸ್ಸಿನವರಿಗೂ ಶಾಖದ ಕಾಯಿಲೆ ಮತ್ತು ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆ ಇದೆ. ದುರ್ಬಲ ಜನರು ತೀವ್ರ ಕಾಳಜಿ ವಹಿಸಬೇಕು ಎಂದು ಐಎಂಡಿ ಹೇಳಿದೆ.
ಬಿಸಿಲ ಧಗೆ ಏರಿದ್ದು , ಕೆಲವು ಪ್ರದೇಶಗಳಿಗೆ ಸರಬರಾಜನ್ನು ಕಡಿತಗೊಳಿಸುವುದರಿಂದ ನವದೆಹಲಿ ಅಧಿಕಾರಿಗಳು ನೀರಿನ ಕೊರತೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನೀರನ್ನು ವ್ಯರ್ಥ ಮಾಡದೇ ಇರುವುದು “ಸಾಮೂಹಿಕ ಜವಾಬ್ದಾರಿ” ಎಂದು ದೆಹಲಿ ಜಲ ಸಚಿವೆ ಅತಿಶಿ ಕರೆ ನೀಡಿದ್ದಾರೆ.
ಇದನ್ನೂ ಓದಿ: ‘ಮೋದಿಯನ್ನು ಸೋಲಿಸಿ’ ಎಂದು ಬಹಿರಂಗ ಕರೆ ನೀಡಿದ ಪಾಕಿಸ್ತಾನದ ಮಾಜಿ ಸಚಿವ
ಮೇ 30 ರಿಂದ ಚಾಲ್ತಿಯಲ್ಲಿರುವ ಶಾಖದ ಅಲೆಯ ಪರಿಸ್ಥಿತಿಗಳು ಕ್ರಮೇಣ ಕಡಿಮೆಯಾಗುವ ಮುನ್ಸೂಚನೆಯಿರುವುದರಿಂದ ವಾಯುವ್ಯ ಮತ್ತು ಮಧ್ಯ ಭಾರತದ ನಿವಾಸಿಗಳು ಸ್ವಲ್ಪ ಬಿಡುವು ನಿರೀಕ್ಷಿಸಬಹುದು. ಈ ಪ್ರದೇಶಗಳಲ್ಲಿ ಮುಂದಿನ 3-4 ದಿನಗಳಲ್ಲಿ ಗರಿಷ್ಠ ತಾಪಮಾನವು 3-4 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ಆಗಲಿದೆ.
ನಾಳೆಯಿಂದ ಪಂಜಾಬ್, ಹರ್ಯಾಣ-ಚಂಡೀಗಢ-ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬಿಸಿಗಾಳಿಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ. ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಜೂನ್ 1 ರವರೆಗೆ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖದ ಅಲೆ ಇದ್ದೇ ಇರುತ್ತದೆ ಎಂದು ಐಎಂಡಿ ಹೇಳಿದೆ.
ದಾಖಲೆ ತಾಪಮಾನದಿಂದ ತತ್ತರಿಸಿದ್ದ ದೆಹಲಿಯಲ್ಲಿ ಬುಧವಾರ ಸಂಜೆ ಹೊತ್ತಿಗೆ ತುಂತುರು ಮಳೆಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Wed, 29 May 24