Explainer: ಲಸಿಕೆ ಸರ್ಟಿಫಿಕೇಟ್ನಲ್ಲಿ ಯೂನಿಕ್ ಹೆಲ್ತ್ ಐಡಿ: ಏನಿದರ ವೈಶಿಷ್ಟ್ಯ? ಏನೆಲ್ಲಾ ಅನುಕೂಲ? ಏಕಿಷ್ಟು ಗೊಂದಲ?
Digital Health ID: ಜನರಿಗೆ ಗೊತ್ತಿಲ್ಲದಂತೆಯೇ ಅವರ ಯೂನಿಕ್ ಹೆಲ್ತ್ ಐಡಿ ಹೇಗೆ ಜನರೇಟ್ ಆಗುತ್ತಿದೆ? ಇದರಿಂದ ಜನರಿಗೆ ಆಗುವ ಅನುಕೂಲಗಳೇನು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.
ಮೊದಲ ಡೋಸ್ ಕೊರೊನಾ ಲಸಿಕೆ ಪಡೆಯಲು ಆಧಾರ್ ಕಾರ್ಡ್ ಸಂಖ್ಯೆ ನೀಡಿದವರ ಲಸಿಕೆಯ ಸರ್ಟಿಫೀಕೇಟ್ ನಲ್ಲಿ ಯೂನಿಕ್ ಹೆಲ್ತ್ ಐಡಿ ಜನರೇಟ್ ಆಗುತ್ತಿದೆ. ಜನರಿಗೆ ಗೊತ್ತಿಲ್ಲದಂತೆಯೇ ಅವರ ಯೂನಿಕ್ ಹೆಲ್ತ್ ಐಡಿ ಹೇಗೆ ಜನರೇಟ್ ಆಗುತ್ತಿದೆ? ಇದರಿಂದ ಜನರಿಗೆ ಆಗುವ ಅನುಕೂಲಗಳೇನು ಎನ್ನುವುದರ ಡೀಟೈಲ್ಸ್ ಇಲ್ಲಿದೆ ನೋಡಿ.
ನಮ್ಮ ದೇಶದಲ್ಲಿ ಜನವರಿ 16ರಿಂದ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಲಸಿಕೆಯನ್ನು ಪಡೆಯುವಾಗ ಯಾವುದಾದರೊಂದು ಗುರುತಿನ ಚೀಟಿ ನೀಡುವುದು ಕಡ್ಡಾಯ. ಲಸಿಕೆ ಪಡೆಯುವ ವೇಳೆ ಯಾರಾದರೂ ತಮ್ಮ ಆಧಾರ್ ಸಂಖ್ಯೆಯನ್ನು ನೀಡಿದರೆ, ಅವರು ಕೊರೊನಾ ಲಸಿಕೆಯನ್ನು ಪಡೆದ ಬಳಿಕ ಅವರ ಲಸಿಕೆಯ ಸರ್ಟಿಫಿಕೇಟ್ನಲ್ಲಿ ಯೂನಿಕ್ ಹೆಲ್ತ್ ಐಡಿ ಸಂಖ್ಯೆ ಕೂಡ ಜನರೇಟ್ ಆಗಿ ಬಂದಿರುತ್ತೆ. ಇದನ್ನ ಬಹಳಷ್ಟು ಮಂದಿ ಸೂಕ್ಷ್ಮವಾಗಿ ಗಮನಿಸಿಲ್ಲ. ಜನರಿಗೆ ಗೊತ್ತೇ ಇಲ್ಲದಂತೆ, ಅವರ ಯೂನಿಕ್ ಹೆಲ್ತ್ ಐಡಿ ಸಂಖ್ಯೆ ಕೂಡ ಜನರೇಟ್ ಆಗಿ ಬರುತ್ತಿದೆ. ಬಹಳಷ್ಟು ಜನರಿಗೆ ಯೂನಿಕ್ ಹೆಲ್ತ್ ಐಡಿ ಸಂಖ್ಯೆ ಯಾವುದು? ಇದರಿಂದ ಏನು ಪ್ರಯೋಜನ? ಏಕೆ ಈ ಯೂನಿಕ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಆಧಾರ್ ಸಂಖ್ಯೆ ನೀಡಿ ಕೊರೊನಾ ಲಸಿಕೆ ಪಡೆದವರ ಲಸಿಕೆಯ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೊರೊನಾ ಲಸಿಕೆ ಪಡೆಯಲು ಆಸ್ಪತ್ರೆ ಇಲ್ಲವೇ ಲಸಿಕಾ ಕೇಂದ್ರಕ್ಕೆ ಬರುತ್ತಾರೆ. ಹೀಗಾಗಿ ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡಲು ಇದು ಸೂಕ್ತ ಸಮಯ ಎಂದು ಸರ್ಕಾರ ನಿರ್ಧರಿಸಿದಂತಿದೆ. ಲಸಿಕೆ ಪಡೆಯುವಾಗ ಯಾವುದಾದರೊಂದು ಪೋಟೋ ಐಡಿ ಕಾರ್ಡ್ ನೀಡಬೇಕು. ಆಧಾರ್ ಸಂಖ್ಯೆಯನ್ನು ನೀಡಿದವರ ವಿವರವನ್ನು ಕಂಪ್ಯೂಟರಿನಲ್ಲಿ ದಾಖಲಿಸಿ, ಆಧಾರ್ ಸಂಖ್ಯೆಗೆ ಲಿಂಕ್ ಮಾಡಿ ಲಸಿಕೆಯ ಸರ್ಟಿಫಿಕೇಟ್ ಮೇಲೆ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆ ಜನರೇಟ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ನಡಿ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲಾಗುತ್ತಿದೆ. ಜನರ ಆರೋಗ್ಯ ಹಾಗೂ ಆರೋಗ್ಯ ಸೇವೆಯ ಡಿಜಿಟಲೀಕರಣವೇ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ನ ಗುರಿಯಾಗಿದೆ. ಹೆಲ್ತ್ ಐಡಿ ಜನರೇಟ್ ಮಾಡುವುದೂ ಸೇರಿದಂತೆ ಇತರ ವಿವರಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ವೆಬ್ಸೈಟ್ https://ndhm.gov.in/ ನೋಡಿ.
ಇದನ್ನೂ ಓದಿ: ಕೊವಿಡ್ ಲಸಿಕೆ ಮಾರಾಟ ದರಪಟ್ಟಿ ಪರಿಷ್ಕರಿಸಿದ ಕೇಂದ್ರ ಸರ್ಕಾರ; ಖಾಸಗಿ ಆಸ್ಪತ್ರೆಗಳಲ್ಲಿ ಯಾವ ಲಸಿಕೆಗೆ ಎಷ್ಟು ಬೆಲೆ?
ನ್ಯಾಷನಲ್ ಡಿಜಿಟಲ್ ಮಿಷನ್ ಉದ್ದೇಶವೇನು? ಕಳೆದ ವರ್ಷದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಮಾಡಿದ್ದ ಭಾಷಣದಲ್ಲಿ ನಮ್ಮ ದೇಶದಲ್ಲಿ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಜಾರಿಗೆ ತರುವ ಘೋಷಣೆ ಮಾಡಿದ್ದರು. ಈ ಯೋಜನೆಯನ್ನು ಈಗಾಗಲೇ ದೇಶದ ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ ವರ್ಷದಿಂದಲೇ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸಲಾಗುತ್ತಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಯಶಸ್ವಿಯಾದರೆ, ದೇಶಾದ್ಯಂತ ಯೋಜನೆಯನ್ನು ವಿಸ್ತರಿಸುವುದು ಕೇಂದ್ರದ ಉದ್ದೇಶ. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ನಡಿ ದೇಶದ ಆರೋಗ್ಯ ಸೇವೆಯನ್ನು ಡಿಜಿಟಲೀಕರಣ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ ಹಾಗೂ ಗುರಿ.
ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಯಡಿ ಪ್ರತಿ ವ್ಯಕ್ತಿಗೂ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ನೀಡಲಾಗುತ್ತೆ. ಹೀಗೆ ಡಿಜಿಟಲ್ ಹೆಲ್ತ್ ಐಡಿ ಪಡೆಯುವುದು, ಬಿಡುವುದು ವ್ಯಕ್ತಿಯ ವಿವೇಚನೆಗೆ ಬಿಟ್ಟ ವಿಚಾರ. ಇಷ್ಟವಿಲ್ಲದಿದ್ದರೆ, ಯೋಜನೆಯಿಂದ ಹೊರಗೆ ಉಳಿಯಬಹುದು. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ಗೆ ಒಳಪಡಲು ಬಯಸುವವರು ತಮ್ಮ ಆಧಾರ್ ಸಂಖ್ಯೆ ಇಲ್ಲವೇ ಮೊಬೈಲ್ ಸಂಖ್ಯೆ ನೀಡಿ, ನೋಂದಣಿ ಮಾಡಿಸಿಕೊಳ್ಳಬಹುದು. ಬಳಿಕ ಅವರಿಗೆ ಹೆಲ್ತ್ ಡಿಜಿಟಲ್ ಐಡಿ ಸಂಖ್ಯೆಯನ್ನು ನೀಡಲಾಗುತ್ತೆ.
ನ್ಯಾಷನಲ್ ಡಿಜಿಟಲ್ ಐಡಿ ಸಂಖ್ಯೆ ಪಡೆದರೆ, ಅವರ ಆರೋಗ್ಯ ಸ್ಥಿತಿಗತಿ, ರೋಗಗಳು, ಚಿಕಿತ್ಸೆ, ವೈದ್ಯಕೀಯ ಪರೀಕ್ಷೆಯ ಎಲ್ಲ ವಿವರಗಳನ್ನು ಕಂಪ್ಯೂಟರಿನಲ್ಲಿ ದಾಖಲಿಸಿ ಅಪ್ಡೇಟ್ ಮಾಡಲಾಗಿರುತ್ತೆ. ವ್ಯಕ್ತಿಯ ರಕ್ತದ ಗುಂಪಿನಿಂದ ಹಿಡಿದು, ಆತನಿಗೆ ಇದುವರೆಗೂ ಆದ ಅಪರೇಷನ್, ಪಡೆದ ಚಿಕಿತ್ಸೆ ಎಲ್ಲವನ್ನೂ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿರುತ್ತೆ. ವ್ಯಕ್ತಿಯ ವೈದ್ಯಕೀಯ ದಾಖಲೆಗಳೆಲ್ಲಾ ಡಿಜಿಟಲ್ ಆಗಿ ವೆಬ್ಸೈಟ್ನಲ್ಲಿ ಲಭ್ಯವಿರುತ್ತವೆ. ಕೇವಲ ಡಿಜಿಟಲ್ ಹೆಲ್ತ್ ಐಡಿಯನ್ನು ಆಸ್ಪತ್ರೆಗೆ ನೀಡುವ ಮೂಲಕ ಪೂರ್ಣ ವಿವರವನ್ನು ಪಡೆಯಲು ಅವಕಾಶ ಇದೆ. ಆಸ್ಪತ್ರೆಗಳ ವೈದ್ಯರು ಮಾತ್ರ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ವೆಬ್ಸೈಟ್ಗೆ ಲಾಗಿನ್ ಆಗಿ ರೋಗಿಯ ವಿವರವನ್ನು ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆ ನೀಡಿದ ಬಳಿಕ ಪಡೆಯಲು ಅವಕಾಶ ಸಿಗಲಿದೆ. ವ್ಯಕ್ತಿಯು ತನ್ನ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ನೀಡದಿದ್ದರೆ, ಯಾರಿಗೂ ವ್ಯಕ್ತಿಯ ಆರೋಗ್ಯದ ವಿವರ ಪಡೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: PM Narendra Modi ಜೂನ್ 21ರ ನಂತರ ಎಲ್ಲ ರಾಜ್ಯಗಳಿಗೂ ಕೇಂದ್ರದಿಂದ ಉಚಿತ ಲಸಿಕೆ: ನರೇಂದ್ರ ಮೋದಿ
ಜನರ ಒಪ್ಪಿಗೆ ಇಲ್ಲದೆ ಜನರೇಟ್ ಆಗ್ತಿದೆ ಹೆಲ್ತ್ ಐಡಿ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ನಡಿ ವ್ಯಕ್ತಿಗಳ ಡಿಜಿಟಲ್ ಐಡಿ ಜನರೇಟ್ ಮಾಡಲು ಜನರ ಒಪ್ಪಿಗೆ ಬೇಕು. ಆದರೆ, ಈಗ ಜನರ ಒಪ್ಪಿಗೆಯೇ ಇಲ್ಲದೇ ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡಲಾಗುತ್ತಿದೆ. ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಆಧಾರ್ ಸಂಖ್ಯೆ ನೀಡಿದ್ದನ್ನೇ ಬಳಸಿಕೊಂಡು ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆಯನ್ನು ಜನರೇಟ್ ಮಾಡಲು ವ್ಯಕ್ತಿಯ ಹೆಸರು, ಹುಟ್ಟಿದ ವರ್ಷ, ಲಿಂಗ, ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ವಿವರ ಬೇಕು. ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ, ಡಿಜಿಟಲ್ ಹೆಲ್ತ್ ಐಡಿ ಜನರೇಟ್ ಮಾಡಲು ಆಧಾರ್ ಸಂಖ್ಯೆ ಕಡ್ಡಾಯವಲ್ಲ. ಆಧಾರ್ ಸಂಖ್ಯೆಯನ್ನು ಬಳಸಿ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆ ಸೃಷ್ಟಿಸಲು ಆಧಾರ್ ಕಾಯ್ದೆಯ ಸೆಕ್ಷನ್ 4ರ ಅಡಿ ಅಧಿಸೂಚನೆ ಹೊರಡಿಸಬೇಕೆಂದು ವೆಬ್ಸೈಟ್ನಲ್ಲಿ ಹೇಳಲಾಗಿದೆ. ಹೀಗಾಗಿ ಇಷ್ಟ ಇದ್ದವರು ಮಾತ್ರವೇ ತಮ್ಮ ವಿವರಗಳನ್ನು ನೀಡಿ, ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆ ಸೃಷ್ಟಿಸಬಹುದು. ಈಗ ಲಸಿಕಾ ಕೇಂದ್ರಗಳಲ್ಲಿ ಜನರ ಒಪ್ಪಿಗೆಯನ್ನು ಪಡೆಯದೇ, ಡಿಜಿಟಲ್ ಹೆಲ್ತ್ ಐಡಿ ಸೃಷ್ಟಿಸಲಾಗುತ್ತಿದೆ ಎಂದು ಜನರು ದೂರುತ್ತಿದ್ದಾರೆ.
‘ನನ್ನ ಡಿಜಿಟಲ್ ಐಡಿ ಸಂಖ್ಯೆ ಸೃಷ್ಟಿಸಿರುವುದು ನನಗೆ ಗೊತ್ತಿಲ್ಲ. ಕೊರೊನಾ ಲಸಿಕೆ ಪಡೆಯಲು ಆಧಾರ್ ಸಂಖ್ಯೆ ನೀಡಿದ್ದೆ. ಆದರೇ, ಈಗ ಲಸಿಕೆ ಸರ್ಟಿಫಿಕೇಟ್ನಲ್ಲಿ ಡಿಜಿಟಲ್ ಹೆಲ್ತ್ ಐಡಿ ಸಂಖ್ಯೆ ಕೂಡ ಜನರೇಟ್ ಆಗಿ ಬಂದಿದೆ’ ಎಂದು ಕೊಡಗಿನ ದೇವಯ್ಯ ಹೇಳುತ್ತಾರೆ.
We embark on a major movement related to the health sector- start of the National Digital Health Mission.
This Mission will leverage the power of technology to create a healthier India. #AatmaNirbharBharat pic.twitter.com/qzlNN9RPsi
— Narendra Modi (@narendramodi) August 15, 2020
(Digital Health ID on Corona Vaccination Certificate Uses of Health ID Controversy around allotment)
ಇದನ್ನೂ ಓದಿ: ಲಸಿಕೆ ಪ್ರಮಾಣಪತ್ರದ ಮೇಲೆ ಡಿಜಿಟಲ್ ಐಡಿ ನಮೂದು? ಸಮಾಜದಲ್ಲಿ ಮೂಡಿದೆ ಪ್ರಶ್ನೆ
ಇದನ್ನೂ ಓದಿ: CoWIN vaccine certificate ಕೊವಿನ್ ಲಸಿಕೆ ಪ್ರಮಾಣ ಪತ್ರದಲ್ಲಿ ತಪ್ಪು ಇದ್ದರೆ ಸರಿ ಮಾಡುವುದು ಹೇಗೆ?