ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಬಿಜೆಪಿ ನಾಯಕರ ವಿರುದ್ಧ ಸಿಎಂ ಫಡ್ನವೀಸ್ ವಾಗ್ದಾಳಿ, ಕಠಿಣ ಕ್ರಮದ ಎಚ್ಚರಿಕೆ

ಕಾಂಗ್ರೆಸ್ ಜೊತೆಗಿನ ಮೈತ್ರಿಗಾಗಿ ಬಿಜೆಪಿ ನಾಯಕರ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಾಗ್ದಾಳಿ ನಡೆಸಿದ್ದಾರೆ. ಸ್ಥಳೀಯ ಬಿಜೆಪಿ ಘಟಕಗಳು ಪ್ರತಿಸ್ಪರ್ಧಿ ಪಕ್ಷಗಳೊಂದಿಗೆ ಚುನಾವಣಾ ನಂತರದ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂತಹ ಸಂಬಂಧಗಳನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ನಿರ್ದೇಶಿಸಿದ್ದಾರೆ. ಅಂಬರ್ನಾಥ್‌ನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಹಿಂದೆ ಸರಿಯುವಂತೆ ಅವರು ಬಿಜೆಪಿ ಘಟಕಗಳಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಬಿಜೆಪಿ ನಾಯಕರ ವಿರುದ್ಧ ಸಿಎಂ ಫಡ್ನವೀಸ್ ವಾಗ್ದಾಳಿ, ಕಠಿಣ ಕ್ರಮದ ಎಚ್ಚರಿಕೆ
Fadnavis

Updated on: Jan 07, 2026 | 4:35 PM

ಮುಂಬೈ, ಜನವರಿ 7: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು (ಜನವರಿ 7) ಕಾಂಗ್ರೆಸ್ ಜೊತೆಗಿನ ಯಾವುದೇ ಮೈತ್ರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಹ ಒಪ್ಪಂದವನ್ನು “ಸ್ವೀಕಾರಾರ್ಹವಲ್ಲ” ಎಂದು ಕರೆದಿದ್ದಾರೆ. ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ (BJP) ನಾಯಕರು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಫಡ್ನವೀಸ್ ಅಸಮಾಧಾನ ಹೊರಹಾಕಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ. ಅಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ ಎಂದು ವರದಿಯಾಗಿದೆ. ಈ ಕ್ರಮವು ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ, ರಾಜ್ಯಪಾಲರ ಮಧ್ಯಪ್ರವೇಶವಾಗಲಿ; ಬಿಜೆಪಿ ನಾಯಕ ರವಿಕುಮಾರ್ ಆಗ್ರಹ

“ಕಾಂಗ್ರೆಸ್ ಜೊತೆಗಿನ ಮೈತ್ರಿ ಸ್ವೀಕಾರಾರ್ಹವಲ್ಲ. ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ” ಎಂದು ಫಡ್ನವೀಸ್ ಹೇಳಿದ್ದಾರೆ.

“ಕಾಂಗ್ರೆಸ್ ಮುಕ್ತ ಭಾರತ”ಕ್ಕಾಗಿ ಬಿಜೆಪಿಯ ದೀರ್ಘಕಾಲದ ಅಭಿಯಾನದ ಹೊರತಾಗಿಯೂ ಮುಂಬೈನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಅಂಬರ್ನಾಥ್​​ನಲ್ಲಿ ಶಿವಸೇನೆಯ ಶಿಂಧೆ ಬಣವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದಾಗಿ ಬಿಜೆಪಿ-ಕಾಂಗ್ರೆಸ್ ಮೈತ್ರಿಯು ರಾಜಕೀಯ ವಲಯಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಲ್ಲಿನ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟಕ್ಕೆ ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಬೆಳವಣಿಗೆಗಳು ಶಿವಸೇನೆಯ ಶಿಂಧೆ ಬಣದಲ್ಲಿ ಗಮನಾರ್ಹ ಅಸಮಾಧಾನವನ್ನು ಉಂಟುಮಾಡಿದೆ. ಬಿಜೆಪಿ-ಕಾಂಗ್ರೆಸ್ ಮೈತ್ರಿಕೂಟದ ನಂತರ ಶಿಂಧೆ ಬಣವು ಕೋಪಗೊಂಡಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ

ಶಿವಸೇನೆಯ ಶಿಂಧೆ ಬಣದ ಭದ್ರಕೋಟೆ ಎಂದು ಅಂಬರ್ನಾಥ್ ಪರಿಗಣಿಸಲಾಗಿದೆ. ಏಕನಾಥ್ ಶಿಂಧೆ ಅವರ ಮಗ ಶ್ರೀಕಾಂತ್ ಶಿಂಧೆ ಈ ಕ್ಷೇತ್ರದ ಸಂಸದರಾಗಿದ್ದಾರೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಶಿಂಧೆ ಬಣವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಸ್ವಲ್ಪ ಕಡಿಮೆ ಇತ್ತು. ಬಿಜೆಪಿಯ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡಲಾಯಿತು. ಮುನ್ಸಿಪಲ್ ಕೌನ್ಸಿಲ್ ಸರ್ಕಾರ ರಚಿಸಲು ಬಿಜೆಪಿ ತಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಶಿಂಧೆ ಬಣ ನಿರೀಕ್ಷಿಸಿತ್ತು. ಆದರೆ, ಅನಿರೀಕ್ಷಿತ ತಿರುವಿನಲ್ಲಿ ಶಿಂಧೆ ಬಣವನ್ನು ಬೈಪಾಸ್ ಮಾಡಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ಕೌನ್ಸಿಲ್ ಸರ್ಕಾರವನ್ನು ಬಿಜೆಪಿ ರಚಿಸಿತು. ಈ ನಿರ್ಧಾರವು ತೀಕ್ಷ್ಣವಾದ ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Wed, 7 January 26